ದರ್ಪಣ್ ಜೈನ್ರಿಂದ ಕರ್ತವ್ಯಲೋಪ: ಹಿರೇಮಠ
ಹುಬ್ಬಳ್ಳಿ: ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ ಮಸಾಜ್ ಪಾರ್ಲರ್ ಮತ್ತು ರಿಕ್ರಿಯೆಷನ್ ಚಟುವಟಿಕೆಗಳಿಗೆ ಅನುಮತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರಿಂದ ಗಂಭೀರ ಪ್ರಮಾಣದಲ್ಲಿ ಕರ್ತವ್ಯಲೋಪ ಆಗಿದ್ದು, ಈ ನಿಟ್ಟಿನಲ್ಲಿ ಸಿಬಿಐ ತನಿಖೆಯಾಗಬೇಕು ಸಮಾಜ ಪರಿವರ್ತನ ಸಮುದಾಯದ ಎಂದು ಎಸ್.ಆರ್. ಹಿರೇಮಠ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಆಡಳಿತಾವಧಿಯಲ್ಲಿ ಕರ್ನಾಟಕ ಜಿಮಖಾನಾ ಕ್ಲಬ್ಗೆ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ನೀಡಲಾಗಿತ್ತೇ ವಿನಃ ಆ ಮೈದಾನದಲ್ಲಿ ಮದ್ಯಾರಾಧನೆ ಮತ್ತಿತರ ಚಟುವಟಿಕೆಗಳಿಗೆ ಆಸ್ಪದ ನೀಡಿರಲಿಲ್ಲ ಎಂದರು. ಇಡೀ ಮೈದಾನವನ್ನು ಕಬಳಿಸುವ ಮೂಲಕ ಕರ್ನಾಟಕದ ಜನರಿಗೆ ಮೋಸ ಮಾಡುವ ಕೆಲಸ ಕೆಲವು ವ್ಯಕ್ತಿಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರೌಂಡ್ ಬಚಾವೋ ಸಮಿತಿ ಹೆಸರಿನಲ್ಲಿ ನಾಗರಿಕರು ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದು, ರಿಕ್ರಿಯೆಷನ್ ಕ್ಲಬ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಪೂರಕ ದಾಖಲೆ ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಫ್.ಬಿ. ಹಬೀಬ್, ಐ.ಜಿ. ಪುಲ್ಲಿ ಇನ್ನಿತರರು ಇದ್ದರು.
ಬಾರ್, ಮಾಂಸಾಹಾರಿ ಹೋಟೆಲ್ಗೆ ಪರವಾನಗಿ ಬೇಡ
ಅಣ್ಣಿಗೇರಿ: ಸ್ಥಳೀಯ ಪುರಸಭೆ ಹತ್ತಿರ ರಾಜ್ಯ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸಿಟಿ ಎಸ್ ನಂ. 44ಬಿ ನಲ್ಲಿ ಬಾರ್ ಹಾಗೂ ಮಾಂಸಾಹಾರಿ ಹೊಟೇಲ್ ತೆರೆಯಲು ಅನುಮತಿ ಕೋರಿದ್ದು, ಅದಕ್ಕೆ ಪರವಾನಗಿ ನೀಡಬಾರದೆಂದು ಪಟ್ಟಣದ ಜನತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅಬಕಾರಿ ಸಚಿವ, ಶಾಸಕರು, ಸಂಸದರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅನುಮತಿ ನೀಡಿ ಈ ಪ್ರದೇಶದ ಶಾಂತಿ, ನೆಮ್ಮದಿ ಕದಡಬಾರದೆಂದು ವಿನಂತಿಸಿದ್ದಾರೆ.
