ಸ್ಪರ್ಧಾ ಕಣದಲ್ಲಿ 100ನೇ ಸಂಚಿಕೆ ಸ್ಫೂರ್ತಿ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 1
ಎಂಟು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಸಾರ್ಥಕ ಸೇವೆ ನೀಡುತ್ತಿರುವ ಇಲ್ಲಿನ ಸ್ಪರ್ಧಾಸ್ಫೂರ್ತಿ ಮಾಸ ಪತ್ರಿಕೆಯು 99 ಸಂಚಿಕೆ ಪೂರೈಸಿದ್ದು, ಇದೀಗ ಶತಮಾಸದೊಂದಿಗೆ ನೂರನೇ ಸಂಚಿಕೆ ಬಿಡುಗಡೆಗೆ ಸಿದ್ಧವಾಗಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ಪರ್ಧಾಸ್ಫೂರ್ತಿ ಹಾಗೂ ಉದ್ಯೋಗ ವಾರ್ತೆಯ ಪ್ರಧಾನ ಸಂಪಾದಕ ಲಕ್ಷ್ಮಣ ಉಪ್ಪಾರ, 2005ರ ಜೂನ್ ತಿಂಗಳಲ್ಲಿ ಸಾವಿರ ಪ್ರತಿಗಳ ಬಿಡುಗಡೆಯಿಂದ ಆರಂಭವಾದ ಈ ಪತ್ರಿಕೆ, ಸದ್ಯ ಒಂದು ಲಕ್ಷ ಪ್ರತಿಗಳ ಪ್ರಸಾರ ಹೊಂದಿದೆ. ಅಲ್ಲದೇ, ನಾಲ್ಕು ಲಕ್ಷಕ್ಕೂ ಹೆಚ್ಚು ಓದುಗರನ್ನು ತನ್ನತ್ತ ಸೆಳೆದುಕೊಂಡಿದೆ. ಆರಂಭವಾದ ದಿನದಿಂದಲೂ ಯಾವುದೇ ಕಷ್ಟಕರ ಸ್ಥಿತಿಯಲ್ಲೂ ನಿರಂತರವಾಗಿ ಪತ್ರಿಕೆ ಹೊರತರಲಾಗಿದ್ದು, ಓದುಗರ ಮೆಚ್ಚುಗೆಗೆ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದರು.
6ರಂದು ಸಂಭ್ರಮ: ಸ್ಪರ್ಧಾಸ್ಫೂರ್ತಿ ಮಾಸ ಪತ್ರಿಕೆಯನ್ನು ಆರಂಭದಲ್ಲಿ ಅಭಿಮಾನ ಪ್ರಿಟಿಂಗ್ ಪ್ರೆಸ್ನಲ್ಲಿ ಮುದ್ರಣಗೊಳಿಸಲಾಗುತ್ತಿತ್ತು. ಗುಣಮಟ್ಟದ ದೃಷ್ಟಿಯಿಂದ ಪ್ರಸ್ತುತ ಬೆಂಗಳೂರಿನ ಎಂಎನ್ಎಸ್ ಪ್ರಿಟಿಂಗ್ ಪ್ರೆಸ್ನಲ್ಲಿ ಮುದ್ರಣಗೊಳಿಸಲಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪತ್ರಿಕೆಗೆ ಬೇಡಿಕೆ ಇದೆ. ನೂರು ಸಂಚಿಕೆಯ ಹಿನ್ನೆಲೆಯಲ್ಲಿ ಸೆ. 6ರಂದು ವಿಶೇಷ ಸಮಾರಂಭ ಹಮ್ಮಿಕೊಂಡಿದ್ದು, ಅತಿಥಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ 100ನೇ ಸಂಚಿಕೆ ಬಿಡುಗಡೆಗೊಳಿಸಲಾಗುವುದು.
ಈ ಸಂಭ್ರಮದ ಸಂದರ್ಭದಲ್ಲಿ ಸ್ಪರ್ಧಾಸ್ಫೂರ್ತಿಯೊಂದಿಗೆ ಜ್ಞಾನ ಸಂಗಾತಿ ಎಂಬ ಮಾಸ ಪತ್ರಿಕೆಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ, ಸ್ಪರ್ಧಾಸ್ಫೂರ್ತಿ ಮಾಸ ಪತ್ರಿಕೆಯೊಂದಿಗೆ ಉದ್ಯೋಗ ಮಾಹಿತಿ ಸಲುವಾಗಿ 2007ರಲ್ಲಿ ಆರಂಭವಾದ ಉದ್ಯೋಗ ವಾರ್ತೆ ಮಾಸ ಪತ್ರಿಕೆ ಸಹ 150ನೇ ಸಂಚಿಕೆ ಬಿಡುಗಡೆ ಸಂಭ್ರಮದಲ್ಲಿದೆ ಎಂದರು.
