ಶೇ. 75 ಹಳ್ಳಿ ವಿದ್ಯಾರ್ಥಿಗಳಿಂದ ಅಶ್ಲೀಲ ಚಿತ್ರ ವೀಕ್ಷಣೆ
ಹುಬ್ಬಳ್ಳಿ: ಶೇ. 75ಕ್ಕಿಂತಲೂ ಹೆಚ್ಚು ಗ್ರಾಮೀಣ ಭಾಗದ ಪಿಯು ವಿದ್ಯಾರ್ಥಿಗಳು ಇಂಟರ್ನೆಟ್, ಮೊಬೈಲ್ಗಳಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ರೆಸ್ಕ್ಯೂ ಚಾರಿಟೆಬಲ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ ಕ್ಲಿಫರ್ಡ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರೇತರ ಸಂಸ್ಥೆಯಾಗಿರುವ ರೆಸ್ಕ್ಯೂನಿಂದ ಕಳೆದ 14 ತಿಂಗಳಿನಿಂದ ರಾಜ್ಯದ ಮೂರು ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ಸಮೀಕ್ಷೆ ಪ್ರಕಾರ ಸರಾಸರಿ ಶೇ. 65 ವಿದ್ಯಾರ್ಥಿಗಳು ಮತ್ತು ಶೇ. 13ರಷ್ಟು ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ, ವಿವಾಹಪೂರ್ವ ಲೈಂಗಿಕತೆ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರು ಮಹಾನಗರವೊಂದರಲ್ಲೇ 34 ಪದವಿ ಮಹಾವಿದ್ಯಾಲಯಗಳಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಪ್ರತಿದಿನ ಕನಿಷ್ಠ 40 ಅಶ್ಲೀಲ ಚಿತ್ರಗಳನ್ನು ನೋಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಹಾನಗರಗಳ ಶೇ. 60ರಷ್ಟು ವಿದ್ಯಾರ್ಥಿನಿಯರೂ ಕೂಡ ಅಶ್ಲೀಲ ಚಿತ್ರಗಳನ್ನು ತಮ್ಮ ಪ್ರಿಯಕರನೊಂದಿಗೆ ಸೇರಿ ವೀಕ್ಷಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಹೇಳಿದರು.
ಭಾರತೀಯ ಯುವಕರಲ್ಲಿ ಹೆಚ್ಚುತ್ತಿರುವ ಅಶ್ಲೀಲ ಚಿತ್ರಗಳ ವೀಕ್ಷಣೆ, ವಿವಾಹಪೂರ್ವ ಲೈಂಗಿಕತೆಯಿಂದಾಗಿ ಅವರ ವೈವಾಹಿಕ ಜೀವನದಲ್ಲಿ ಏರುಪೇರುಗಳು ಆಗುತ್ತಿವೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ವಿವಾಹಪೂರ್ವ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ವಿವಾಹಪೂರ್ವ ಗರ್ಭಪಾತದಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಪ್ರತಿ ವಾರ ಜಗತ್ತಿನಲ್ಲಿ 7 ಲಕ್ಷ ಗರ್ಭಪಾತಗಳು ನಡೆಯುತ್ತಿವೆ. ಇದರಲ್ಲಿ ಬಹುಪಾಲು ವಿವಾಹಪೂರ್ವ ಲೈಂಗಿಕತೆ ಮತ್ತು ಭಾರತೀಯ ಸಂಪ್ರದಾಯದಲ್ಲಿ ವಿವಾಹ ಪೂರ್ವ ಲೈಂಗಿಕತೆ ನಿಷಿದ್ಧವಾಗಿರುವ ಕಾರಣ ಭಾರತದಲ್ಲೂ ಈ ಕಾರಣಕ್ಕೆ ಗರ್ಭಪಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿನ 89 ಪದವಿ ಪೂರ್ವ ಮಹಾವಿದ್ಯಾಲಯಗಳ 2800 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ವಿವಿಧ ರೀತಿಯ ಪ್ರಶ್ನೆಗಳ ಆಧಾರದ ಮೇಲೆ ಈ ಸಮೀಕ್ಷೆ ಮಾಡಲಾಗಿದೆ. ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುವ ಭಾರತದಲ್ಲಿ ಯುವಕರು ಇಂಟರ್ನೆಟ್ ಮುಖಾಂತರ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದು, ಇದು ಅವರ ಭವಿಷ್ಯದ ವೈವಾಹಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಭಾರತದಲ್ಲಿ ಎಲ್ಲ ಅಶ್ಲೀಲ ವೆಬ್ಸೈಟ್ಗಳ ನಿರ್ಬಂಧ ವಿಧಿಸಬೇಕು. ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಭಾರತದಲ್ಲಿ ಏಕೆ ಅಶ್ಲೀಲ ವೆಬ್ಸೈಟ್ಗಳನ್ನು ನಿರ್ಬಂಧಿಸಬೇಕು ಎನ್ನುವುದಕ್ಕೆ 13 ಸಾವಿರ ಕಾರಣಗಳನ್ನು ನೀಡಿದ್ದಾರೆ. ಭಾರತದಲ್ಲಿ ವೇಶ್ಯಾವಾಟಿಕೆ ಪ್ರಮಾಣ ದಿನ ದಿನಕ್ಕೆ ಹೆಚ್ಚುತ್ತಿದ್ದು, ಜಗತ್ತಿನ ಒಟ್ಟು ವೇಶ್ಯಾವಾಟಿಕೆ ಚಟುವಟಿಕೆ ಪೈಕಿ ಅರ್ಧಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತಿವೆ. ಜಗತ್ತಿನಲ್ಲಿ ಅತಿದೊಡ್ಡ ಮೂರು ಅಪರಾಧಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ವೇಶ್ಯಾವಾಟಿಕೆಯನ್ನು ಗುರುತಿಸಿದೆ. ಭಾರತದಲ್ಲಿ ನಡೆಯುವ ಒಟ್ಟು ಗರ್ಭಪಾತಗಳಲ್ಲಿ ಶೇ. 25 ಗರ್ಭಪಾತಗಳು ವಿವಾಹಪೂರ್ವ ಲೈಂಗಿಕತೆಯಿಂದ ಆಗುತ್ತಿದೆ ಎಂದು ಅಭಿಷೇಕ ಕ್ಲಿಫರ್ಡ್ ತಿಳಿಸಿದರು.
ಶೇ. 13 ವಿದ್ಯಾರ್ಥಿನಿಯರೂ ಅಶ್ಲೀಲ ಚಿತ್ರ ವಿಕ್ಷಣೆ
ಸರ್ಕಾರೇತರ ಸಂಸ್ಥೆ ರೆಸ್ಕ್ಯೂನಿಂದ 14 ತಿಂಗಳಿನಿಂದ ರಾಜ್ಯದ 3 ಜಿಲ್ಲೆಗಳಲ್ಲಿ ಮಾಡಿದ ಸಮೀಕ್ಷೆ ಪ್ರಕಾರ ಸರಾಸರಿ ಶೇ.65 ವಿದ್ಯಾರ್ಥಿಗಳು, ಶೇ.13 ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ, ವಿವಾಹಪೂರ್ವ ಲೈಂಗಿಕತೆ, ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರು ಮಹಾನಗರವೊಂದರಲ್ಲೇ 34 ಪದವಿ ಕಾಲೇಜುಗಳಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ನಿತ್ಯ ಕನಿಷ್ಠ 40 ಅಶ್ಲೀಲ ಚಿತ್ರಗಳನ್ನು ನೋಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಹಾನಗರಗಳ ಶೇ. 60 ವಿದ್ಯಾರ್ಥಿನಿಯರೂ ಅಶ್ಲೀಲ ಚಿತ್ರಗಳನ್ನು ತಮ್ಮ ಪ್ರಿಯಕರನೊಂದಿಗೆ ಸೇರಿ ವೀಕ್ಷಿಸುತ್ತಾರೆಂದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.