ಬಾಂಬ್ ಸ್ಫೋಟ: ಇಂದು ರಾಜ್ಯವ್ಯಾಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 27
ಬಿಜೆಪಿಯ ಭಾವಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅ. 28ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ತಿಳಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಹೂಂಕಾರ ರ್ಯಾಲಿಯನ್ನು ತಡೆಯುವುದಕ್ಕೆ ಬಿಹಾರ ಸರ್ಕಾರ ಷಡ್ಯಂತ್ರ ರೂಪಿಸಿತ್ತು. ಅಲ್ಲದೆ, ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರಕ್ಕೆ ಗುಪ್ತಚರ ಮಾಹಿತಿ ಪೂರೈಸುವಲ್ಲಿ ಹಿಂದೇಟು ಹಾಕಿದೆ. ಈ ಮೂಲಕ ಕೇಂದ್ರ ಮತ್ತು ನಿತೀಶಕುಮಾರ್ ನೇತೃತ್ವದ ಬಿಹಾರ ಸರ್ಕಾರ, ಮೋದಿ ರ್ಯಾಲಿಗೆ ತಡೆಯೊಡ್ಡಬೇಕು ಎಂದು ಯೋಜಿಸಿದ್ದವು. ಅದರ ಫಲವಾಗಿ ಇಂದು ಪಾಟ್ನಾದಲ್ಲಿ ನಡೆಯುತ್ತಿದ್ದ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಐವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ನವೆಂಬರ್ 17ರಂದು ಬೆಂಗಳೂರಿನಲ್ಲೂ ನರೇಂದ್ರ ಮೋದಿ ಅವರ ರ್ಯಾಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ಮತ್ತು ರ್ಯಾಲಿ ನಡೆಯುವ ಸ್ಥಳಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಜೋಶಿ ಒತ್ತಾಯಿಸಿದರು.
ವ್ಯಕ್ತಿಗತವಾಗಿ ಏನೇ ವಿರೋಧಗಳಿದ್ದರೂ ಸಂವಿಧಾನದ ಹುದ್ದೆ ಅಲಂಕರಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ರ್ಯಾಲಿಗೆ ರಕ್ಷಣೆ ನೀಡಬೇಕಿತ್ತೇ ವಿನಃ ಅದನ್ನು ತಡೆಯುವ ಯತ್ನ ಮಾಡಬಾರದಾಗಿತ್ತು. ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರೆ ರ್ಯಾಲಿ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ. ಬಾಂಬ್ ಸ್ಫೋಟದ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. ಆದರೆ, ರ್ಯಾಲಿ ತಡೆಯುವ ಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಗ್ಗಟ್ಟಿನಿಂದ ಮಾಡಿವೆ ಎಂದು ಆರೋಪಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರ ಯುಪಿಎ ಸರ್ಕಾರ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಅಲ್ಲದೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದಿನಕ್ಕೊಂದು ಹೇಳಿಕೆ ನೀಡಿ ವಿವಾದ ಹುಟ್ಟು ಹಾಕುತ್ತಿದ್ದಾರೆ. ಹೀಗಾಗಿ, ಬಿಜೆಪಿಗೆ ಕಾಂಗ್ರೆಸ್‌ನ ಇತರ ನಾಯಕರು ವಿವಾದಾತ್ಮಕ ಹೇಳಿಕೆಗಳು ಬೇಕಾಗಿಲ್ಲ. ರಾಹುಲ್ ಗಾಂಧಿ ಒಬ್ಬರೇ ಸಾಕಷ್ಟು ವಿವಾದ ಸೃಷ್ಟಿಸುತ್ತಾರೆ ಎಂದರು. ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಎಂ.ವಿ. ನಾಗರಾಜ, ಸೋಮಣ್ಣ ಬೇವಿನಮರದ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ ಗೋಷ್ಠಿಯಲ್ಲಿದ್ದರು.
ಬಿಎಸ್‌ವೈ ಬಿಜೆಪಿಗೆ ಬಂದೇ ಬರ್ತಾರೆ
ಬಿಜೆಪಿಗೆ ಮರಳುವ ಛಾನ್ಸೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘಂಟಾಘೋಷವಾಗಿ ಹೇಳುತ್ತಿದ್ದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತ್ರ ಮಾಜಿ ಸಿಎಂ ಯಡಿಯೂರಪ್ಪ ಪಕ್ಷಕ್ಕೆ ಮರಳುವ ವಿಶ್ವಾಸ ನನಗೆ ಇದೆ ಎನ್ನುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ಘಟಕ ಹಸಿರು ನಿಶಾನೆ ತೋರಿದೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದು, ಸದ್ಯದಲ್ಲೇ ಆ ಕುರಿತು ಅಂತಿಮ ತೀರ್ಮಾನ ರಾಷ್ಟ್ರಮಟ್ಟದ ನಾಯಕರಿಂದ ಹೊರಬೀಳಲಿದೆ ಎಂದರು. ರಾಜ್ಯದಲ್ಲಿ ಇದೀಗ ಮೂಲ ಕಾಂಗ್ರೆಸ್ಸಿಗರ ಮತ್ತು ಜನತಾ ಪರಿವಾರದವರ ಸರ್ಕಾರ ಅಸ್ತಿತ್ವದಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣದಿಂದಾಗಿ ರಾಜ್ಯದಲ್ಲಿ ಸಣ್ಣ ಕೆಲಸಗಳು ಆಗುತ್ತಿಲ್ಲ. ರು. 57 ಕೋಟಿಗಳನ್ನು ರಾಜ್ಯ ಸರ್ಕಾರ ಬೆಳೆ ವಿಮೆಯ ತನ್ನ ಪಾಲು ಪಾವತಿಸಬೇಕು. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಸಾಲ ಮನ್ನಾಕ್ಕೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇವಲ 57 ಕೋಟಿಗಳನ್ನು ಸರ್ಕಾರ ಬಿಡುಗಡೆ ಮಾಡುವುದಕ್ಕೆ ಮೀನಮೇಷ ಎಣಿಸುತ್ತಿರುವುದರಿಂದ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯುತ್ತಿಲ್ಲ. ಸಾಲಮನ್ನಾ ಅನುದಾನವನ್ನು ಸರ್ಕಾರ ಹಂತ ಹಂತವಾಗಿ ಬಿಡುಗಡೆ ಮಾಡಿದರೆ ರೈತರಿಗೆ ಬಡ್ಡಿರಹಿತ ಸಾಲ ದೊರೆಯುತ್ತದೆ. ಆದರೆ ಸರ್ಕಾರದಲ್ಲಿನ ಗೊಂದಲಗಳಿಂದಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಹೇಳಿದರು.