ನಾಡಹಬ್ಬ ರಾಜ್ಯೋತ್ಸವಕ್ಕೆ ಅದ್ಧೂರಿ ಸಿದ್ಧತೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 31
ನಾಡಹಬ್ಬ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಭರ್ಜರಿ ಸಿದ್ಧತೆ ಮಾಡಿದೆ.
ಅವಳಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳನ್ನು ಸ್ವಚ್ಛಗೊಳಿಸಿದ್ದು, ಬಟ್ಟೆಯಿಂದ ತಯಾರಿಸಿರುವ ಪರಿಸರ ಸ್ನೇಹಿ ಪರಪರೆಗಳನ್ನು ಕಟ್ಟಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಇತರ ಗಣ್ಯರ ಪುತ್ಥಳಿಗಳನ್ನು ಸ್ವಚ್ಛಗೊಳಿಸಲಾಗಿದೆ.
ವಿದ್ಯುತ್ ದೀಪಾಲಂಕಾರ: ಪ್ರಮುಖ ವೃತ್ತಗಳನ್ನು ವಿದ್ಯುದ್ವೀಪಗಳಿಂದ ಅಲಂಕರಿಸಲಾಗಿದೆ. ಮಹಾನಗರ ಪಾಲಿಕೆ ಮುಖ್ಯ ಕಚೇರಿ ಹಾಗೂ ಎಲ್ಲ ವಲಯ ಕಚೇರಿಗಳಿಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ತಿಂಡಿ, ತಿನಿಸು: ಮೆರವಣಿಗೆ ಪ್ರಾರಂಭಗೊಳ್ಳಲಿರುವ ಸಿದ್ಧಾರೂಢ ಮಠದ ಆವರಣ ಹಾಗೂ ಮೆರವಣಿಗೆ ಅಂತ್ಯಗೊಳ್ಳುವ ನೆಹರು ಮೈದಾನದಲ್ಲಿ ಗುರುತು ಹಾಕಲಾಗಿದೆ. ನ. 1ರಂದು ಬೆಳಗ್ಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಕಲಾ ತಂಡಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಂಡಿಗಾಗಿ ಉಪ್ಪಿಟ್ಟು ಹಾಗೂ ಶಿರಾ ಮಾಡಲಾಗುತ್ತಿದ್ದು, ತಿಂಡಿ ವಿತರಣೆಗೆ 4 ಕೌಂಟರ್ ರಚಿಸಲಾಗಿದೆ.
ಗಣ್ಯರ ಉಪಸ್ಥಿತಿ: ಬೆಳಗ್ಗೆ 8ಕ್ಕೆ ಸಿದ್ಧಾರೂಢ ಮಠದಲ್ಲಿ ಮೆರವಣಿಗೆ ಕಾರ್ಯಕ್ರಮ ಸಮಾವೇಶಗೊಂಡು, 8.45ಕ್ಕೆ ಶ್ರೀ ಭುವನೇಶ್ವರಿ ಪೂಜೆಯೊಂದಿಗೆ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ ಶಾಸಕರು, ವಿಧಾನ ಪರಿಷತ್ ಶಾಸಕರು ಮತ್ತು ವಿಶೇಷ ಅಹ್ವಾನಿತರಾಗಿ ಜಿಲ್ಲಾಧಿಕಾರಿ ಮತ್ತು ಸಿದ್ಧಾರೂಢ ಮಠದ ಚೇರ್ಮನ್ ಮತ್ತು ಪಾಲಿಕೆ ಸದಸ್ಯರು ಆಗಮಿಸುವರು.
ಮೆರವಣಿಗೆ: ಮೆರವಣಿಗೆಯು ಶ್ರೀ ಸಿದ್ದಾರೂಢ ಮಠದಿಂದ ಇಂಡಿಪಂಪ್ ಸರ್ಕಲ್, ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲಿಷ್ ಸ್ಕೂಲ್, ಬಮ್ಮಾಪುರ ಓಣಿ, ಹಿರೇಪೇಟ, ಮೈಸೂರು ಸ್ಟೋರ್, ದುರ್ಗದಬೈಲ್, ಮರಾಠಾ ಗಲ್ಲಿ, ತುಳಜಾ ಭವಾನಿ ಗುಡಿ, ದಾಜಿಬಾನ್ಪೇಟೆ, ಸಂಗೋಳ್ಳಿ ರಾಯಣ್ಣ ಪ್ರತಿಮೆ, ಚನ್ನ್ನಮ್ಮ ಸರ್ಕಲ್, ಸರ್. ಸಿದ್ದಪ್ಪ ಕಂಬಳಿ ರಸ್ತೆ ಮೂಲಕ ನೆಹರು ಮೈದಾನದಲ್ಲಿ ಸೇರುವುದು. ನೆಹರು ಮೈದಾನದಲ್ಲಿಯೂ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿದ್ದು, 10 ಕೌಂಟರ್ ನಿರ್ಮಿಸಲಾಗಿದೆ.
