ಧಾರವಾಡದ ಕೆಐಎಡಿಬಿ ಮುಂದೆ ರೈತರ ಪ್ರತಿಭಟನೆ
ಧಾರವಾಡ: ರೈತರ ಭೂಮಿ ಸ್ವಾಧೀನಪಡಿಸಿಕೊಂಡಕೆಐಎಡಿಬಿ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿ, ರೈತರನ್ನು ವಂಚಿಸಿದೆ ಎಂದು ಆರೋಪಿಸಿ ಬಳ್ಳಾರಿ ಜಿಲ್ಲೆಯ ರೈತರು ಸೋಮವಾರ ಧಾರವಾಡದಲ್ಲಿನ ಕೆಐಎಡಿಬಿ ಕಚೇರಿ ಎದುರು ಪ್ರತಿಭಟಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದ ಕೆಐಎಡಿಬಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಬಳ್ಳಾರಿಯ ಸಿದ್ದನಹಳ್ಳಿ, ಕೊಳಗಲ್, ವೇಣಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, 'ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ 4761 ಎಕರೆ ರೈತರ ಭೂಮಿಯನ್ನು ಬ್ರಹ್ಮಿಣಿ ಸ್ಟಿಲ್ ಕಂಪನಿಗೆ ನೀಡಿದೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕಿದ್ದ ಮಂಡಳಿ ತಾರತಮ್ಯ ನೀತಿ ಅನುಸರಿಸಿದೆ. ಪ್ರಸ್ತುತ ಈ ಭೂಮಿ ಪ್ರತಿ ಎಕರೆಗೆ 10ರಿಂದ 16 ಲಕ್ಷಗಳ ವರೆಗೆ ಬೆಲೆ ಬಾಳುತ್ತದೆ. ಆದರೆ, ಕೇವಲ 5ರಿಂದ 8 ಲಕ್ಷ ನೀಡಿ, ರೈತರಿಗೆ ದೊರಕಬೇಕಿದ್ದ ಪರಿಹಾರದಲ್ಲಿ ಮೋಸ ಮಾಡಲಾಗಿದೆ. ಈ ಗ್ರಾಮಗಳ ಬಳಿಯೇ ಆರ್.ಎಸ್. ಮಿತ್ತಲ್ ಕಂಪನಿಯು ಕೆಐಎಡಿಬಿ ಮೂಲಕವೇ ಪ್ರತಿ ಎಕರೆಗೆ 12ರಿಂದ 16 ಲಕ್ಷದ ವರೆಗೆ ನೀಡಿದೆ' ಎಂದು ರೈತರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿತ್ತು. ಅಲ್ಲದೆ, ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಸಂಬಂಧ ಕೆಐಎಡಿಬಿ ವಿರುದ್ಧ ಸದ್ಯ ಹೈಕೋರ್ಟ್ನಲ್ಲಿ ದೂರು ಸಲ್ಲಿಸಲಾಗಿದೆ. ಅ. 8ರಂದು ಹೈಕೋರ್ಟ್ ಈ ಬಗ್ಗೆ ಮರು ಪರಿಶೀಲಿಸಿ ಸೂಕ್ತ ಬೆಲೆ ನಿರ್ಧರಿಸಿ ರೈತರಿಗೆ ಹಣ ನೀಡಬೇಕೆಂದು ಆದೇಶಿಸಿದೆ. ಆದರೂ ಕ್ರಮವಾಗಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.