ಅವಳಿನಗರದಲ್ಲಿ ಚೀಟರ್ಗಳಿದ್ದಾರೆ ಹುಷಾರ್!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 27
ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ. ಈ ಪೀಠಿಕೆಗೆ ಕಾರಣ, ಸಾಂಸ್ಕೃತಿಕ ನಗರಿ, ಶಾಂತಿ ಪ್ರಿಯರ ನಗರವೆನಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಚೀಟರ್ಗಳ ಸಂಖ್ಯೆ ಮಿತಿ ಮೀರಿ ಬಿಟ್ಟಿದೆ.
ನಿಜ.., ಹುಬ್ಬಳ್ಳಿ-ಧಾರವಾಡದಲ್ಲಿ ಮರುಳು ಮಾಡಿ ಖೆಡ್ಡಾಕ್ಕೆ ಕೆಡವುವವರ ಸಂಖ್ಯೆ ಎಲ್ಲೆ ಮೀರಿ ನಿಂತಿದೆ. ಕಂಡಕಂಡಲ್ಲಿ ಮೋಸದಿಂದ ಹಣ ಎಗರಿಸುವ ವ್ಯವಸ್ಥಿತ ಜಾಲ ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಿಸಿರುವುದು ಸಭ್ಯರ ನಿದ್ದೆಗೆಡಿಸಿದೆ.
ಠಾಣೆಯ ಮೆಟ್ಟಿಲೇರಿದ್ದು...
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಚೀಟಿಂಗ್ ಪ್ರಕರಣಗಳ ಸಂಖ್ಯೆಯೇ ಅವಳಿ ನಗರದಲ್ಲಿ ನಡೆಯುತ್ತಿರುವ ಕುಕೃತ್ಯಕ್ಕೆ ಸಾಕ್ಷ್ಯ ಒದಗಿಸುತ್ತದೆ. ವರ್ಷವಾರು ಚೀಟಿಂಗ್ ಪ್ರಕರಣಗಳು ದಾಖಲಾದ ಅಂಕಿ ಸಂಖ್ಯೆಯ ಮೇಲೆ ಕಣ್ಣಾಯಿಸಿದರೆ, 2011ರಲ್ಲಿ 141 ಪ್ರಕರಣಗಳು ದಾಖಲಾಗಿದ್ದವು. ಇದೇ ವೇಳೆ 2012ರಲ್ಲಿ 117 ಹಾಗೂ ಪ್ರಸಕ್ತ ವರ್ಷದ ಅಕ್ಟೋಬರ್ ವರೆಗೆ 114 ಪ್ರಕರಗಳು ದಾಖಲಾಗಿವೆ.
ಪಿಳ್ಳೆನೆವ ಹೇಳಿಕೊಂಡು..
ಇಲ್ಲಿ ಗಮನಾರ್ಹ ಸಂಗತಿಯೆಂದರೆ ಉದ್ಯೋಗ ಕೊಡಿಸುವುದಾಗಿ, ಜಾಗ ಕೊಡಿಸುವುದಾಗಿ, ವಾಹನ ಕೊಡಿಸುವುದಾಗಿ ಹೇಳಿ ಮೋಸ ಮಾಡುವವರಿಗಿಂತ ಹೆಚ್ಚಾಗಿ, ಇಲ್ಲಿ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣದ ಸುತ್ತಮುತ್ತ ಪಿಳ್ಳೆನೆವ ಹೇಳಿಕೊಂಡು ಬಂದು ಮೋಸಮಾಡುವವರೇ ಹೆಚ್ಚಾಗಿದ್ದಾರೆ. ನೂರಾರು ಸಂಖ್ಯೆಯಲ್ಲಿರುವ ಇವರು ತಮ್ಮ ನಯವಾದ ಮಾತುಗಳಿಂದ ನೋಡ ನೋಡುತ್ತಲೇ ಮೋಸ ಮಾಡುತ್ತಾರೆ. ಇಂಥವರ ವ್ಯವಸ್ಥಿತ ದೊಡ್ಡ ರ್ಯಾಕೆಟ್ ಅವಳಿ ನಗರದಲ್ಲಿ ಕೆಲಸ ಮಾಡುತ್ತಿದೆ.