ಮೆರವಣಿಗೆ ಸಾಗುವ ಮಾರ್ಗದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮುಂಜಾಗೃತಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ನೇಮಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ತಗ್ಗು ಬಿದ್ದ ರಸ್ತೆಗಳನ್ನು ಮಣ್ಣು ಹಾಗೂ ಕಡಿ ಹಾಕುವ ಮೂಲಕ ತಾತ್ಕಾಲಿಕ ದುರಸ್ತಿಗೊಳಿಸಲಾಗಿದೆ.
ಸ್ತಬ್ದ ಚಿತ್ರಗಳು: ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಐದು, ವಲಯ ಕಚೇರಿಯ ಎಂಟು ಹಾಗೂ ಖಾಸಗಿ ಶಾಲೆಗಳ ಎರಡು ಸ್ತಬ್ಧಚಿತ್ರಗಳು ಸೇರಿದಂತೆ ವಾಯವ್ಯ ಸಾರಿಗೆ ಸಂಸ್ಥೆ, ಕನ್ನಡ ಕ್ರಿಯಾ ಸಮಿತಿ ಮತ್ತಿತರ ಇಲಾಖೆ ಮತ್ತು ಸಂಘ-ಸಂಸ್ಥೆಗಳ 15ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಜಗ್ಗಲಗಿ, ಡೊಳ್ಳು, ಕೋಲಾಟ, ವಿಶೇಷವಾಗಿ ಗೋಪನಕೊಪ್ಪದ ದಾಲಪಟಾ ಕಲಾವಿದರು ಹಾಗೂ ಮತ್ತಿತರ ಜಾನಪದ ವಾದ್ಯಗಳು ಪಾಲ್ಗೊಳ್ಳಲಿವೆ. ಕನ್ನಡ ನಾಡಿನ ಮಹನೀಯರ ವೇಷ ತೊಟ್ಟ ಕಲಾವಿದರು ಭಾಗವಹಿಸಲಿದ್ದಾರೆ.
ನೆಹರು ಮೈದಾನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರಿಗೆ, ಸ್ತಬ್ದಚಿತ್ರಗಳಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸುವರು.
ಸಂಜೆ 5 ಗಂಟೆಗೆ ಇಂದಿರಾ ಗಾಜಿನ ಮನೆ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ್ನ ಆಯೋಜಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು.
ಗಾಯತ್ರಿ ದೇಶಪಾಂಡೆ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ, ಸುಜಾತಾ ಗೊರವ ಕಮ್ಮಾರ ಇವರಿಂದ ದಾಸವಾಣಿ, ಜಾನಪದ, ಭಕ್ತಿಗೀತೆ, ಶೈಲಾ ಹುಟಗಿ ಕಲಾ ತಂಡದಿಂದ ಕನ್ನ್ನಡ ನೃತ್ಯಗೀತೆ, ವಿದ್ಯಾನಗರದದೇಶಪಾಂಡೆ ಫೌಂಡೇಶನ್ನಿಂದ ಕನ್ನ್ನಡ ನೃತ್ಯ, ಸುವರ್ಣ ಭೂಸನೂರ ಕಲಾ ತಂಡದಿಂದ ವೀರರಾಣಿ ಕಿತ್ತೂರು ಚನ್ನ್ನಮ್ಮ ಕುರಿತು ಏಕಪಾತ್ರಾಭಿನಯ, ಪ್ರಣತಿ ಅನಿಲಕುಮಾರ್ ಇವರಿಂದ ಕನ್ನ್ನಡ ಗೀತೆಗಳು, ಇತರ ಕಲಾ ತಂಡಗಳಿಂದ ಕನ್ನ್ನಡ ಗೀತೆಗಳು ಜರುಗುವವು.