ಉತ್ತಮ ವ್ಯಕ್ತಿಯಾಗುವುದು ಕಷ್ಟದ ಕೆಲಸ: ಸಚಿವ ಸಂತೋಷ್ ಲಾಡ್
ಧಾರವಾಡ: ವಿವಿಧ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ಹೋರಾಟಗಾರ ಆಗಬಹುದು. ಆದರೆ, ಉತ್ತಮ ವ್ಯಕ್ತಿಯಾಗುವುದು ಕಷ್ಟದ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಮಹಾನಗರ ಪಾಲಿಕೆ ಮಾಜಿ ಮೇಯರ್ ದಾನಪ್ಪ ಕಬ್ಬೇರ ಅವರ 60ನೇ ಜನ್ಮದಿನದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಳ್ಳೆಯ ವ್ಯಕ್ತಿತ್ವದಿಂದ ಒಳ್ಳೆಯ ವ್ಯಕ್ತಿಯಾಗಿ ಸಮಾಜದ ಅಂತರಾಳದಲ್ಲಿ ಮನೆ ಮಾಡುವುದು ತೀರಾ ಕಷ್ಟದ ಕೆಲಸ. ಇಂತಹ ಕಾರ್ಯವನ್ನು ದಾನಪ್ಪ ಕಬ್ಬೇರ ತಮ್ಮ ಜೀವನದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು. ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ಉತ್ತಮ ಹೆಸರು ಉಳಿಸಿಕೊಂಡಿರುವ ದಾನಪ್ಪ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಅಷ್ಟರ ಮಟ್ಟಿಗೆ ರಾಜಕೀಯ ಜಂಜಾಟದಲ್ಲಿ ಜನಪರ ನಿಲುವುಗಳಿಂದ ಸ್ಪಂದನೆ ನೀಡುವ ಮೂಲಕ ಜನಮಾನಸದಲ್ಲಿ ಮನೆ ಮಾಡಿದ್ದಾರೆ ಎಂದು ತಿಳಿಸಿದರು. ಸಂಸದ ಬಸವರಾಜ ಹೊರಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿದರು. ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಗಟ್ಟಿ, ಜಬ್ಬರಖಾನ್ ಹೊನ್ನಳ್ಳಿ, ಕೃಷ್ಣ ಜೋಶಿ, ಲೋಹಿತ ನಾಯ್ಕರ್ ಇದ್ದರು. ಕೆ.ಎಚ್. ನಾಯಕ ಮತ್ತು ಶಂಕರ ಕುಂಬಿ ನಿರೂಪಿಸಿದರು. ಹಜರತಲು ಗೊರವನಕೊಳ್ಳ ವಂದಿಸಿದರು. ನಂತರ ಜ್ಯೂನಿಯರ್ ರಾಜಕುಮಾರ ಅಶೋಕ ಕುಮಾರ ಬಸ್ತಿ ಅವರಿಂದ ರಸಮಂಜರಿ ನಡೆಯಿತು.