ಮುಖ ನೋಡಿ ಮೊಳ ಹಾಕುವ ಜಾಯಮಾನದವರು ಈ ಮೋಸಗಾರರು. ಕಾಣಲು ಓದಿದವರಂತಿದ್ದು, ಉತ್ತಮ ಬಟ್ಟೆ ಧರಿಸಿಕೊಂಡು ಪ್ರಯಾಣಿಕರ ಪಕ್ಕಕ್ಕೆ ಹೋಗಿ ಮಾತಿಗೆ ನಿಲ್ಲುತ್ತಾರೆ. ಪ್ರಯಾಣಿಕ ಆಡುವ ಭಾಷೆಯಿಂದ ಆತ ಬಹುಶಃ ಯಾವ ಊರಿನಿಂದ ಬಂದಿರಬಹುದೆಂದು ಕಲೆ ಹಾಕುತ್ತಾರೆ.
ಆ ಬಳಿಕ ಪ್ರಯಾಣಿಕರೊಂದಿಗೆ ಸುಮ್ಮನೇ ಮಾತಿಗಿಳಿಯುತ್ತಾರೆ. ಆ ಬಳಿಕ ಪ್ರಯಾಣಿಕರ ಊರು ಕೇರಿಯ ಮಾಹಿತಿ ಪಡೆದು ತಾನು ನಿಮ್ಮ ಊರಿಗೆ ಹತ್ತಿರದವನು, ಪ್ರಮುಖ ಕೆಲಸಕ್ಕೆಂದು ಯಾವುದೋ ಊರಿಗೆ ಹೊರಟಿದ್ದೆ, ಆದರೆ ಯಾರೋ ಕಳ್ಳರು ಪರ್ಸ್ ಕದ್ದು ಬಿಟ್ಟಿದ್ದಾರೆಂದು ಬೊಗಳೆ ಬಿಡುತ್ತಾರೆ. ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ, ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದೇನೆಂದು ಎದುರಿಗಿದ್ದವರು ನಂಬುವ ರೀತಿಯಲ್ಲಿ ಮಾತಿನ ಗಾಳ ಹಾಕುತ್ತಾರೆ. ಸಾಲದ್ದಕ್ಕೆ ಸುಳ್ಳು ಮೊಬೈಲ್ ಸಂಖ್ಯೆ ಇರುವ ಡಮ್ಮಿ ವಿಸಿಟಿಂಗ್ ಕಾರ್ಡ್ ಕೊಟ್ಟು ತಾವು ಊರಿಗೆ ಹೋದ ಕೂಡಲೇ ಹಣ ಮರಳಿಸುವುದಾಗಿ ನಂಬಿಸುತ್ತಾರೆ.
ಇಂಥ ಪ್ರಸಂಗದಲ್ಲಿ ಎದುರಿದ್ದವರು ಅಯ್ಯೋ ಪಾಪ ಎಂದು ಹಣ ನೀಡುತ್ತಾರೆ. ಹಣ ಸಿಕ್ಕಿದ್ದೇ ತಡ ಇಂಥ ಮೋಸಗಾರರು ಮತ್ತೊಬ್ಬನನ್ನು ಬಲೆಗೆ ಬೀಳಿಸಲು ಹೊರಟು ಬಿಡುತ್ತಾರೆ. ಇಂಥ ಪ್ರಕರಣದಲ್ಲಿ ಹಣ ಕೊಟ್ಟಂವ ಕೋಡಂಗಿಯಾಗಿದ್ದರೂ ತಾವು ಇನ್ನೊಬ್ಬರಿಗೆ ನೆರವು ಮಾಡಿದೆವಲ್ಲ ಎಂಬ ಭ್ರಮೆಯಲ್ಲಿರುತ್ತಾರೆ. ಗಮನಾರ್ಹ ಸಂಗತಿಯೆಂದರೆ ಇಂಥ ಪ್ರಕರಣಗಳಲ್ಲಿ ಬಹು ತಡವಾಗಿ ತಾವು ಮೋಸ ಹೋಗಿದ್ದಾಗಿ ತಿಳಿಯುತ್ತದೆ. ಮೊಬೈಲ್ ಸಂಖ್ಯೆ ಸುಳ್ಳೆಂದು ಗೊತ್ತಾಗಿ ಹಣ ಕಳೆದುಕೊಂಡಿದ್ದಕ್ಕೆ ಪೇಚಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ಮೋಸ ಮಾಡುವ ನೂರಾರು ಪ್ರಕರಣಗಳು ಬಸ್, ರೇಲ್ವೆ ನಿಲ್ದಾಣದ ಆಸುಪಾಸಿನಲ್ಲಿ ದಿನಂಪ್ರತಿ ನಡೆಯುತ್ತಲೇ ಇವೆ.
