ವಿಜಯ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತಿದೆ: ಮಹಮ್ಮದ್ ಕಲೀಲ್
ಹುಬ್ಬಳ್ಳಿ: ವ್ಯಕ್ತಿಯ ಅಭಿವೃದ್ಧಿ ಜೊತೆಗೆ ದೇಶದ ವಿಕಸನದಲ್ಲಿ ವಿಜಯ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತ ಬಂದಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಮಹಮ್ಮದ್ ಕಲೀಲ್ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ವಿಜಯ ಬ್ಯಾಂಕ್ನ 83ನೇ ಸಂಸ್ಥಾಪನಾ ದಿವಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಾಯವ್ಯ ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ ಖರೀದಿಗೆ ವಿಜಯ ಬ್ಯಾಂಕ್ ಆರ್ಥಿಕ ನೆರವು ನೀಡಿದೆ ಎಂದರು. ಇದಕ್ಕೂ ಮೊದಲು ಮಾತನಾಡಿದ ಬ್ಯಾಂಕಿನ ಹುಬ್ಬಳ್ಳಿ ಶಾಖೆಯ ಸಹಾಯಕ ಮಹಾಪ್ರಬಂಧಕ ಶ್ರೀಧರ ಶೆಟ್ಟಿ, ದೇಶಾದ್ಯಂತ ವಿಜಯ ಬ್ಯಾಂಕ್ 1,460 ಶಾಖೆಗಳನ್ನು ಹೊಂದಿದೆ. 2014ರ ಮಾರ್ಚ್ ಅಂತ್ಯದೊಳಗೆ ಬ್ಯಾಂಕಿನ ಎಲ್ಲ ಶಾಖೆಗಳು ಎಟಿಎಂ ಸೌಲಭ್ಯ ಪಡೆಯಲಿವೆ ಎಂದು ತಿಳಿಸಿದರು. 26 ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿಗೆ ಬ್ಯಾಂಕ್ ವತಿಯಿಂದ ಶೈಕ್ಷಣಿಕ ಸಹಾಯ ನೀಡಲಾಗುತ್ತಿದೆ. ವಿವಿಧ 11 ಜಿಲ್ಲೆಗಳ 11 ಶಾಲೆಗಳಲ್ಲಿ ನೀರು ಶುದ್ಧೀಕರಣ ಘಟಕವನ್ನು ಬ್ಯಾಂಕ್ ವತಿಯಿಂದ ಪ್ರಾರಂಭಿಸಲಾಗುತ್ತಿದೆ ಎಂದರು. ಬ್ಯಾಂಕಿನ ಹಿರಿಯ ಅಧಿಕಾರಿ ರಾಮಪ್ರಸಾದ ಸ್ವಾಗತಿಸಿದರು. ಗ್ರಾಹಕರಾದ ಎಸ್.ಬಿ. ಶೆಟ್ಟಿ, ಉದಯ ಶೆಟ್ಟಿ, ರತ್ನಾಕರ ಶೆಟ್ಟಿ, ಸುಧಾಕರ ಶೆಟ್ಟಿ, ವಿಜಯರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.