ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಷ್ಟ್ರೀಯ ಕ್ರೀಡಾ ದಿನಾಚರಣೆ

Vishwanath S
Updated On : 2 Sept 2013, 11:16 am

ಹುಬ್ಬಳ್ಳಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಈಚೆಗೆ ಹುಬ್ಬಳ್ಳಿಯ ಅಂಜುಮನ್ ಇ-ಇಸ್ಲಾಂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಮಹಿಳೆಯರಿಗಾಗಿ ಥ್ರೋಬಾಲ್, ಪುರುಷರಿಗಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಮಹಾವಿದ್ಯಾಲಯದ ಬಿಎ 5ನೇ ಸೆಮೆಸ್ಟರ್ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆಯಿತು. ಬಿಕಾಂ ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳ ತಂಡ ಫುಟ್ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಜುಮನ್-ಇ- ಇಸ್ಲಾಂ ಶಿಕ್ಷಣ ಮಂಡಳಿ ಅಧ್ಯಕ್ಷ ಮಹ್ಮದ್ ಸಲೀಂ, ಇಮಾಮ ಹುಸೇನ್, ಮೇಜರ್ ಡಾ. ಎಂ.ಎಫ್. ಹನ್ಸಾರಿ, ಪ್ರಾಂಶುಪಾಲ ಇದ್ದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕಲಘಟಗಿ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಮಲಕನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಂತಿಮ ಪಂದ್ಯದಲ್ಲಿ ಕಲಘಟಗಿ ಕ್ಲಸ್ಟರ್‌ನ ವಿದ್ಯಾರ್ಥಿಗಳನ್ನು ಸೋಲಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ ಸಿಬ್ಬಂದಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಆಡಿನವರ ಮತ್ತು ಸದಸ್ಯರು ಗ್ರಾಪಂ ಅಧ್ಯಕ್ಷ ಕಮಲವ್ವ ಕುರಿಯವರ ಮತ್ತು ಸದಸ್ಯರು ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ ಅಭಿನಂದಿಸಿದ್ದಾರೆ.
ಬೆಳಗಾವಿ ವಿಭಾಗ ತಂಡಕ್ಕೆ ನಾಲ್ವರು ಆಯ್ಕೆ
ಧಾರವಾಡ: ಇಲ್ಲಿನ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ (ವಿಎಂಸಿಎ) ನಾಲ್ವರು ಆಟಗಾರರು, ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಕ್ರಿಕೆಟ್‌ನ ಅಂತಿಮ ಆಯ್ಕೆ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಬೆಳಗಾವಿ ವಿಭಾಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆ.ಇ. ಬೋರ್ಡ್ ಪ್ರೌಢ ಶಾಲೆ ಅಕ್ಷಯ ಹಿರೇಮಠ 16 ವರ್ಷಕ್ಕಿಂತ ಕಿರಿಯರ ಬೆಳಗಾವಿ ವಿಭಾಗ ತಂಡಕ್ಕೆ ಆಯ್ಕೆಯಾದರೆ, ಇದೇ ಶಾಲೆ ಸುಧನ್ವ ಕುಲಕರ್ಣಿ, ಅಭಿಷೇಕ ಕುಲಕರ್ಣಿ, ಜೆಎಸ್ಸೆಸ್ ಪ್ರೌಢಶಾಲೆ ವಿಶಾಲ ಹುಬ್ಬಳ್ಳಿ 14 ವರ್ಷಕ್ಕಿಂತ ಕಿರಿಯರ ಬೆಳಗಾವಿ ವಿಭಾಗ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇವರಿಗೆ ವಿಎಂಸಿಎ ತರಬೇತುದಾರ ವಸಂತ ಮುರ್ಡೇಶ್ವರ, ಪ್ರಭಾಕರ ಕಾಗಲಕರ, ಶಿವಪ್ರಕಾಶ ಶಿರಕೋಳ ಅಭಿನಂದಿಸಿದ್ದಾರೆ.
