ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮರಡಿಮಠಗೆ ಸಮಾಜಸೇವಾ ರತ್ನ ಪ್ರಶಸ್ತಿ

Lingaraj Badiger
Updated On : 28 Oct 2013, 11:27 am

ಧಾರವಾಡ: ನಗರದ ಹಿಂದುಸ್ತಾನಿ ಸಂಗೀತದ ಹಿರಿಯ ಗಾಯಕ ಸೋಮಶೇಖರ ಮರಡಿಮಠ ಅವರಿಗೆ ಬೆಂಗಳೂರಿನ ನವ ಕರ್ನಾಟಕ ಸಾಂಸ್ಕೃತಿಕ ವೇದಿಕೆಯಿಂದ ಪ್ರಸಕ್ತ ವರ್ಷದ ಸಮಾಜಸೇವಾ ರತ್ನ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಜೆ.ಸಿ. ರಸ್ತೆಯ ನಯನ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ವಿಶೇಷ ಸಮಾರಂಭದಲ್ಲಿ ಬೆಂಗಳೂರಿನ ಶ್ರೀಕುಮಾರ ಚಂದ್ರಶೇಖರ ಸ್ವಾಮೀಜಿ, ಖ್ಯಾತ ಚಲನಚಿತ್ರ ನಟ-ನಿರ್ಮಾಪಕ ಮದನ ಪಟೇಲ್ ಹಾಗೂ ಮಾಜಿ ಶಾಸಕ ವೈ. ಸಂಪಂಗಿ ಪ್ರಶಸ್ತಿ ಪ್ರದಾನ ಮಾಡಿದರು.
ವಿವರದ 10 ಕೈಪಿಡಿ ವಿತರಣೆ
ಯಲ್ಲಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಳ್ಳಲಿರುವ ನಮ್ಮೂರ ಕೆರೆ, ನಮ್ಮ ಹೊಲ ನಮ್ಮ ದಾರಿ, ರೈತರ ಕಣ, ಸ್ಮಶಾನ ಅಭಿವೃದ್ಧಿ, ಮನೆಗೊಂದು ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳು, ಆಟದ ಮೈದಾನ, ಕುರಿ-ದನದ ದೊಡ್ಡಿ, ನಮ್ಮ ಹಳ್ಳಿ ನಮ್ಮ ನೀರು, ರಾಜೀವಗಾಂಧಿ ಸೇವಾ ಕೇಂದ್ರ ಎಂಬ ಹೆಸರಿನ ಗ್ರಾಮೀಣಾಭಿವೃದ್ಧಿ ಯೋಜನೆಗಳ ಸಮಗ್ರ ವಿವರಗಳನ್ನು ಹೊಂದಿದ 10 ಕೈಪಿಡಿಗಳನ್ನು ಶನಿವಾರ ಪಟ್ಟಣದ ತಾಪಂ ಸಭಾಭವನದಲ್ಲಿ ತಹಸೀಲ್ದಾರ್ ಎಂ.ವಿ. ಕಲ್ಲೂರಮಠ, ತಾಪಂ ಅಧ್ಯಕ್ಷೆ ಲಕ್ಷ್ಮೀ ನಾಯ್ಕರಿಗೆ ವಿತರಿಸುವ ಮೂಲಕ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಕೈಪಿಡಿ ಉದ್ಘಾಟನೆಗೆ ಪೂರಕ ಚಾಲನೆ ನೀಡಿದರು. ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ವಿ. ಪುರಾಣಿಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ನಾಗರಾಜು, ಇಡಗುಂದಿ ಗ್ರಾಪಂ ಸದಸ್ಯ ಶ್ರೀಕಾಂತ ಶೆಟ್ಟಿ, ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪರಸ್ಪರ ಕೈಪಿಡಿಯನ್ನು ವಿತರಿಸಿಕೊಂಡರು.

