ಬೇಂದ್ರೆ ಕಾವ್ಯದ ಪದಕೋಶ ಮಾಡುವತ್ತ ಚಿಂತಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 26
ದ.ರಾ. ಬೇಂದ್ರೆ ಅವರ ಕಾವ್ಯದ ಪದಕೋಶ ಮಾಡುವ ನಿಟ್ಟಿನಲ್ಲಿ ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್ ಚಿಂತಿಸಲಿ ಎಂದು ಹಿರಿಯ ಕವಿ ಡಾ.ಕೆ. ದೊಡ್ಡರಂಗೇಗೌಡ ಹೇಳಿದರು.
ಬೇಂದ್ರೆ ಕಾವ್ಯವನ್ನು ಸೃಜನಶೀಲ ಮಹಾಸಂಪುಟ ಕಾವ್ಯ ತತ್ವವನ್ನೂ ಕಾವ್ಯವಾಗಿಸಿಕೊಂಡವರು ಬೇಂದ್ರೆ. ಅವರ ಕಾವ್ಯಗಳು ನಿಸರ್ಗವು ರಮಣೀಯವೂ ಹೌದು, ರುದ್ರವೂ ಹೌದು. ಈ ಹಿನ್ನೆಲೆಯಲ್ಲಿ ಬೇಂದ್ರೆ ಕಾವ್ಯದ ಪದಕೋಶ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಾಧನಕೇರಿಯ ಬೇಂದ್ರೆ ಭವನದಲ್ಲಿ ಶನಿವಾರ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನಡೆದ ವರಕವಿ ಅಂಬಿಕಾತನಯದತ್ತರ 33ನೇ ಪುಣ್ಯಸ್ಮರಣೆಯಲ್ಲಿ ನಾಲ್ವರು ಯುವ ಲೇಖಕರಿಗೆ ಬೇಂದ್ರೆ ಗ್ರಂಥ ಬಹುಮಾನ ವಿತರಣೆ ಸಂದರ್ಭ ಮಾತನಾಡಿದ ಅವರು, ಬೇಂದ್ರೆಯವರನ್ನು ಕೇವಲ ಕವಿಯನ್ನಾಗಿ ಮಾತ್ರ ನೋಡಲಾಗದು, ಅವರು ದಾರ್ಶನಿಕ ಬೇಂದ್ರೆ, ಆಧ್ಯಾತ್ಮಿಕ ಬೇಂದ್ರೆ ಎಂದೆಲ್ಲ ಕಾಣುವ ಅಗತ್ಯವಿದೆ ಎಂದರು.
ಬೇಂದ್ರೆ ಮತ್ತು ಕುವೆಂಪು ಸಾಹಿತ್ಯವನ್ನು ಏಕಕಾಲದಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಅವರಿಬ್ಬರೂ ಕನ್ನಡ ತಾಯಿ ಭುವನೇಶ್ವರಿಯ ಎರಡು ಮಕ್ಕಳಿದ್ದಂತೆ. ಕವಿಗೆ ಇರಬೇಕಾದ ಜೀವನ್ಮುಖಿ ಧೋರಣೆ ಬೇಂದ್ರೆಯವರಲ್ಲಿ ಅದ್ಭುತವಾಗಿರುವುದನ್ನು ನಾವು ಕಾಣುತ್ತೇವೆ. ಅವರ ದೃಷ್ಟಿಕೋನ ಮುಗಿಲಗಲ, ಜಗದಗಲ, ಅವರನ್ನು ಅನುವಾದಿಸುವುದು ತುಂಬ ಕಷ್ಟ. ಬೇಂದ್ರೆ ರಸಿಕ ಸಂಪ್ರದಾಯದ ಕವಿ ಎಂದರು. ಸವದತ್ತಿಯ ವಿಠ್ಠಲ ದಳವಾಯಿ ಅವರ ಕವನ ಸಂಕಲನ ಬೋಧಿ ನೆರಳಿನ ದಾರಿ, ಮೂಲತ-ರೋಣ ತಾಲೂಕು ರಾಜೂರಿನ ಟಿ.ಎಸ್. ಗೊರವರ ಅವರ ಕುದರಿ ಮಾಸ್ತರ ಕಥಾಸಂಕಲನ, ಅಂಕೋಲೆಯ ಯುವ ಲೇಖಕಿ ವೈಶಾಲಿ ಹೆಗಡೆ ಅವರ ಲಲಿತ ಪ್ರಬಂಧಗಳ ಸಂಕಲನ ಒದ್ದೆ ಹಿಮ...ಉಪ್ಪುಗಾಳಿ ಹಾಗೂ ಬೆಳಗಾವಿಯ ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ ಆಟಿಕೆ ಕೃತಿಗಳಿಗೆ ಬಹುಮಾನ ನೀಡಲಾಯಿತು. ಬಹುಮಾನಿತರ ಪರವಾಗಿ ವಿಠ್ಠಲ ದಳವಾಯಿ ಮಾತನಾಡಿದರು. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಶಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಕಾವ್ಯ ಜಗತ್ತನ್ನೇ ಕಾವ್ಯವಾಗಿಸಿದವರು ಬೇಂದ್ರೆಯವರು. ಕಾವ್ಯದೊಂದಿಗೆ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿದವರು ಅವರು ಎಂದರು. ಸದಸ್ಯ ಕಾರ್ಯದರ್ಶಿ ಬಿ.ಡಿ. ಹಿರೇಗೌಡರ ಸ್ವಾಗತಿಸಿದರು. ಶ್ರೀನಿವಾಸ ವಾಡಪ್ಪಿ ಕಾರ್ಯಕ್ರಮ ನಿರ್ವಹಿಸಿದರು.