ಹಳ್ಳಿಗರೇ ಟಾರ್ಗೇಟ್..
ಈ ರೀತಿಯಲ್ಲಿ ಮೋಸಕ್ಕೆ ಒಳಗಾಗುವವರು ಹಳ್ಳಿಗರು ಎಂಬುದು ಕಳವಳಕಾರಿ. ಹುಬ್ಬಳ್ಳಿ-ಧಾರವಾಡ ಆಸುಪಾಸಿನ ಹಳ್ಳಿಯಿಂದ ಖರೀದಿ, ವ್ಯಾಪಾರಕ್ಕೆಂದು ಬಂದವರು ಹಣ ಕಳೆದುಕೊಂಡು ಬರಿಗೈಯಲ್ಲಿ ಮನೆಗೆ ಮರಳುತ್ತಾರೆ. ಹಳ್ಳಿಗರು ಇಂಥ ನಯವಂಚಕರ ಮಾತಿಗೆ ಬೇಗನೆ ಮರುಳಾಗಿ ಬಿಡುತ್ತಾರೆ.
ದೂರು ದಾಖಲಾಗುವುದಿಲ್ಲ
ಹೀಗೆ ಮೋಸ ಹೋದವರ ಪೈಕಿ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ತಾವು ಮೋಸ ಹೋಗಿದ್ದಕ್ಕೆ ಮರುಗಿ ಸುಮ್ಮನಾಗಿ ಬಿಡುತ್ತಾರೆ. ಆದರೆ, ಮೋಸ ಮಾಡಿದ ವ್ಯಕ್ತಿ ಮಾತ್ರ ಲಕ್ಷಾಂತರ ರುಪಾಯಿ ಗಿಟ್ಟಿಸಿಕೊಂಡು ಹಾಯಾಗಿರುತ್ತಾನೆ.
ರಾತ್ರಿ ಕಂಡ ಬಾವಿಗೆ ಹಗಲಲ್ಲಿ ಬೀಳುವುದು ಎಂದರೆ ಬಹುಶಃ ಇದೇ ಆಗಿರಬಹುದು. ಮೋಸ ಮಾಡಿ ದುಡ್ಡು ಗಳಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಗೊತ್ತಾಗಿಯೂ ನಯವಂಚಕರ ಮಾತಿಗೆ ಮರುಳಾಗಿ ಬಲಿ ಬೀಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆಘಾತಕಾರಿ. ಇಂತವರಿಗೆ ಮೈಮರೆಯದಿರಿ ಮರೆತು ಮರಗದಿರಿ ಎಂದು ಹೇಳಬಹುದಷ್ಟೇ.
ನಯ ವಂಚಕರ ಬಗ್ಗೆ ಹುಷಾಗಿರುವಂತೆ ಜಾಗೃತಿ ಮೂಡಿಸುತ್ತಿದ್ದರೂ ಮೋಸ ಹೋಗುತ್ತಿರುವುದು ಕಳವಳಕಾರಿ. ಇಂಥ ಸಂದರ್ಭದಲ್ಲಿ ಬಹುಪಾಲು ಜನ ಪೊಲೀಸ್ರಿಗೆ ದೂರು ನೀಡುವುದಿಲ್ಲ. ದೂರು ಕೊಟ್ಟರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.
- ಬಿ.ಎ. ಪದ್ಮನಯನ,ಮಹಾನಗರ ಪೊಲೀಸ್ ಆಯುಕ್ತ
-ಪ್ರಕಾಶ ಎಸ್. ಶೇಟ್