ಗಮನ ಸೆಳೆದ ರಂಗ ಶೋಭಾಯಾತ್ರೆ
ಬಳ್ಳಾರಿ: ರಂಗ ತೋರಣದ 9ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವದ ಅಂಗವಾಗಿ 2ನೇ ದಿನವಾದ ಶನಿವಾರ ಸಂಜೆ ವಿವಿಧ ಕಾಲೇಜುಗಳ ತಂಡಗಳು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದ ರಂಗ ಶೋಭಾಯಾತ್ರೆ ಎಲ್ಲರ ಗಮನ ಸೆಳೆಯುವಂತಿತ್ತು. ಆನೆಯ ಗಂಭೀರ ನಡಿಗೆ ಎಲ್ಲರೂ ನಿಂತು ನೋಡುವಂತೆ ಮಾಡಿತು. ಬಳ್ಳಾರಿ ದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಗೆ ಹಿರಿಯ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀ.ವಿ. ಸಂಘದ ಆಡಳಿತ ಮಂಡಳಿ ಸದಸ್ಯ ಕಣ್ಣಿ ರಾಜಶೇಖರ್, ನ್ಯಾ. ಡಿ. ಮಹೇಂದ್ರನಾಥ್, ಉಮೇಶ್ ಶೆಟ್ಟಿ ಇದ್ದರು. ಶೋಭಾಯಾತ್ರೆಯಲ್ಲಿ ನಗರದ ಹಗಲು ವೇಷಧಾರಿಗಳು, ಗಾಂಧೀಜಿ, ಅಂಬೇಡ್ಕರ್ ಅವರ ವೇಷಗಳನ್ನು ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ರಿಕ್ಷಾದಲ್ಲಿ ಲ್ಯಾಪ್ಟ್ಯಾಪ್ಗಳನ್ನು ಇಟ್ಟುಕೊಂಡು ಹೋಗುತ್ತಿರುವ ದೃಶ್ಯ, ಡೊಳ್ಳು ಕುಣಿತ, ಗೊರವಯ್ಯ ವೇಷಧಾರಿಗಳ ಮಧ್ಯೆ ರಂಗತೋರಣದ ಸರ್ವಾಧ್ಯಕ್ಷ ಮಂಡ್ಯ ರಮೇಶ್ ಅವರು ರಂಗ ಶೋಭಯಾತ್ರೆ ಮೆರವಣಿಗೆ ಹೊರಟಿದ್ದರು. ಶೋಭಾಯಾತ್ರೆಯ ನಗರದ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ, ನಗರದ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಠಾಣೆ, ಮೋತಿ ವೃತ್ತದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಿತು. ವಿ. ರವಿಕುಮಾರ್, ಯಶವಂತರಾಜ್, ಹೋಟೆಲ್ ಮಾಲೀಕರ ಸಂಘದ ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.