1997ರಲ್ಲಿ ಸ್ನೇಹಿತ ಹಾಗೂ ಸಂಬಂಧಿಕರ ಸಹಾಯದಿಂದ ಇವೆರಡು ಪತ್ರಿಕೆಗಳೊಂದಿಗೆ ಕ್ಲಾಸಿಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ತರಬೇತಿಗಾಗಿ 100 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಅಲ್ಲದೇ, ಅದೇ ವರ್ಷದಲ್ಲಿ ನಗರದಲ್ಲಿ ಮೂರು ಶಾಖೆಗಳನ್ನು ತೆರೆಯಲಾಗಿತ್ತು.
ಆದರೆ, ಈ ಮೂರು ಶಾಖೆಗಳ ನಿರ್ವಹಣೆಯಿಂದ ಹೆಚ್ಚು ಆರ್ಥಿಕ ಹೊರೆಯಾದ್ದರಿಂದ ಇಲ್ಲಿನ ಶಂಕರ ಪ್ಲಾಜ್ದಲ್ಲಿ ಮಾತ್ರ ತರಬೇತಿ ಮುಂದುವರೆಸುವ ನಿರ್ಧಾರ ಕೈಗೊಳ್ಳಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಓದುಗರ ಸಂಖ್ಯೆ ಜಾಸ್ತಿಯಾಗಿದ್ದರಿಂದ 1998ರಲ್ಲಿ ಈ ಸಂಸ್ಥೆ ಕ್ಲಾಸಿಕ್ ಕೆಎಎಸ್ ಆ್ಯಂಡ್ ಐಎಎಸ್ ಸ್ಟಡಿ ಸರ್ಕಲ್ ಆರಂಭಗೊಳಿಸಲಾಯಿತು. ಸದ್ಯ ಸ್ಟಡಿ ಸರ್ಕಲ್ನಲ್ಲಿ ಕೆಎಎಸ್, ಐಎಎಸ್, ಪಿಎಸ್ಐ, ಪಿಸಿ, ಎಡಿಸಿ, ಎಫ್ಡಿಸಿ, ಎನ್ಟಿಟಿಎಫ್, ಎಂಬಿಎ, ಬಿ.ಇಡಿ, ಡಿ.ಇಡಿ ಹೀಗೆ ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ನೀಡಲಾಗುತ್ತಿದೆ.
ಅಲ್ಲದೇ, ನಾಲ್ಕು ವರ್ಷಗಳ ಹಿಂದೆ ಕ್ಲಾಸಿಕ್ ಲಿಟಲ್ ಬರ್ಡ್ಸ್ ಶಾಲೆ ತೆರೆದಿದ್ದು, ಸದ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೆಯೇ, 150ಕ್ಕೂ ಹೆಚ್ಚು ಸಿಬ್ಬಂದಿ ಈ ಸಂಸ್ಥೆ ಹೊಂದಿದೆ ಎಂದರು.
ಸಂಸ್ಥೆ ಬೆಳವಣಿಗೆಯ ಹಿಂದೆ ಅಪರ ಜಿಲ್ಲಾಧಿಕಾರಿ ಲಿಂಗಣ್ಣ ಗುಂಡಳ್ಳಿ, ಆರ್.ವಿ. ಚಿಟಗುಪ್ಪ, ತೇಜಸ್ವಿನಿ, ಐ.ಜಿ. ಚೌಗಲಾ, ಪ್ರೊ. ಎಂ.ವೈ. ಸಾವಂತ, ವಿಜಯ ದೊಡಮನಿ, ಅಮಿಟ್ರಾನ್, ಭಾರತ ಬುಕ್ ಸ್ಟಾಲ್ನ ಹುದ್ದಾರ, ರಾಜು ದೊಂಡೆ, ಕಲ್ಲಯ್ಯ ವಸ್ತ್ರದ, ಬಸವರಾಜ ಬಂಗಾರಿ, ಸುಜಾತಾ ಪರಾಳಶೆಟ್ಟರ್, ರವಿ ಬಿಜಾಪುರ, ಶಿವಲೀಲಾ ಪೂಜಾರ, ಎಂ.ಆರ್. ಚುರಮರಿ, ಎಚ್.ಆರ್. ವಸ್ತ್ರದ ಸಂಸ್ಥೆಯ ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿ ಸೇರಿದಂತೆ ಅನೇಕರು ಸಹಾಯ ಮತ್ತು ಸಹಕಾರ ನೀಡಿದ್ದಾರೆ ಎಂದು ಲಕ್ಷ್ಮಣ ಅವರು ಸ್ಮರಿಸಿದರು.