ಕ್ರೀಡೆಗೆ ಆದ್ಯತೆ ನೀಡುವ ಕಾಲೇಜಿಗೆ ಅನುದಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 3
ಹು-ಧಾ ಮಹಾನಗರ ಪಾಲಿಕೆಯ ಈಜುಕೋಳದಲ್ಲಿ ಮಂಗಳವಾರ ಕರ್ನಾಟಕ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಅಂತರ್ ಕಾಲೇಜು ಮಟ್ಟದ ಈಜು ಸ್ಪರ್ಧೆಯಲ್ಲಿ 15 ಕಾಲೇಜುಗಳು ಪಾಲ್ಗೊಂಡಿದ್ದವು.
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ 20 ವಿದ್ಯಾರ್ಥಿಗಳು, 7 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಅಂತರ್ ಕಾಲೇಜು ಈಜು ಸ್ಪರ್ಧೆ ಉದ್ಘಾಟಿಸಿದ ಮಹಾನಗರ ಪಾಲಿಕೆ ಕಮಿಷನರ್ ರಮಣದೀಪ್ ಚೌಧರಿ ಅವರು ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕವಿವಿ ಸಿಂಡಿಕೇಟ್ ಸದಸ್ಯ, ಮಾಜಿ ಮಹಾಪೌರ ವೀರಣ್ಣ ಸವಡಿ ಅವರು, ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇನ್ನೂರಕ್ಕೂ ಹೆಚ್ಚು ಕಾಲೇಜುಗಳಿದ್ದರೂ 15 ಕಾಲೇಜುಗಳು ಮಾತ್ರ ಪಾಲ್ಗೊಂಡಿರುವುದು ವಿಷಾದಕರ ಸಂಗತಿ. ಹುಬ್ಬಳ್ಳಿಯ ರಾಜ್ನಗರ ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುತ್ತಿದ್ದು, ಮುಂಬರುವ ಸಿಂಡಿಕೇಟ್ ಸಭೆಯಲ್ಲಿ ಕ್ರೀಡೆಗೆ ಆದ್ಯತೆ ನೀಡುವ ಕಾಲೇಜುಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಈ ರೀತಿಯ ಕ್ರೀಡಾ ಚಟುವಟಿಕೆಗೆ ಮಹಾನಗರ ಪಾಲಿಕೆ ಅಗತ್ಯ ನೆರವು ನೀಡುವುದಕ್ಕೆ ಬದ್ಧವಾಗಿದ್ದು, ಕ್ರೀಡಾ ಚಟುವಟಿಕೆಯನ್ನು ಎಲ್ಲ ಕಾಲೇಜುಗಳು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ಅಂತರ್ ಕಾಲೇಜು ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜನಗರ ಕಾಲೇಜು ಪ್ರಾಚಾರ್ಯೆ ಗೀತಾ ಎಚ್.ಬಿ., ಡಾ. ಬಿರಾದಾರ, ಪ್ರೊ. ದುರದುಂಡಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸೋಮಶೇಖರ ಪಟ್ಟಣಶೆಟ್ಟಿ ಇತರರಿದ್ದರು.