ವೈಜ್ಞಾನಿಕ ಸಲಹೆ ಪಡೆದು ಕೃಷಿ ಮಾಡಿ
ನವಲಗುಂದ: ರೈತರು, ರೈತ ಮಹಿಳೆಯರ ಅನುಕೂಲಕ್ಕೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕೃಷಿ ತಜ್ಞರು, ಕೃಷಿ ಅಧಿಕಾರಿಗಳು ನೀಡುವ ವೈಜ್ಞಾನಿಕ ಸಲಹೆಗಳನ್ನು ಪಡೆದು ದಿನನಿತ್ಯದ ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆಂದು ಧ.ಗ್ರಾ. ಯೋಜನೆ ನಿರ್ದೇಶಕ ಎಸ್. ಸೀತಾರಾಮಶೆಟ್ಟಿ ಸಲಹೆ ನೀಡಿದರು.
ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃವಿವಿ ವಿಸ್ತರಣಾ ಘಟಕ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ಅವರು, ಯೋಜನಾಧಿಕಾರಿ ಸತೀಶ್ ಎಚ್,ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು. ಸಹಾಯಕ ಕೃಷಿ ನಿರ್ದೇಶಕ ವಿ.ವಿ. ವಿಠಲರಾವ್ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ ಗೋವಿಂದರೆಡ್ಡಿ ಕಿರೇಸೂರ ಕೃಷಿ ತಜ್ಞರು ನೀಡುವ ಸಲಹೆಗಳು ನಮ್ಮ ಬೆಳೆಗಳ ಇಳುವರಿ ಹೆಚ್ಚಿಸಲು ಸಹಕಾರಿಯಾಗಿರುತ್ತವೆ. ಅವರ ಸಲಹೆಯನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದರು.
ಬೇಸಾಯ ತಜ್ಞ ಡಾ. ಎಚ್.ಟಿ. ಚಂದ್ರನಾಥ, ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಕುಸುಬೆ, ಗೋದಿ ಇತ್ಯಾದಿ ಬೇಸಾಯ ಪದ್ಧತಿ ವಿವರಿಸಿದರು. ಸಸ್ಯರೋಗ ತಜ್ಞ ಡಾ. ಬಿ.ಸಿ. ಕಾಮಣ್ಣ, ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ ಹಾಗೂ ಬೆಳೆಗಳಿಗೆ ತಗಲುವ ರೋಗದ ಲಕ್ಷಣಗಳನ್ನು ವಿವರಿಸಿ ಅವುಗಳ ಹತೋಟಿ ಕ್ರಮಕ್ಕೆ ಸಲಹೆ ನೀಡಿದರು.
ಸಸ್ಯಕೀಟ ತಜ್ಞ ಡಾ. ಎಸ್.ಎನ್. ಜಾಧವ, ವಿವಿಧ ಬೆಳೆಗಳಿಗೆ ತಗಲುವ ಕೀಟಗಳನ್ನು ಪರಿಚಯಿಸಿ, ಅವುಗಳ ಹತೋಟಿಗೆ ಸೂಕ್ಷ್ಮ ಸಲಹೆ ನೀಡಿದರು. ಅಲ್ಲದೇ ನೈಸರ್ಗಿಕವಾಗಿ ಎಲ್ಲ ರೈತರು ಕೀಟ ಹತೋಟಿ ಮಾಡುವ ಕೆಲವು ಚಟುವಟಿಕೆಗಳನ್ನು ವಿವರಿಸಿ ಪ್ರತಿ ಸಾರಿ ರಾಸಾಯನಿಕ ಕೀಟನಾಶಕ ಬಳಸದೇ ಜೈವಿಕ ಕೀಟನಾಶಕ ಬಳಸಿ ಪರಿಸರ ಕಾಪಾಡಲು ಸಲಹೆ ನೀಡಿದರು. ಮೇಲ್ವಿಚಾರಕಿ ಸುಗುಣಾ ಸ್ವಾಗತಿಸಿದರು. ಕೃಷಿ ಅಧಿಕಾರಿ ದೇವರಾಜು ನಿರೂಪಿಸಿದರು. ಕಳಸರಡ್ಡಿ ವಂದಿಸಿದರು.
--