ನಾಳೆ ವಿವಿಧ ಕ್ರೀಡಾಸ್ಪರ್ಧೆ
ಕಲಘಟಗಿ: ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘವು ಶಿಕ್ಷಕ ಶಿಕ್ಷಕಿಯರಿಗಾಗಿ ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸೆಯ 3ರ ಬೆಳಗ್ಗೆ 10.30 ಗಂಟೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜರುಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಶಿಕ್ಷಕ ಶಿಕ್ಷಕಿಯರಿಗೆ ಕರ್ತವ್ಯದ ಮೇಲೆ ಭಾಗವಹಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಡಿ. ಲಾಡಸಾಬನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಬೈಲ್ ಅಂಗಡಿಯಲ್ಲಿ ಕಳವು
ಹುಬ್ಬಳ್ಳಿ: ಮೊಬೈಲ್ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸುಮಾರು ರು. 18 ಸಾವಿರ ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಿದ ಘಟನೆ ನಗರದ ರೇಲ್ವೆ ಸ್ಟೇಶನ್ ರಸ್ತೆಯ ಅಂಕುಶ ಆರ್ಕೆಡ್‌ನಲ್ಲಿ ಭಾನುವಾರ ಬೆಳಗಿನಜಾವ ಸಂಭವಿಸಿದೆ.
ಗಜಾನನ ಮೊಬೈಲ್ ಮತ್ತು ಡಿಟಿಎಚ್ ಸರ್ವಿಸ್ ಅಂಗಡಿಯಲ್ಲಿಯೇ ಕಳ್ಳತನ ನಡೆದಿದೆ. ಶೆಟರ್ಸ್‌ಗೆ ಹಾಕಿದ್ದ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಸುಮಾರು ರು. 500 ಹಣ ಹಾಗೂ ರು. 17,650 ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಿದ್ದಾರೆ. ಅಂಗಡಿಯ ಮಾಲೀಕರಾದ ಗಂಗಾಧರ ಅಶೋಕ ರತನ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೋಟ್ಪಾ ಕಾಯ್ದೆ ಉಲ್ಲಂಘನೆ
ಹುಬ್ಬಳ್ಳಿ: ಅವಳಿ ನಗರದಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಸೆ. 1ರಂದು 13 ಪ್ರಕರಣಗಳನ್ನ್ನು ದಾಖಲಿಸಿದ್ದು, ಒಟ್ಟು ರು. 2,400 ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಅಮೆಚೂರ್ ಖೋಖೋ ಪಂದ್ಯಾವಳಿ
ಧಾರವಾಡ: ಇಲ್ಲಿನ ಅಮೆಚೂರ್ ಖೋಖೋ ಸಂಸ್ಥೆ ಬರುವ ಡಿಸೆಂಬರ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ರಾಜ್ಯ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಧಾರವಾಡದಲ್ಲಿ ನಡೆಸಲು ತೀರ್ಮಾನಿಸಿದೆ.
ಅಮೆಚೂರ್ ಖೋಖೋ ಸಂಸ್ಥೆಯ ರಾಜ್ಯ ಕಾರ್ಯಕಾರಿ ಸಮಿತಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ರಾಜ್ಯ ಒಲಿಂಪಿಕ್ ಸಂಸ್ಥೆಯ ಮಾನ್ಯತೆ ಪಡೆದ ಖೋಖೋ ಸಂಸ್ಥೆ ರಾಜ್ಯಾದ್ಯಂತ ಖೋಖೋ ಕ್ರೀಡೆಯ ಬೆಳವಣಿಗೆಗೆ ಹಲವು ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಸಬ್ ಜ್ಯೂನಿಯರ್ ರಾಜ್ಯ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಸುವುದಾಗಿ ಹಾವೇರಿ ಜಿಲ್ಲಾಧ್ಯಕ್ಷ ಸಭೆಗೆ ತಿಳಿಸಿದರು.
