ಮುನಿರಾಬಾದ್: ಮತ್ತೆ ದರೋಡೆ ಯತ್ನ
ಮುನಿರಾಬಾದ್: ಶುಕ್ರವಾರ ರಾತ್ರಿ ಸುಮಾರು 11.30ರ ಸುಮಾರಿಗೆ ಮುನಿರಾಬಾದಿನಲ್ಲಿ ಮತ್ತೆ ನಾಲ್ಕು ಜನರ ಡಕಾಯಿತರ ತಂಡ ಸುಮಾರು ಐದು ಕಡೆ ಡಕಾಯತಿ ಯತ್ನ ನಡೆಸಿದ್ದು, ಇದರಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ.
ಗ್ರಾಮದ ಸುಗಪ್ಪ, ವಲಿಬಾ, ಕೆಇಬಿ ಕಾಲೋನಿಯ ಪ್ರಭಾಕರ ರೆಡ್ಡಿ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಎರಡು ಮನೆಯಲ್ಲಿ ಡಕಾಯಿತರು ದರೋಡೆ ಮಾಡಲು ಯತ್ನಿಸಿದರು. ಆದರೆ, ಮನೆಯವರು ಕೂಗಿಕೊಂಡಾಗ ಡಕಾಯಿತರು ಅಲ್ಲಿಂದ ಕಾಲು ಕಿತ್ತಿದ್ದಾರೆ.
ಉಸ್ಮಾನಷ ಕ್ಯಾಂಪಿನಲ್ಲಿರುವ ವಲಿಬಾ ಎಂಬುವರ ಮನೆಗ ಬಂದ ದರೋಡೆಕೋರರು ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು ಹಾಗೂ ಡಕಾಯಿತರಿಗಾಗಿ ಶೋಧ ಕಾರ್ಯ ನಡೆಸಿದರು. ಆದರೆ, ಡಕಾಯಿತರು ಸುಳಿವು ಸಿಗಲಿಲ್ಲ. ಗುರುವಾರ ರಾತ್ರಿ ಡಕಾಯಿತರು ಐದು ಕಡೆ ದರೋಡೆ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೆ ಶುಕ್ರವಾರ ದರೋಡೆ ಯತ್ನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.
ಓರ್ವನ ಸೆರೆ: ಶುಕ್ರವಾರ ಸಂಜೆ ಸಮೀಪದ ಟಿಬಿ ಡ್ಯಾಂ ಬಳಿ ಅನುಮಾನಾಸ್ಪದ ರೀತಿ ತಿರುಗುತ್ತಿದ್ದ ಮತ್ತು ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯನ್ನು ಅಲ್ಲಿನ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಮೂರು ಶರ್ಟ್ ಹಾಗೂ ಮೂರು ಪ್ಯಾಂಟ್ ಧರಿಸಿದ್ದು, ಆತನ ಜೇಬಿನಲ್ಲಿ ಗಾಂಜಾ ಹಾಗೂ ಅಫೀಮು ಇತ್ತು ಎಂದು ಸಾರ್ವಜನಿಕರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಮಾದಕ ವಸ್ತು ಸೇವಿಸಿ ಡಕಾಯಿತಿ: ಡಕಾಯತಿ ಮಾಡುವ ಮುನ್ನ ದರೋಡೆಕೋರರು ಮಾದಕ ವಸ್ತುಗಳಾದ ಅಫೀಮ್ ಮತ್ತು ಗಾಂಜಾ ಸೇವಿಸುತ್ತಾರೆ. ಇದರಿಂದ ಮತ್ತಿನಲ್ಲಿ ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾರೆ ಹಾಗೂ ಅಷ್ಟೇ ವೇಗವಾಗಿ ತಪ್ಪಿಸಿಕೊಳ್ಳುತ್ತಾರೆ ಎನ್ನುತ್ತಾರೆ ಸಾರ್ವಜನಿಕರು. ಈಗ ಪ್ರತಿ ದಿನ ಗ್ರಾಮದ ಯುವಕರು ಜಾಗರಣೆ ಮಾಡಿ ತಮ್ಮ ಓಣಿಯಲ್ಲಿರುವ ಮನೆಗಳನ್ನು ಕಾಯುತ್ತಿದ್ದಾರೆ.