ವಂಚನೆ: ದೂರು ದಾಖಲು
ಧಾರವಾಡ: ಚಿನ್ನದ ಆಭರಣ ತೊಳೆಯುವ ನೆಪದಲ್ಲಿ ಅಪರಿಚಿತರಿಬ್ಬರು ಅತ್ತೆ-ಸೊಸೆಯ ಸುಮಾರು ಎರಡು ಲಕ್ಷ ಮೌಲ್ಯದ ಆಭರಣಗಳನ್ನು ಅಪಹರಿಸಿದ ಪ್ರಕರಣ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಗಳಾ ಮಡಿವಾಳಪ್ಪ ಅಂಕಲಗಿ ಮತ್ತು ಅವರ ಸೊಸೆ ವಂಚನೆಗೊಳಗಾಗಿದ್ದು, ಈಗ ಗರಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಪರಿಚಿತರು ಚಿನ್ನದ 2 ಮಂಗಳಸೂತ್ರ, 2 ಚೈನು ಮತ್ತು ಒಂದು ಬೋರಮಾಳ ಸರ ಸೇರಿದಂತೆ ರು. 2 ಲಕ್ಷ ಮೌಲ್ಯದ 75 ಗ್ರಾಂನಷ್ಟು ಆಭರಣಗಳನ್ನು ಅಪಹರಿಸಿದ್ದಾರೆ. ಬುಧವಾರ ಮಧ್ಯಾಹ್ನ ಮನೆಗೆ ಬಂದ ಇಬ್ಬರು ಅಪರಿಚಿತರು ಚಿನ್ನದ ಆಭರಣಗಳನ್ನು ತೊಳೆದು ಕೊಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಅತ್ತೆ ಮಂಗಳಾ ಅಂಕಲಗಿ ಮತ್ತು ಅವರ ಸೊಸೆ ಮೊದಲು ಚಿನ್ನದ ಚೈನ್ ನೀಡಿದ್ದಾರೆ. ಅದನ್ನು ತೊಳೆದು ಕೊಟ್ಟ ನಂತರ ಮನೆಯಲ್ಲಿನ ಎಲ್ಲ ಚಿನ್ನದ ಆಭರಣಗಳನ್ನು ಕೊಟ್ಟಾಗ ಅಸಲಿ ಸರಗಳ ಬದಲು ನಕಲಿ ಆಭರಣಗಳನ್ನು ನೀಡಿದ ಅಪರಿಚಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಂಗಳಾ ಅಂಕಲಗಿ ಗರಗ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
12 ಜೂಜುಕೋರರ ಸೆರೆ
ಧಾರವಾಡ: ಗರಗ, ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟಬಾಗಿ, ಶಿಂಗನಹಳ್ಳಿ, ದಾನೂನುಗರದಲ್ಲಿ ಇಸ್ಪೀಟ್, ಮಟ್ಕಾ ಆಟದಲ್ಲಿ ತೊಡಗಿದ್ದ 12 ಜನರನ್ನು ಬಂಧಿಸಲಾಗಿದೆ. ಕೊಟಬಾಗಿ ಗ್ರಾಮದ ಬಸ್ ನಿಲ್ದಾಣ ಬಳಿಯ ಜಾಗೆಯಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಆರು ಜನರನ್ನು ಬಂಧಿಸಿ, ರು. 3,460 ನಗದು ವಶಪಡಿಸಿಕೊಂಡಿದ್ದರೆ, ಶಿಂಗನಹಳ್ಳಿ ಗ್ರಾಮದಲ್ಲಿ ಮಟ್ಕಾ ವ್ಯವಹಾರ ನಡೆಸುತ್ತಿದ್ದ ಎನ್ನಲಾದ ಶಂಕ್ರಪ್ಪ ಖಂಡಪ್ಪ ಬೋಸ್ಲೆ ಎಂಬುವನನ್ನು ಬಂಧಿಸಲಾಗಿದೆ. ಆರೋಪಿತನಿಂದ ನಗದು ಮತ್ತು ಮಟ್ಕಾ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ದಾನುನಗರದಲ್ಲಿ ಇಸ್ಪೀಟ್ ಆಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಐವರನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ದಾನುನಗರದ ಶಾಲೆ ಬಳಿ ಖುಲ್ಲಾ ಜಾಗೆಯಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಐವರನ್ನು ಬಂಧಿಸಿ ಬಂಧಿತರಿಂದ ರು. 2070 ವಶಪಡಿಸಿಕೊಂಡಿದ್ದಾರೆ. ಸಿಪಿಐ ಬಿ.ಟಿ. ಚನ್ನಕೇಶವ, ಸಿಬ್ಬಂದಿ ದಾಳಿ ನಡೆಸಿದ್ದರು. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಹುಬ್ಬಳ್ಳಿ: ಹೊಟ್ಟೆ ನೋವು ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೋಪನಕೊಪ್ಪದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಕುರಿತು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಪನಕೊಪ್ಪದ ಲಲಿತಾ ಮಂಜುನಾಥ ಹುಚ್ಚಬಾರ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕೇಶ್ವಾಪುರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.