ಕಣ್ಣಿಗೆ ಕಾಣದ ಕನ್ನಡ ಫಲಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 26
ನಾಡಿನಲ್ಲಿ ಕನ್ನಡ ಬೆಳೆಯಬೇಕು, ಕನ್ನಡ ಆಡಳಿತ ಭಾಷೆಯಾಗಬೇಕು ಎಂದು ಸರ್ಕಾರ ಹೊರಡಿಸಿದ ಆದೇಶ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಪಾಲಿಗೆ ಕಸಕ್ಕಿಂತ ಕಡೆಯಾಗಿದೆ ಏನೋ?
ಹೌದು, ಇಂಥದ್ದೊಂದು ಸಂಶಯ ಮನದಲ್ಲಿ ಮೊಳಕೆಯೊಡಲು ಕಾರಣ ಆಡಳಿತದಲ್ಲಿ ಕನ್ನಡ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿ ಅದಕ್ಕೊಂದು ಕಾವಲು ಸಮಿತಿ ಕೂಡ ಮಾಡಿದೆ. ಆದರೆ, ಬೇರು ಮಟ್ಟದಲ್ಲಿ ನಡೆಯುತ್ತಿರುವುದೇ ಬೇರೆ, ಕಡತ, ಆದೇಶಗಳಿಗೆ ಮಾತ್ರ ಸೀಮಿತವಾದ ಕನ್ನಡ ಕಡ್ಡಾಯ, ಜನರ ನಿತ್ಯ ಬಳಕೆಯಲ್ಲಿ ಆಗುತ್ತಿಲ್ಲ.
ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಅಂಗಡಿ ಮುಗ್ಗಟ್ಟುಗಳ, ಕಂಪನಿ, ಆಫೀಸು ಮುಂತಾದವುಗಳ ನಾಮಫಲಕ ಕನ್ನಡದಲ್ಲಿರಬೇಕು ಎಂದು ಕಡ್ಡಾಯಗೊಳಿಸಿದೆ.
ವರ್ಷದ ಯಾವುದೋ ಒಂದು ದಿನ ಎಚ್ಚೆತ್ತುಕೊಳ್ಳುವ ಮಹಾನಗರ ಪಾಲಿಕೆ ಅಂಗಡಿ ಮುಂಗಟ್ಟುಗಳಿಗೆ ಅಳವಡಿಸಿರುವ ಅನ್ಯ ಭಾಷೆ ಬೋರ್ಡ್ಗಳನ್ನು ಕಿತ್ತು ಹಾಕಿ ದಂಡ ವಿಧಿಸುತ್ತದೆ. ನಂತರ ಮತ್ತೆ ಅದೇ ಪರಿಸ್ಥಿತಿ.
ವ್ಯಾಪಾರಿಗಳದ್ದು ಒಂದು ತಂತ್ರ: ಕನ್ನಡ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದ ನಂತರ ವ್ಯಾಪಾರಿಗಳು, ಉದ್ದಿಮೆಗಳೂ ಕೂಡ ತಮ್ಮ ತಂತ್ರಗಾರಿಕೆ ಸಾಬೀತುಪಡಿಸಿವೆ. ಅಂಗಡಿ, ಉದ್ದಿಮೆ ಹೆಸರನ್ನು ದೊಡ್ಡದಾಗಿ ಚೆಂದದ ವಿನ್ಯಾಸದೊಂದಿಗೆ ಇಂಗ್ಲಿಷ್ನಲ್ಲಿ ನಾಮಫಲಕ ಹಾಕುವ ವ್ಯಾಪಾರಿಗಳು ಒಂದು ಮೂಲೆಯಲ್ಲಿ ಕಂಡು ಕಾಣದಂತೆ ಸಣ್ಣ ಅಕ್ಷರಗಳಲ್ಲಿ ಕನ್ನಡವಿರುವಂತೆ ನೋಡಿಕೊಂಡು ಪಾಲಿಕೆ ಅಧಿಕಾರಿಗಳು ವಿಧಿಸುವ ದಂಡದಿಂದ ತಪ್ಪಿಸಿಕೊಳ್ಳುತ್ತಾರೆ.
ನಿತ್ಯ ವ್ಯವಹಾರಿಕ ಜೀವನದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಸರ್ಕಾರ ರೂಪಿಸಿದ ನಿಯಮ ಚಾಚೂತಪ್ಪದೆ ಜಾರಿಗೆ ತರಬೇಕಾದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಉದ್ಯಮಿಗಳ ಈ ತಂತ್ರಕ್ಕೆ ಬೇರೆ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.
