ಸಾರಿಗೆ ಸಂಸ್ಥೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕರ ಕಲ್ಯಾಣಾಧಿಕಾರಿ ಶಂಕರಪ್ಪ ಹಳ್ಳಿ ಹಾಗೂ ಅವರ ಅಳಿಯನ ಮನೆಯ ಮೇಲೆ ಲೋಕಾಯುಕ್ತರು ಬುಧವಾರ ಬೆಳಗಿನ ಜಾವ ದಾಳಿ ನಡೆಸಿ, ಮಹತ್ವದ ದಾಖಲೆ ಹಾಗೂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆಂಬ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಕೆ. ಪರಶುರಾಮ ನೇತೃತ್ವದ ತಂಡ ದಾಳಿ ನಡೆಸಿತು. ಗೋಕುಲ ರಸ್ತೆಯಲ್ಲಿರುವ ಸಿಲ್ವರ್ಟೌನ್ದಲ್ಲಿರುವ ಶಂಕರಪ್ಪ ಮನೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಶಂಕರಪ್ಪ ಅವರಿಗೆ ಸೇರಿದ ಟಾಟಾ ಇಂಡಿಗೋ ಕಾರ್, 250 ಗ್ರಾಂ ಚಿನ್ನಾಭರಣ, 2 ಕೆಜೆ ಬೆಳ್ಳಿ ವಶ ಪಡಿಸಿಕೊಳ್ಳಲಾಯಿತು. ಜತೆಗೆ ಗದಗನ ಹಾತಲಗೇರಿಯಲ್ಲಿ ಮನೆ, ಗದಗ ಕೆಎಚ್ಬಿ ಕಾಲೋನಿಯಲ್ಲಿ ಸೈಟ್, ಶ್ಯಾಗೋಟಿ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಲ್ಲಿ 20 ಎಕರೆ ತೋಟ ಹಾಗೂ ಜಮೀನು ಹೊಂದಿರುವ ದಾಖಲೆ ಪತ್ತೆಯಾಗಿದೆ. ಇದಲ್ಲದೇ ವಿಜಯ ನಗರದ ತಿರುಪತಿ ಬಜಾರನಲ್ಲಿರುವ ಶಂಕರಪ್ಪ ಅಳಿಯ ಡಾ. ಸೋಮಶೇಖರ ಅಂಗಡಿ ನಿವಾಸದ ಮೇಲೆಯೂ ದಾಳಿ ನಡೆಸಿ ಶಂಕರಪ್ಪಗೆ ಸಂಬಂಧಿಸಿದ ಮಹತ್ವದ ದಾಖಲೆ ವಶ ಪಡಿಸಿಕೊಳ್ಳಲಾಗಿದೆ. ಶಂಕರಪ್ಪ ರು. 92 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಹೊಂದಿರುವುದು ದಾಳಿ ವೇಳೆಯಲ್ಲಿ ಸಿಕ್ಕ ದಾಖಲೆಯಿಂದ ಸಾಬೀತಾಗಿದ್ದು ತನಿಖೆ ಮುಂದುವರಿಸಿದ್ದಾಗಿ ಎಸ್ಪಿ ಪರಶುರಾಮ ತಿಳಿಸಿದ್ದಾರೆ.