ನಗರವಾಸಿಗಳಿಗಿನ್ನು 'ತೋಟ ಭಾಗ್ಯ'
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 30
ನಗರ ಪ್ರದೇಶದ ಮಂದಿ ಮನೆಯಂಗಳದಲ್ಲಿಯೇ ಹಣ್ಣು, ತರಕಾರಿ ಉತ್ಪಾದಿಸುವುದರ ಜೊತೆಗೆ ತೋಟದ ಸಾಗುವಳಿ ಚಟುವಟಿಕೆಯಲ್ಲಿ ತೊಡಗಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಪ್ರಸಕ್ತ ವರ್ಷದಿಂದ ನೂತನ ಯೋಜನೆ ಆರಂಭಿಸಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನಾ ಯೋಜನೆಗೆ ಚಾಲನೆ ನೀಡಿದೆ. ನಗರ ಮತ್ತು ಪಟ್ಟಣ ಪ್ರದೇಶದ ನಾಗರಿಕರಿಗೆ ಸಮತೋಲನ ಆಹಾರ ಒದಗಿಸುವಲ್ಲಿ ಹಣ್ಣು, ತರಕಾರಿಗಳ ಪಾತ್ರದ ಬಗ್ಗೆ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಐದು ವರ್ಷಗಳ ಅವಧಿಯ ಈ ಯೋಜನೆಗೆ ರು. 7.50 ಕೋಟಿ ಅನುದಾನ ನಿಗದಿಪಡಿಸಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆ, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಧಾರವಾಡ, ಗುಲ್ಬರ್ಗ, ಬಾಗಲಕೋಟೆ, ಬೀದರ್ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸದ್ಯ ಅನುಷ್ಠಾನಗೊಳಿಸಲಾಗುವುದು. ಉಳಿದ ಜಿಲ್ಲೆಗಳಲ್ಲಿ ತೋಟಗಾರಿಕಾ ಸೇವಾ ಕೇಂದ್ರ, ಮಾಹಿತಿ ಮತ್ತು ಸಲಹಾ ಕೇಂದ್ರಗಳ ಸೇವೆ ಬಳಸಿ ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಒಂದು ಸಾವಿರ ಫಲಾನುಭವಿಗಳಿಗೆ ಒಬ್ಬರಂತೆ ಮೂರು ಅಥವಾ ನಾಲ್ಕು ತಿಂಗಳ ಅವಧಿಗೆ ಕೃಷಿ ಅಥವಾ ತೋಟಗಾರಿಕಾ ಪದವೀಧರರನ್ನು ನೇಮಕ ಮಾಡಿಕೊಂಡು ಈ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುವುದು. ಅವರಿಂದ ಜಾಗೃತಿ ಮೂಡಿಸುವುದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ, ಖಾಸಗಿ ಸ್ಥಳ, ನರ್ಸರಿಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ಫಲಾನುಭವಿಗಳಿಗೆ ತರಬೇತಿ ಸಹ ನೀಡಲಾಗುವುದು.
ನಗರ ಪ್ರದೇಶದ ನಾಗರಿಕರ ಮನೆ ಮುಂದೆ ಜಾಗವಿದ್ದರೆ ಕೈತೋಟ, ಇಲ್ಲದಿದ್ದರೆ ತಾರಸಿ ತೋಟ ಮಾಡಿಕೊಳ್ಳಬಹುದು. ಈ ಯೋಜನೆ ಫಲಾನುಭವಿಗಳಿಗೆ ಹಣ್ಣು, ತರಕಾರಿ ಬೀಜ ನೀಡುವುದಲ್ಲದೇ ಇಲಾಖೆ ನಿಗದಿಪಡಿಸಿದಷ್ಟು ಕೈತೋಟದ ಖರ್ಚುನ್ನೂ ನೀಡಲಿದೆ.
ಕೈತೋಟ, ತಾರಸಿ ತೋಟಗಳಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಲು ತಾಂತ್ರಿಕ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವುದು, ಎರೆಹುಳು ಗೊಬ್ಬರ ತಯಾರಿಸಿ ಬಳಕೆ ಮಾಡುವುದು, ಕುಟುಂಬದ ಎಲ್ಲ ಸದಸ್ಯರು ಕೈತೋಟ ಮತ್ತು ತಾರಸಿ ತೋಟಗಳಲ್ಲಿ ಆಸಕ್ತಿ ಮೂಡಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ, ಒತ್ತಡ ನಿರ್ವಹಣೆ ಹಾಗೂ ಪರಿಸರ ಕಾಳಜಿ ಬಗ್ಗೆಯೂ ಅರಿವು ಮೂಡಿಸಲಾಗುವುದು. ಈ ಕುರಿತು ಕನ್ನಡಪ್ರಭಕ್ಕೆ ಮತ್ತಷ್ಟು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಿ. ಸರಳಮ್ಮ, ಬದಲಾದ ಜೀವನ ಶೈಲಿಯ ಪರಿಣಾಮ ನಗರವಾಸಿಗಳು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದ್ದು, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಲವು ದಶಕಗಳ ಹಿಂದೆ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಹಳಷ್ಟು ಕುಟುಂಬಗಳು ತಮಗೆ ಬೇಕಾದ ಬಹುತೇಕ ಹಣ್ಣು ಮತ್ತು ತರಕಾರಿ ಅವಶ್ಯಕತೆಯನ್ನು ಕೈತೋಟದ ಮೂಲಕವೇ ಪೂರೈಸಿಕೊಳ್ಳುತ್ತಿದ್ದರು. ಕಾಲಕ್ರಮೇಣ, ನಗರೀಕರಣ ಮತ್ತು ಆಧುನಿಕ ಜೀವನ ಶೈಲಿಯ ಪರಿಣಾಮ ಕೈತೋಟಗಳು ಮಾಯವಾಗಿವೆ. ಹಣ್ಣು-ತರಕಾರಿ ಎಲ್ಲದಕ್ಕೂ ಸಂತೆ ಹಾಗೂ ಮಾರುಕಟ್ಟೆಗಳನ್ನೇ ಅವಲಂಬಿಸಲಾಗಿದೆ. ಅಲ್ಲದೆ, ಪ್ರಸ್ತುತ ಹಣ್ಣು, ತರಕಾರಿ ಬೇಡಿಕೆ ಜಾಸ್ತಿಯಾಗಿದ್ದು, ಈಡೇರಿಸಲಾಗುತ್ತಿಲ್ಲ. ಹೀಗಾಗಿ ಬೆಲೆಯೂ ಗಗನಕ್ಕೇರಿದೆ. ಈ ಎಲ್ಲ ಉದ್ದೇಶಗಳ ಅನ್ವಯ ನಗರದ ಮಂದಿಗೆ ಈ ಯೋಜನೆ ಆರಂಭಿಸಲಾಗಿದೆ ಎಂದರು. ಈಗಾಗಲೇ ರಾಜ್ಯದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ ಈಗ ತೋಟಗಾರಿಕೆ ಇಲಾಖೆ ಮೂಲಕ ಜಾರಿಗೊಳಿಸಿರುವ 'ತೋಟಭಾಗ್ಯ' ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ. ನಗರವಾಸಿಗಳು ಈ ಯೋಜನೆ ಫಲ ಪಡೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
-ಬಸವರಾಜ ಹಿರೇಮಠ