ನಾಮಫಲಕದ ಪ್ರಮಾಣಕ್ಕೆ ಅನುಗುಣವಾಗಿ ಉದ್ಯಮ, ಅಂಗಡಿಗಳ ಮುಂಗಟ್ಟುಗಳ ಹೆಸರನ್ನು ಕನ್ನಡದಲ್ಲಿ ಬರೆಸಬೇಕು, ಜೊತೆಗೆ ಕನ್ನಡ ಹೊರತುಪಡಿಸಿ ಇನ್ನಾವುದೇ ಭಾಷೆಗೆ ಪ್ರಥಮ ಆದ್ಯತೆ ನೀಡಕೂಡದು ಎಂದು ನಿಯಮ ರೂಪಿಸಿದಲ್ಲಿ ಕನ್ನಡದ ಕಂಪು ವ್ಯವಹಾರಿಕ ಜಗತ್ತಿನಲ್ಲೂ ಪಸರಿಸಲು ಸಾಧ್ಯ.
ಅನ್ಯ ಭಾಷಾ ನಾಮಫಲಕಗಳ ವಿರುದ್ಧ ಸಮರ ಸಾರುವ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ಹೋರಾಟಕ್ಕೆ ಇಳಿಯುವುದರ ಬದಲು ವರ್ಷಪೂರ್ತಿ ನಾಮಫಲಕಗಳ ಮೇಲೆ ಕಣ್ಣಿರಿಸಿ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರೆ ಕನ್ನಡದ ಕಂಪು ದೊಡ್ಡದಾಗಿ ಹರಡಲು ಸಾಧ್ಯ.
ಅಧಿಕಾರಿ ವರ್ಗ ಮುತುವರ್ಜಿ ವಹಿಸಲಿ
ಅಂಗಡಿ, ಮುಂಗಟ್ಟು, ಉದ್ದಿಮೆಗಳ ನಾಮಫಲಕ ಕನ್ನಡದಲ್ಲಿರಬೇಕು. ವ್ಯಾಪಾರಿಗಳು ಕೂಡ ಹೆಸರಿಗೆ ಮಾತ್ರ ನಾಮಫಲಕದ ಒಂದು ಮೂಲೆಯಲ್ಲಿ ಕನ್ನಡದಲ್ಲಿ ಕಂಪನಿಯ ಹೆಸರು ಬರೆದು ಕೈತೊಳೆದುಕೊಳ್ಳುತ್ತಾರೆ. ಇಂಗ್ಲಿಷ್ನಲ್ಲಿ ಉದ್ದಿಮೆಯ ಹೆಸರು ದೊಡ್ಡದಾಗಿ ಬರೆದು ಇಂಗ್ಲಿಷ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿರುವ ಕನ್ನಡ ಕಡ್ಡಾಯ ಕಾಯ್ದೆ ವ್ಯವಸ್ಥಿತವಾಗಿ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.
ಸುಧಾಕರ ಭೈರಜಿ, ವಿದ್ಯಾರ್ಥಿ
ಕನ್ನಡಕ್ಕೆ ಮಹತ್ವ ನೀಡಲು ಕಾಯ್ದೆ ರೂಪಿಸಿ
ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ನಗರದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ಆಶಯವಿಲ್ಲ. ವರ್ಷಕ್ಕೊಮ್ಮೆ ಅಂಗಡಿ ಮುಂಗ್ಗಟ್ಟು ಮೇಲೆ ದಾಳಿ ಮಾಡುವ ಅಧಿಕಾರಿಗಳು ನೆಪಕ್ಕೆ ದಂಡ ಹಾಕಿ ಕೈತೊಳೆದುಕೊಳ್ಳುತ್ತಾರೆ. ಮೊದಲು ದಂಡಕ್ಕೆ ಹೆದರುತ್ತಿದ್ದ ವ್ಯಾಪಾರಿಗಳು ಈಗ ಹೆಸರಿಗಷ್ಟೆ ಸಣ್ಣ ಅಕ್ಷರಗಳಲ್ಲಿ ಮೂಲೆಯಲ್ಲಿ ಬರೆದು ಕಾಟಾಚಾರಕ್ಕೆ ಕಾಯ್ದೆ ಪಾಲಿಸುತ್ತಾರೆ. ಇದು ತಪ್ಪಬೇಕಾದರೆ ಕಡ್ಡಾಯವಾಗಿ ಅನ್ಯ ಭಾಷೆಗಳಿಗೆ ನೀಡುವಷ್ಟೆ ಮಹತ್ವವನ್ನು ಕನ್ನಡಕ್ಕೂ ನೀಡುವಂತೆ ಕಾಯ್ದೆ ರೂಪಿಸಬೇಕು.
- ಮಂಜು, ಉದ್ಯೋಗಿ