ಪ್ರತಾಪ ಚವ್ಹಾಣ, ಎಂ.ಎಸ್. ಪಾಟೀಲ, ಎಸ್.ಆರ್. ಜಕಾತಿ, ಎಚ್.ಬಿ. ದಳವಾಯಿ, ಕೆ. ಜಗುಚಂದ್ರ, ಸುರೇಶ ಕೊನಿಸಾಗರ, ಎ.ಎಫ್. ಅಂಕಲಗಿ, ಪಿ. ಚಿನ್ನಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಇಂದು ದತ್ತಿ ಉಪನ್ಯಾಸ
ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೆ. 2ರಂದು ಬಂಡಿವಾಡ ಗ್ರಾಮದ ಗಿರೀಶ ಆಶ್ರಮದಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗಿದೆ. ಅಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗಿರೀಶ ಆಶ್ರಮದ ಶ್ರೀ ಸ.ಸ. ಬಾಳಪ್ಪ ಮಹಾರಾಜರು ವಹಿಸುವರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಭಾಗವಹಿಸುವರು. ಗಿರೀಶ್ ಟ್ರಸ್ಟ್ ಅಧ್ಯಕ್ಷ ಫಕ್ಕೀರಪ್ಪ ಮೆಣಸಿನಕಾಯಿ ಅಧ್ಯಕ್ಷತೆ ವಹಿಸುವರು. 'ಶರಣರ-ಸಂತರ ಜೀವನ ಸಂದೇಶ' ಕುರಿತು ಕನ್ನಡ ಪ್ರಾಧ್ಯಾಪಕ ಡಾ. ಎ.ಸಿ. ವಾಲಿ ಉಪನ್ಯಾಸ ನೀಡುವರು. ಗುರುಸಿದ್ದೇಶ್ವರ ಬ್ಯಾಂಕ್ ಹಾಗೂ ಜಯಮ್ಮ ಬಾಗಿ ದತ್ತಿ ದಾನಿಗಳಾಗಿದ್ದಾರೆ.
ಇಂದು ಉಚಿತ ನೇತ್ರ ಚಿಕಿತ್ಸೆ
ಹುಬ್ಬಳ್ಳಿ:  ಇಲ್ಲಿನ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಮತ್ತು ತಿಮ್ಮಸಾಗರ ಗ್ರಾಮದ ಬಸವೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಸೆ. 2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಉಚಿತ ನೇತ್ರ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಶಿವಪುತ್ರಪ್ಪ ಅಂಗಡಿ 9740414909, ಮಣಿಕಂಠ ಶ್ಯಾಗೋಟಿ 9980331120, ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ 0836-2272345ನ್ನು ಸಂಪರ್ಕಿಸಬಹುದು.
ನಿಯಮ ಉಲ್ಲಂಘನೆ
ಹುಬ್ಬಳ್ಳಿ: ಆ. 31ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 497 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರು. 1,21,700 ದಂಡ  ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.
ಅಕ್ರಮ ಮದ್ಯ ಮಾರಾಟ ಓರ್ವನ ಬಂಧನ
ಧಾರವಾಡ: ಅಕ್ರಮವಾಗಿ ಮದ್ಯದ ಪಾಕೇಟ್‌ಗಳನ್ನು ಮಾರುತ್ತಿದ್ದ ಆರೋಪದ ಮೇಲೆ ತಾಲೂಕಿನ ಡೋರಿ ಗ್ರಾಮದ ಓರ್ವನನ್ನು ಅಳ್ನಾವರ ಠಾಣಾ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ. ಮಾರುತಿ ಮಸನಪ್ಪ ಹಿರೇಕಾರ ಎಂಬುವನೇ ಬಂಧಿತ ಆರೋಪಿ. ಅಳ್ನಾವರ ಸಮೀಪದ ಮಾನಕಾಪುರದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ರು. 1500 ಮೌಲ್ಯದ 33 ವಿಸ್ಕಿ ಪಾಕೇಟ್‌ಗಳು ಮತ್ತು ರು. 100 ನಗದು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಪಿಎಸ್‌ಐ ಬಿ.ಡಿ. ಜಾಧವ, ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಾವಿಗೆ ಬಿದ್ದು ಸಾವು
ಧಾರವಾಡ: ತಾಲೂಕಿನ ಇಟ್ಟಿಗಟ್ಟಿಯಲ್ಲಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ಲಕ್ಷ್ಮಣ ಗಣಪತೆಪ್ಪ ವಾಲೀಕಾರ (25) ಸಾವನ್ನಪ್ಪಿದ ಯುವಕ. ಕಳೆದ ಮೂರು ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈತ, ಕಳೆದ ಆ. 28ರಂದು ಮನೆಯಿಂದ ಕಾಣೆಯಾಗಿದ್ದ. ಭಾನುವಾರ ಬೆಳಿಗ್ಗೆ ಗ್ರಾಮದ ಸಮೀಪದ ಹೊಲದಲ್ಲಿನ ಬಾವಿಯೊಂದರಲ್ಲಿ ಆತನ ಶವ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement