ಮಹಾಲೆ, ಫಯಾಜ್ಖಾನ್ಗೆ ರಾಜ್ಯೋತ್ಸವ ಪ್ರಶಸ್ತಿ
ಧಾರವಾಡ: ಧಾರವಾಡ ಜಿಲ್ಲೆಯ ಪೈಕಿ ರಂಗಭೂಮಿ ವಿಭಾಗದಲ್ಲಿ ಹಿರಿಯ ಪ್ರಸಾಧನ ಕಲಾವಿದ ಗಜಾನನ ಮಹಾಲೆ ಹಾಗೂ ಸಂಗೀತ ವಿಭಾಗದಲ್ಲಿ ಖ್ಯಾತ ಸಾರಂಗ ವಾದಕ ಫಯಾಜ್ ಖಾನ್ಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಗರಿ ದೊರೆತಿದೆ.
82ರ ಇಳಿವಯಸ್ಸಿನಲ್ಲೂ ಬಣ್ಣದಿಂದ ಜೀವನ ಕಟ್ಟಿಕೊಳ್ಳಲು ಇಂದಿಗೂ ತಿರುಗಾಡುತ್ತಿರುವ ಗಜಾನನ ಮಹಾಲೆ ಅವರಿಗೆ ರಾಜ್ಯೋತ್ಸವ ದೊರಕಿರುವುದು ಎಲ್ಲ ರಂಗ ಕಲಾವಿದರಿಗೆ ಸಂತಸ ತಂದಿದೆ. ಉತ್ತರ ಕರ್ನಾಟಕದ ನಾಣಿ ಎಂದೇ ಖ್ಯಾತಿ ಹೊಂದಿರುವ ಇವರು, ತಮ್ಮ 13ನೇ ವಯಸ್ಸಿನಿಂದಲೇ ಕಲಾವಿದರಿಗೆ ಬಣ್ಣ ಬಳಿದವರು. 1951ರಿಂದ ಇವತ್ತಿನವರೆಗೂ ಬಣ್ಣವನ್ನು ಕೈ ಬಿಟ್ಟಿಲ್ಲ. ಬಣ್ಣವೂ ಅವರನ್ನು ಕೈ ಬಿಡಲಿಲ್ಲ. ಬಾಲ್ಯದಿಂದಲೇ ತಂದೆ ಹರಿಕೃಷ್ಣ ಅವರ ಪ್ರೇರಣೆ, ಪ್ರೋತ್ಸಾಹದಿಂದ ತಮ್ಮನ್ನು ತಾವು ನಾಟಕ, ನೃತ್ಯ ಹಾಗೂ ಸಂಗೀತದಲ್ಲಿ ತೊಡಗಿಸಿಕೊಂಡವರು. ಸುಮಾರು 40 ವರ್ಷಗಳ ಹಿಂದೆ ನಾಟಕವೊಂದಕ್ಕೆ ಹಿರಿಯ ನಾಟಕಕಾರ ಶ್ರೀರಂಗರಿಗೆ ಬೇಂದ್ರೆ ಅವರ ರೂಪಕೊಟ್ಟು ಪ್ರಸಾದನ ಮಾಡಿದ್ದಕ್ಕೆ ಸ್ವತಃ ಬೇಂದ್ರೆ ಹಾಗೂ ಶ್ರೀರಂಗರು ಮಹಾಲೆಯವರಿಗೆ ಶಹಬ್ಬಾಸಗಿರಿ ಹೇಳಿದ್ದರು. ರಾಜ್ಯೋತ್ಸವ ಬಂದಿರುವ ಈ ಸಂದರ್ಭ ಅದೆಲ್ಲಾ ನೆನಪಾಗುತ್ತದೆ. ಟಿವಿಯಲ್ಲಿ ಬಂದಿರುವ ಸುದ್ದಿಯಿಂದ ತಿಳಿಯಿತು. ಸುಮಾರು 60 ವರ್ಷಗಳ ನನ್ನ ಶ್ರಮಕ್ಕೆ ಸರ್ಕಾರ ಫಲ ನೀಡಿದೆ ಎಂದು ಪತ್ರಿಕೆಯೊಂದಿಗೆ ಗಜಾನನ ಮಹಾಲೆ ಸಂತಸ ಹಂಚಿಕೊಂಡರು. 1987ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿರುವ ಅವರ ಮಗ ಸಂತೋಷ ಕೂಡಾ ಈಗ ಪ್ರಸಾಧನ ಕಲೆಯಲ್ಲಿ ಎತ್ತಿದ ಕೈ. ಸುರೇಶ ಹೆಬ್ಳೀಕರ ಅವರ ನಿರ್ದೇಶನದಲ್ಲಿ ಚಮತ್ಕಾರ ಹಾಗೂ ಟಿ.ಎಸ್. ನಾಗಾಭರಣರವರ ಸಿಂಗಾರೆವ್ವ ಚಲನಚಿತ್ರದಲ್ಲಿಯೂ ಗಜಾನನ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುತ್ತೈದೆ, ಕುಂಕುಮ, ವಿಜಯಕಂಕಣ ಮುಂತಾದ ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿ ಹಾಗೂ ಪ್ರಸಾಧನ ಮಾಡಿದ ಹೆಗ್ಗಳಿಕೆ ಇವರದ್ದು. ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ನಾಟಕಗಳಿಗೆ ಪ್ರಸಾಧನ ಮಾಡಿದ್ದು, ಒಂದು ಸಾವಿರಕ್ಕೂ ಹೆಚ್ಚು ನೃತ್ಯ ಕಲಾವಿದರಿಗೆ ಪ್ರಸಾಧನ ಮಾಡಿದ್ದಾರೆ ಎಂಬುದೇ ಹೆಮ್ಮೆ.
ಫಯಾಜ್ ಖಾನ್: ಧಾರವಾಡದ ಸಂಗೀತ ಕಲಾವಿದ ಫಯಾಜ್ ಖಾನ್ಗೆ ರಾಜ್ಯೋತ್ಸವ ಒಲಿದು ಬಂದಿರುವುದು ಸಂಗೀತ ಪ್ರೇಮಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ. ಅದ್ಭುತವಾಗಿ ಸಾರಂಗ ನುಡಿಸುವ ಫಯಾಜ್ ಖಾನ್ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಮ್ಮ ಸಂಗೀತದ ಝಲಕ್ ತೋರಿಸಿದ್ದಾರೆ. ತಂದೆಯಿಂದ ಬಳುವಳಿಯಾಗಿ ಪಡೆದ ಈ ಕಲೆಯನ್ನು ಐದು ವರ್ಷದವನಿದ್ದಾಗಲೇ ಕಲಿತ ಫಯಾಜ್ ಖಾನ್ ತುಂಬ ಸರಳ, ಸಜ್ಜನ ವ್ಯಕ್ತಿ. ರಾಜ್ಯೋತ್ಸವದ ಸುದ್ದಿ ಗೆಳೆಯರಿಂದ ತಿಳಿದು ಬಂತು. ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಆದ್ದರಿಂದ ಆಶ್ಚರ್ಯ ತಂದಿದೆ. ನನ್ನ ಸಂಗೀತದ ಸಾಧನೆಯನ್ನು ಸರ್ಕಾರ ಗುರುತಿಸಿದ್ದು ತುಂಬ ಸಂತಸ ತಂದಿದೆ. ಈ ಗೌರವಕ್ಕೆ ನನ್ನ ತಂದೆಯೇ ಕಾರಣ. ಗುರುಗಳಾದ ಪಂ. ಬಸವರಾಜ ಬೆಂಡಿಗೇರಿ, ರಂಗನಾಥ ಜೋಶಿ, ರಾಮ ನಾರಾಯಣರು ಸಹ ಕಾರಣರು ಎಂದು ಫಯಾಜ್ ಖಾನ್ ಸಂತಸ ಹಂಚಿಕೊಂಡರು.