ಬೈಕ್ ಕಳ್ಳರ ಬಂಧನ: ದ್ವಿಚಕ್ರ ವಾಹನ ವಶ
ಹುಬ್ಬಳ್ಳಿ: ನಗರದ ಶಾ ಬಜಾರ್, ಆರ್.ಕೆ. ಗಲ್ಲಿ, ಅಕ್ಕಿಹೊಂಡದ ವ್ಯಾಪ್ತಿಯಲ್ಲಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶನಿವಾರ ಬೆಳಗಿನ ಜಾವ ಘಂಟಿಕೇರಿ ಪೊಲೀಸರು ಬಂಧಿಸಿ ಅವರಿಂದ 1.06 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಪೇಟ್ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಸ್ಕೂಟಿ ಕದ್ದುಕೊಂಡು ಪರಾರಿಯಾಗುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಘಂಟಿಕೇರಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ನಗರದ ವಿವಿಧೆಡೆ ಬೈಕ್ ಕಳ್ಳತನಗಳ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಯಲ್ಲಾಪುರ ಓಣಿಯ ವಸೀಮ್ ಅಲಿಯಾಸ್ ಮಾಯಾ ಜೋಪಡಿ (21), ಪಿಂಜಾರ ಓಣಿಯ ಸದ್ದಾಂಹುಸೇನ್ ಹಜಿಸಾಬ್ ಹೊಸಮನಿ (22) ಎಂದು ಗುರುತಿಸಲಾಗಿದ್ದು, ಮಂಟೂರ ರಸ್ತೆಯ ಸಮೀರ್ ರಾಜಾಸಾಬ್ ಮಾರಡಗಿ ಪರಾರಿಯಾಗಿದ್ದಾನೆ.
ವಿರೂಪಾಕ್ಷಪ್ಪ ನಿಧನ
ಹುಬ್ಬಳ್ಳಿ: ಇಲ್ಲಿನ ಲಿಂಗರಾಜನಗರದ ನಿವಾಸಿಯಾದ ವಿರುಪಾಕ್ಷಪ್ಪ ಸಿದ್ದಪ್ಪ ವಿಭೂತಿ (74) ಇವರು ಶನಿವಾರ ಸವದತ್ತಿ ಪಟ್ಟಣದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.