ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಕ್ಷರಲೋಕದಲ್ಲೊಂದು ಹೊಸ ಕ್ರಾಂತಿ

Rashmi Kasaragodu
Updated On : 27 Oct 2013, 12:58 pm

ಧಾರವಾಡ: ವಿಭಿನ್ನ ಜ್ಞಾನ ಶಾಖೆಗಳಿಂದ ಬಂದ ಯುವ ತಲೆಮಾರಿನ ಲೇಖಕರು ಯಾವುದೇ ಪಂಥ, ಚಳವಳಿಗಳ ಹಂಗಿಗೊಳಗಾಗದೇ ಅಕ್ಷರಲೋಕದಲ್ಲೊಂದು ಹೊಸ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ ಎಂದು ದ.ರಾ. ಬೇಂದ್ರೆ ಗ್ರಂಥ ಬಹುಮಾನಿತ ಕೃತಿಗಳ ತೀರ್ಪುಗಾರ ಡಾ. ಎಚ್.ಬಿ. ಪೂಜಾರ ಅಭಿಪ್ರಾಯಿಸಿದರು.
ಸಾಧನಕೇರಿಯ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡ ಬೇಂದ್ರೆಯವರ 33ನೇ ಪುಣ್ಯಸ್ಮರಣೆ ಹಾಗೂ ಬೇಂದ್ರೆ ಗ್ರಂಥ ಬಹುಮಾನಿತ ಕೃತಿ ಸಮೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಮಾನಿತ ಲೇಖಕರೆಲ್ಲರೂ ದೇಶೀಯ ಭಾಷೆಯ ಲೇಪವನ್ನು ಬಳಸಿ, ತಮ್ಮ ಅನುಭವದ ವ್ಯಾಪ್ತಿಯೊಳಗೆ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ. ಇದು ಕನ್ನಡ ಸಾಹಿತ್ಯದ ಹರವು ಹೆಚ್ಚಿಸಿದೆ ಎಂದರು.
ಇನ್ನೋರ್ವ ತೀರ್ಪುಗಾರ ಪ್ರೊ. ಧರಣೇಂದ್ರ ಕುರಕುರಿ ಮಾತನಾಡಿ, ವೈಚಾರಿಕತೆಗೆ ದೇಶೀಯ ಭಾಷೆ ನಿಲುಕುವುದಿಲ್ಲವೆಂಬ ವಾದವನ್ನು ಈ ತಲೆಮಾರಿನ ಬರಹಗಾರರು ಹುಸಿಗೊಳಿಸಿದ್ದಾರೆ. ಸಂಪೂರ್ಣವಾಗಿ ಗ್ರಾಮೀಣ ಸಂವೇದನೆಯನ್ನು ಒಳಗೊಂಡ ಇವರ ಬರಹಗಳು ಸಮಾಜದ ವಾಸ್ತವ ಸ್ಥಿತಿಯನ್ನು ಕಟ್ಟಿಕೊಡುತ್ತಿವೆ ಎಂದರು.
ಟೀಕೆಗಳಿಂದ ನಮ್ಮೊಳಗಿನ ಕಸಬುಗಾರಿಕೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅನಾವರಣಗೊಳ್ಳುತ್ತ ಅದಕ್ಕೆ ಹೆದರುವ ಪ್ರಮೇಯವೇ ಇಲ್ಲ. ಹೆಸರು, ಪ್ರಶಸ್ತಿ ಸ್ವಾಭಾವಿಕವಾಗಿ ಬರಹಗಾರರ ಮೇಲೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಯುವ ಬರಹಗಾರರು ತಮ್ಮ ಮುಂದಿನ ಜೀವನದಲ್ಲಿ ಅದನ್ನು ನಿಭಾಯಿಸಿರಿ ಎಂದು ಪ್ರತಿಪಾದಿಸಿದರು.
ಹಿರಿಯ ಕವಿ, ವಿಧಾನ ಪರಿಷತ್ತಿನ ಸದಸ್ಯ ಡಾ. ಕೆ.ದೊಡ್ಡರಂಗೇಗೌಡ, ಬರಹಗಾರರ ಮೇಲೆ ಕೆಲವು ಬಾಹ್ಯ ಶಕ್ತಿಗಳು ದಾಳಿಮಾಡುತ್ತಲೇ ಇರುತ್ತವೆ. ಟೀಕೆಗಳಿಂದ ಒಳಗಾಗದ ಬದುಕು ಬದುಕೇ ಅಲ್ಲ. ವ್ಯಕ್ತಿ ಮಾಗಿದಷ್ಟು ಬಾಗುತ್ತಾನೆ, ಬರಹಗಾರ ಬಾಗಿ ನಡೆಯಬೇಕು ಎಂದರು.
ಕೃತಿಕಾರರಾದ ವಿಠ್ಠಲ ದಳವಾಯಿ, ಬಸವಣ್ಣೆಪ್ಪಾ ಕಂಬಾರ ಮತ್ತು ಟಿ.ಎಸ್. ಗೊರವರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ದುಷ್ಯಂತ ನಾಡಗೌಡ, ಎಂ. ರಮೇಶ, ಪ್ರಜ್ಞಾ ಮತ್ತಿಹಳ್ಳಿ, ಜಗದೀಶ ಮಂಗಳೂರಮಠ, ಶಶಿಧರ ನರೇಂದ್ರ, ಪ್ರಕಾಶ ಕಡಮೆ ಇದ್ದರು.
ಡಾ. ಜಯದೇವಿ ಜಂಗಮಶೆಟ್ಟಿ ಸುರ ಸಾಧನಾ ಸಂಗೀತ ಅಕಾಡೆಮಿಯ ವಿದ್ಯಾರ್ಥಿನಿಯರು ಹಾಗೂ ಮುಕುಂದ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ಶ್ರೀನಿವಾಸ ವಾಡಪ್ಪಿ ವಂದಿಸಿದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement