ಉದ್ಯೋಗ ಸೃಷ್ಟಿಯಿಂದ ಅಲೆದಾಟಕ್ಕೆ ಬ್ರೇಕ್: ಶೆಟ್ಟರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 30
ಎಂಜಿನಿಯರ್ ಹಾಗೂ ಮತ್ತಿತರ ಪದವೀಧರರಿಗೆ ಹುಬ್ಬಳ್ಳಿಯಲ್ಲಿಯೇ ಉದ್ಯೋಗ ಲಭಿಸುವಂತಾದರೆ ವಿದೇಶಗಳಿಗೆ ಉದ್ಯೋಗ ಅರಸಿ ಹೋಗುವುದು ತಪ್ಪುತ್ತದೆ ಹಾಗೂ ಇದರಿಂದ ಅವಳಿ ನಗರವೂ ಅಭಿವೃದ್ಧಿಯಾಗುತ್ತದೆ ಎಂದು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಜರುಗಿದ 'ಅಸರ್ವಾ' ಆರ್ ಆ್ಯಂಡ್ ಡಿ ಇನ್ಕ್ಯೂಬೇಷನ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಳಿ ನಗರದ ಎಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ ಶೇ. 98ರಷ್ಟು ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಂದ ಶೇ. 90ರಷ್ಟು ವಿದ್ಯಾರ್ಥಿಗಳು ಪದವೀಧರರಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಎಲ್ಲ ಪದವೀಧರರು ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಇಂಥವರಿಗೆ ಹುಬ್ಬಳ್ಳಿ-ಧಾರವಾಡದಲ್ಲಿಯೇ ಉದ್ಯೋಗ ಲಭಿಸಿದಲ್ಲಿ ಮಹಾನಗರದ ಅಭಿವೃದ್ಧಿಯೂ ಆಗುತ್ತದೆ ಎಂದರು.
ಸಂಕಲ್ಪ ಸೆಮಿಕಂಡಕ್ಟರ್ಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ಚೇರ್ಮನ್ ವಿವೇಕ ಪವಾರ್ ಮಾತನಾಡಿ, ಯಾವುದೇ ಸಂಸ್ಥೆ ಅಭಿವೃದ್ಧಿಗೊಳ್ಳಬೇಕಾದರೆ ಪ್ರತಿಭಾವಂತ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದು ಹೇಳಿದರು.
ಅಸರ್ವಾ ಚೇರ್ಮನ್ ರಾಕೇಶ ಶರ್ಮಾ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಬಳ್ಳಾರಿ ಮಾತನಾಡಿ, ಅವಳಿ ನಗರದಿಂದ ವಿದೇಶಕ್ಕೆ ಉದ್ಯೋಗ ಅರಸಿ ಹೋದವರನ್ನು ಮರಳಿ ಕರೆತರುವ ಕೆಲಸವಾಗಬೇಕಿದೆ ಎಂದರು.