ಈ ಪ್ರದೇಶದಲ್ಲಿ ಐತಿಹಾಸಿಕ ಪುರದ ವೀರಭದ್ರೇಶ್ವರ ದೇವಸ್ಥಾನ, ಮೆಹಬೂಬ ಸುಬಾನಿ ದರ್ಗಾ, ಶಾಲಾ-ಕಾಲೇಜುಗಳು, ಮಹಿಳಾ ಹಾಸ್ಟೇಲ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಹತ್ತಿ ಜಿನ್ನಿಂಗ್ ಮತ್ತು ಪ್ರೆಸಿಂಗ್ ಕಂಪನಿಗಳಿವೆ. ಈ ರಸ್ತೆಯಲ್ಲಿ ಬಾರ್ ತೆರೆಯುವುದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಮದ್ಯದ ಅಂಗಡಿ ಹಾಗೂ ಮಾಂಸಾಹಾರಿ ಹೋಟೆಲ್ ತೆರೆಯಲು ಅನುಮತಿ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕಾಶ ಹುಬ್ಬಳ್ಳಿ, ಚಂಬಣ್ಣ ಹಾಳದೋಟರ, ಈಶ್ವರಪ್ಪ ಸುರಕೋಡ, ಹಾಲಪ್ಪ ತುರಕಾಣಿ, ಎಸ್.ಎಸ್. ಹರ್ಲಾಪುರ, ಚನ್ನವೀರ ಅಳವಂಡಿ, ಜಿ.ಕೆ. ಮುಂಡಗನೂರ, ಎಸ್.ಎಲ್. ನೇಕಾರ, ಎ.ಎಂ. ಪಾಟೀಲ, ಹಸನಸಾಬ ಘೂಡುನಾಯ್ಕರ, ಮಲ್ಲಿಕಾರ್ಜುನ ಬೆಂಡಿಗೇರಿ, ಎಂ.ಆರ್. ದೇಸಾಯಿ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾಪಂ ಅಧ್ಯಕ್ಷೆಯಾಗಿ ಕಮಲವ್ವ ಆಯ್ಕೆ
ನವಲಗುಂದ: ತಾಲ್ಲೂಕಿನ ಕಾಲವಾಡ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಬೆಳಹಾರ ಗ್ರಾಮದ ಕಮಲವ್ವ ಬಳಗಲಿ, ಉಪಾಧ್ಯಕ್ಷರಾಗಿ ಬಸಪ್ಪ ಶಲವಡಿ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಮಲವ್ವ ಬಳಗಲಿ ಅವರಿಗೆ 9 ಸದಸ್ಯರು ಬೆಂಬಲಿಸಿದರೆ, ಪ್ರತಿಸ್ಪರ್ಧಿಯಾಗಿದ್ದ ಕರ್ಲವಾಡ ಗ್ರಾಮದ ಸುರೇಖಾ ಲಕ್ಕಣ್ಣವರ ಅವರಿಗೆ 7 ಸದಸ್ಯರು ಮಾತ್ರ ಬೆಂಬಲಿಸಿದ್ದರಿಂದ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸಪ್ಪ ಶಲವಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ. ಸವದತ್ತಿ ಕಾರ್ಯನಿರ್ವಹಿಸಿದರು.
ಗಣೇಶ ಮೂರ್ತಿ ತಯಾರಿಸಿದ ಬಾಲಕ
ಅಣ್ಣಿಗೇರಿ: ಸ್ಥಳೀಯ ಮುಂಡರಗಿ ಓಣಿಯಲ್ಲಿ 10 ವರ್ಷದ ಬಾಲಕ ಸಿದ್ದಲಿಂಗಯ್ಯ ಚನ್ನಯ್ಯ ಹಿರೇಮಠ ಕಳೆದೆರಡು ವರ್ಷಗಳಿಂದ ಗಣಪತಿ ನಿರ್ಮಿಸುವ ಕಲೆಯಲ್ಲಿ ತೊಡಗಿದ್ದಾನೆ. ಈಗ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣಪತಿಯನ್ನು ತಾನೇ ನಿರ್ಮಿಸಿದ್ದಾನೆ. ಈ ವರ್ಷ ಮನೆಯಲ್ಲಿ ಪ್ರತಿಷ್ಠಾಪಿಸಲು ದೊಡ್ಡ ಗಣಪತಿಯನ್ನು ನಿರ್ಮಿಸಿದ್ದಾನೆ. ಅಲ್ಲದೆ, ಚಿಕ್ಕ ಗಣಪತಿಯನ್ನೂ ನಿರ್ಮಿಸಿ ಬಣ್ಣ ಲೇಪಿಸಿ ಅಲಂಕರಿಸಿದ್ದಾನೆ.
2-3 ತಿಂಗಳಿಂದ ಗಣಪತಿ ತಯಾರಿಯಲ್ಲಿ ತೊಡಗಿದ್ದ ಬಾಲಕ ತನ್ನ ಗೆಳೆಯರ ಬಳಗದೊಂದಿಗೆ ಓಣಿಯಲ್ಲಿ ನಿರ್ಮಿಸಿದ ಚಿಕ್ಕ ಗಣಪತಿಯನ್ನು ಸಣ್ಣ ಸೈಕಲ್ ಮೇಲೆ ಕೂಡಿಸಿ ಮೆರವಣಿಗೆಯಲ್ಲಿ ತರುವುದನ್ನು ಗಮನಿಸಿದ ಓಣಿಯ ಹಿರಿಯರು ಬೆರಗಾಗಿದ್ದುಂಟು.