ಪಿಂಚಣಿ ವಂಚನೆ:
ನಾಲ್ವರಿಗೆ ಶಿಕ್ಷೆ
ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಸ್ವಾತಂತ್ರ್ಯ ಯೋಧರಿಗೆ ಸರ್ಕಾರ ನೀಡುವ ಪಿಂಚಣಿ ಯೋಜನೆ ದುರುಪಯೋಗಪಡಿಸಿಕೊಂಡ ನಾಲ್ವರು ಅಪರಾಧಿಗಳಿಗೆ ಹುಬ್ಬಳ್ಳಿ ಪ್ರಧಾನ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಮತ್ತು ರು. 17 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ಚೆಂಗಟಿ ಅವರು ಪ್ರಕರಣದ ವಿಚಾರಣೆ ನಡೆಸಿ, ನಕಲಿ ದಾಖಲೆ ಸೃಷ್ಟಿಸಿ ಒಟ್ಟು ರು. 4.30 ಲಕ್ಷ ವಂಚಿಸಿದ್ದ ಹಳೇ ಹುಬ್ಬಳ್ಳಿ ದೇವರಾಜನಗರದ ಹನುಮಂತ ಏಕಬೋಟೆ, ಜಗದೀಶ ನಗರದ ಗಂಗಾಂಬಿಕಾ ಮನೋಹರ ಹವಳದ, ಕಾರವಾರ ರಸ್ತೆಯ ಶಾಂತಾ ವಸಂತ ಸಾವಂತ ಮತ್ತು ಉಣಕಲ್‌ನ ನೀಲವ್ವ ಮಹಾದೇವಪ್ಪ ಹಡಪದ ಎಂಬ ವ್ಯಕ್ತಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸ್ವಾತಂತ್ರ್ಯ ಯೋಧರಾದ ಸಂಗಯ್ಯ ಹಿರೇಮಠ, ಭಾಸ್ಕರಪ್ಪ ಅರ್ಕಸಾಲಿ,  ಫಕೀರಪ್ಪ ಬಸರಿಕಟ್ಟಿ ಅವರ ಸಂಬಂಧಿಕರು ಎಂದು ಹೇಳಿಕೊಂಡಿದ್ದ ಇವರು ಸರ್ಕಾರಕ್ಕೆ ಖೊಟ್ಟಿ ದಾಖಲೆ ಸಲ್ಲಿಸಿದ್ದರು.  2006ರಲ್ಲಿ ಸರ್ಕಾರ ದಾಖಲೆ ಪರಿಶೀಲಿಸಿದ ಸಂದರ್ಭದಲ್ಲಿ ವಂಚನೆ ಪ್ರಕರಣ ಬಯಲಾಗಿತ್ತು. ಉಪನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಧಾರವಾಡ: ದಿ. ಪರೇಶ ನೆರ್ಲೆಕರ ಸ್ಮರಣಾರ್ಥ ರಕ್ತದಾನ
ಧಾರವಾಡ: ರಕ್ತದಾನದಿಂದ ಜೀವದಾನ ಮಾಡಿದ ಭಾಗ್ಯ ಲಭಿಸುತ್ತದೆ. ಆದ್ದರಿಂದ ಆರೋಗ್ಯವಂತರು ರಕ್ತದಾನಕ್ಕೆ ಮನಸ್ಸು ಮಾಡಬೇಕು ಎಂದು ಉದ್ಯಮಿ ಅಡಿವೆಪ್ಪ ಮಾಸೂರ ಹೇಳಿದರು. ಭಾನುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಕೆಟಿಗ ಪರೇಶ ನೆರ್ಲೆಕರ ಮೂರನೇ ಪುಣ್ಯಸ್ಮರಣೆ ಅಂಗವಾಗಿ ಪರೇಶ ನೆರ್ಲೆಕರ ಗೆಳೆಯರು ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಸಂದರ್ಭ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಅನೇಕರು ರಕ್ತದ ಕೊರತೆಯಿಂದ ಅಸುನೀಗುವ ಸಾಧ್ಯತೆ ಇರುತ್ತದೆ. ಸೂಕ್ತ ಸಂದರ್ಭದಲ್ಲಿ ರಕ್ತದ ಲಭ್ಯತೆಯಿಂದ ಆ ವ್ಯಕ್ತಿ ಬದುಕಲು ಸಾಧ್ಯವಾಗುತ್ತದೆ. ಅನಿವಾರ್ಯ ಸಂದರ್ಭ ರಕ್ತದ ಅವಶ್ಯಕತೆ ಪೂರೈಸುವ ದಿಸೆಯಲ್ಲಿ ರಕ್ತದಾನ ಮಾಡುವುದು ಅಗತ್ಯ ಎಂದರು. ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ಮುಖ್ಯಸ್ಥ ಡಾ.ಪ್ರಭು ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇದರಿಂದ ಅನೇಕರಿಗೆ ಪ್ರಯೋಜನವಾಗಲಿದೆ. ತಮ್ಮ ಸ್ನೇಹಿತನ ಸ್ಮರಣೆ ಅಂಗವಾಗಿ ಗೆಳೆಯರು ನಡೆಸಿಕೊಂಡು ಬರುತ್ತಿರುವ ರಕ್ತದಾನ ಕಾರ್ಯ ಪರೇಶ ನೆರ್ಲೆಕರ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಎಂದರು. ಶಹರ ರಜಪೂತ ಸಮಾಜದ ಅಧ್ಯಕ್ಷ ಅಜಯ ಕಲವಾರ, ಪ್ರಮೋದ ನಾಯ್ಕ್, ಶಿವಾಜಿ ಬಂಡಿವಡ್ಡರ ಇದ್ದರು. ಸುರೇಶ ಬೇದರೆ, ಪ್ರಕಾಶ ಪೂಜಾರ, ರವಿ ಬೇದ್ರೆ, ನವೀನಕುಮಾರ ಗೌಡರ, ಗೋಪಿ ಕೊರ್ಲೂರ, ಅವಿನಾಶ ಹಜಾರೆ, ಪ್ರವೀಣ ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement