ಶಾಂತಾದೇವಿ ಮಾಳವಾಡ ದತ್ತಿ ಕಾರ್ಯಕ್ರಮ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಮಹಿಳೆಯರ ಸೃಜನಾತ್ಮಕ ಚಟುವಟಿಕೆಗಳಿಗೆ ಇಂಬು ಕೊಡುವ ದಿಸೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಪ್ರೊ.ಬಿ.ವಿ. ಗುಂಜೆಟ್ಟಿ ಹೇಳಿದರು.
ಶಾಂತಾದೇವಿ ಮಾಳವಾಡ ದತ್ತಿ ಅಂಗವಾಗಿ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಭಾವಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ವಿದ್ಯಾವರ್ಧಕ ಸಂಘ ಕಳೆದ 124 ವರ್ಷಗಳಿಂದ ನಾಡು-ನುಡಿ ನೆಲ, ಜಲ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂವರ್ಧನೆಗಾಗಿ ಶ್ರಮಿಸುತ್ತಾ ಬಂದಿದೆ. ಇವುಗಳ ಜೊತೆಗೆ ಮಹಿಳಾ ಪರ ನಿಲುವು, ಕಾಳಜಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ ಎಂದರು. ಭಾವಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಅವಳಿ ನಗರದ 22 ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಪದ್ಮಜಾ ಮಹಿಳಾ ಮಂಡಳ ಪ್ರಥಮ, ಲಕ್ಷ್ಮಿನಗರ ಮಹಿಳಾ ಮಂಡಳ ದ್ವಿತೀಯ, ಶಾರದಾ ಮಹಿಳಾ ಮಂಡಳ ತೃತೀಯ ಹಾಗೂ ಸ್ನೇಹ ಬಳಗ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದವು. ಸಾಹಿತಿ ಮೋಹನ ನಾಗಮ್ಮನವರ, ಚನ್ನಬಸವ ಮಾಳವಾಡ, ಶಂಕರ ಹಲಗತ್ತಿ ಇದ್ದರು. ನಿರ್ಣಾಯಕಾರಿ ಸವಿತಾ ಅಮರೇಶ, ರಂಜನಿ ಕುಲಕರ್ಣಿ ಆಗಮಿಸಿದ್ದರು.