ರುಮ್ಯಾಟಿಕ್ ಹೃದಯ ಕಾಯಿಲೆಗೆ ಶಸ್ತ್ರಚಿಕಿತ್ಸೆ
ಧಾರವಾಡ: ರುಮ್ಯಾಟಿಕ್ ಹೃದಯ ಕಾಯಿಲೆ 15ರಿಂದ 25 ವಯೋವುತಿಯ ಯುವ ಸಮುದಾಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉ-ಕ ಭಾಗದಲ್ಲಿ ಜನತೆ ಅನುಕೂಲಕ್ಕಾಗಿ ಎಸ್ಡಿಎಂ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಕಾಯಿಲೆಗೆ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ಶಸ್ತ್ರ ಚಿಕಿತ್ಸಜ್ಞ ಡಾ. ರವಿಶಂಕರ ಶೆಟ್ಟಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ರುಮ್ಯಾಟಿಕ್ ಹೃದಯ ಕಾಯಿಲೆ ಎಂದರೆ ಗಂಟಲು ತೊಂದರೆಯಿಂದ ಹೃದಯ ಕವಾಟಗಳು ಸಂಪೂರ್ಣ ಹಾಳಾಗಿ ಹೃದಯ ಕ್ರಿಯೆಯಲ್ಲಿ ತೊಂದರೆ ಉಂಟಾಗುವುದಲ್ಲದೇ, ಉಸಿರಾಟದಲ್ಲಿಯೂ ತೊಂದರೆ ಉಂಟಾಗುತ್ತದೆ ಎಂದರು. ಇಲ್ಲಿನ ಟೋಲ್ನಾಕಾ ಬಳಿಯ ಅನುರಾಧಾ ಎಂಬ 13 ವರ್ಷದ ಬಾಲಕಿ ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಳು. ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭ ಈ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಅವಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಕವಾಟ ಸರಿಪಡಿಸಲಾಯಿತು. ಹೃದಯ ಚಿಕಿತ್ಸೆ ಎಂದರೆ ಹೆಚ್ಚು ಹಣ ವ್ಯಯವಾಗುತ್ತದೆ ಎಂದು ಜನಸಾಮಾನ್ಯರು ಹೃದಯ ಶಸ್ತ್ರ ಚಿಕಿತ್ಸೆಗೆ ಬರುವುದಿಲ್ಲ. ಆದರೆ, ಬಿಪಿಎಲ್ ಕಾರ್ಡ್ದಾರರಿಗೆ ಶಸ್ತ್ರಚಿಕಿತ್ಸೆ ಉಚಿತವಾಗಿದೆ ಎಂದರು.
ಎಸ್ಡಿಎಂ ಆಸ್ಪತ್ರೆ ಡಾ. ನಿರಂಜನಕುಮಾರ, ಡಾ. ಷಣ್ಮುಖ ಹಿರೇಮಠ, ಡಾ. ಬಬಲೇಶ್ವರ ಇದ್ದರು.
ಧಾರವಾಡ: ಕಣ್ಣಿನ ಉಚಿತ ತಪಾಸಣಾ ಶಿಬಿರ
ಧಾರವಾಡ: ತಿಮ್ಮಾಪುರ ಗ್ರಾಮದಲ್ಲಿ ಜ್ಞಾನಜ್ಯೋತಿ ವಿದ್ಯಾಲಯ ಮತ್ತು ವಾಸನ್ ಐ ಕೇರ್ ಜಂಟಿಯಾಗಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಯಿತು. ಸುತ್ತಲಿನ ಮರೆವಾಡ, ಅಮ್ಮಿನಬಾವಿ ಮತ್ತು ಕರಡಿಗುಡ್ಡ ಗ್ರಾಮಗಳ ಜನರು ಸಹ ಶಿಬಿರದ ಉಪಯೋಗ ಪಡೆದರು. ಸಂಸ್ಥೆ ಅಧ್ಯಕ್ಷ ಎಸ್.ಟಿ. ಹಿರೇಮಠ, ವಾಸನ್ ಐ ಕೇರ್ನ ಸಂತೋಷ್ ಕೆ., ಪ್ರಾಚಾರ್ಯ ರೋಹಿಣಿ, ಸುನೀತಾ, ಸವಿತಾ, ಗಿರೀಶ ಕುಲಕರ್ಣಿ, ಚಂದ್ರಶೇಖರ ಗನಿ ಕಣ್ಣಿನ ತಪಾಸಣೆ ನಡೆಸಿದರು.