ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಕ್ಕಿಹೊಂಡ ಎಪಿಎಂಸಿಗೆ ಸ್ಥಳಾಂತರ

Vishwanath S
Updated On : 6 Sept 2013, 11:00 am

ಹುಬ್ಬಳ್ಳಿ: ಇಲ್ಲಿಯ ಅಕ್ಕಿಹೊಂಡದ ವ್ಯಾಪಾರಸ್ಥರು ಅಮರಗೋಳ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಳ್ಳಲು ಕೊನೆಗೂ ನಿರ್ಧರಿಸಿದ್ದಾರೆ.
ಗುರುವಾರ ಸಂಜೆ ನಡೆದ ಅಕ್ಕಿಹೊಂಡ ವ್ಯಾಪಾರಸ್ಥರ ಸಭೆಯಲ್ಲಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಸೆ. 6ರಂದು ಬೆಳಗ್ಗೆ ವ್ಯಾಪಾರಸ್ಥರೆಲ್ಲ ಅಮರಗೋಳ ಎಪಿಎಂಸಿ ಯಾರ್ಡ್‌ಗೆ ತೆರಳಿ, ಭೂಮಿ ಪೂಜೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಕ್ಕಿಹೊಂಡದಲ್ಲಿ ಲಾರಿಗಳಿಂದ ಸರಕು ಇಳಿಸದಿರಲು ಹಾಗೂ ಸದ್ಯ ಅಕ್ಕಿಹೊಂಡದಲ್ಲಿನ ಗೋದಾಮುಗಳಲ್ಲಿರುವ ಸರಕನ್ನು ಸೆ. 11ರೊಳಗೆ ಖಾಲಿ ಮಾಡಲು ನಿರ್ಧರಿಸಲಾಯಿತು. ಸೆ. 11ರೊಳಗೆ ಗೋದಾಮಿನಲ್ಲಿನ ಸರಕು ಖಾಲಿಯಾಗದಿದ್ದರೆ, ಆ ಸರಕನ್ನು ಎಪಿಎಂಸಿಗೆ ಸ್ಥಳಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವರ್ತಕ ರಮೇಶ ಭಾಪಣಾ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಇದಕ್ಕೂ ಮೊದಲು ಗುರುವಾರ ದಿನವಿಡಿ ವ್ಯಾಪಾರಸ್ಥರು ಮಾರುಕಟ್ಟೆ ಸ್ಥಳಾಂತರಿಸದೇ ಇರುವ ಬಗ್ಗೆಯೇ ಚರ್ಚಿಸುತ್ತಿದ್ದರು. ಆದರೆ, ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರಿಸಲು ಕಠಿಣ ನಿಲುವು ತಳೆದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಂದಾಗಿ ಗುರುವಾರ ಅಕ್ಕಿಹೊಂಡದಲ್ಲಿ ವ್ಯಾಪಾರ ಸ್ಥಗಿತಗೊಂಡಿತಲ್ಲದೇ, ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿರುವ ವರ್ತಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಪಿಎಂಸಿ ಯಾರ್ಡ್‌ನಲ್ಲಿ ಬೆಳಗ್ಗೆ ನಡೆದಿದ್ದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಬೆಳಗಿನ ಅವಧಿಯಲ್ಲಿ ಅಕ್ಕಿಹೊಂಡ ಪ್ರವೇಶಿಸುತ್ತಿದ್ದ ಸರಕು ಹೊತ್ತಿದ್ದ ಸುಮಾರು ಮೂರ್ನಾಲ್ಕು ಲಾರಿಗಳನ್ನು ತಡೆದ ಅಧಿಕಾರಿಗಳು, ಲಾರಿಗಳನ್ನು ಎಪಿಎಂಸಿ ಯಾರ್ಡ್‌ಗೆ ಕಳುಹಿಸಿದರು. ಮುಂದಿನ ದಿನಗಳಲ್ಲಿ ಸರಕು ಹೊತ್ತ ವಾಹನಗಳು ಅಕ್ಕಿಹೊಂಡ ಪ್ರವೇಶಿಸದಂತೆ ಸೂಚನೆಯನ್ನೂ ನೀಡಿದ್ದರು.
ಗುರುವಾರ ಬೆಳಗ್ಗೆ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಮಂಡಿಸಿದ್ದ ಅಕ್ಕಿಹೊಂಡದಲ್ಲಿ ಉಪ ಮಾರುಕಟ್ಟೆ ರಚನೆಯ ಬೇಡಿಕೆಯನ್ನು ಸಚಿವ ಸಂತೋಷ ಲಾಡ್ ತಳ್ಳಿಹಾಕಿದರು. ಅಕ್ಕಿಹೊಂಡದ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಲು ಸಾಧ್ಯವಿಲ್ಲ. ಹೀಗಾಗಿ ಎಪಿಎಂಸಿಯಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.
ಎಪಿಎಂಸಿ ಯಾರ್ಡ್‌ನಲ್ಲಿ ಯಾವುದೇ ಸೌಲಭ್ಯವಿಲ್ಲವೆಂದು ವರ್ತಕರು ದೂರಿದ್ದರಿಂದ ಸ್ಥಳ ಪರಿಶೀಲನೆ ನಡೆದ ಸಚಿವ ಲಾಡ್, ನೀರು, ವಿದ್ಯುತ್ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಿರುವುದನ್ನು ಗಮನಿಸಿದರು. ಕಟ್ಟಡಗಳ ನಿರ್ಮಾಣವೂ ಮುಗಿಯುವ ಹಂತದಲ್ಲಿದ್ದು, ಬಿಎಸ್‌ಎನ್‌ಎಲ್ ದೂರವಾಣಿ ಕೇಂದ್ರದ ಟವರ್ ಸ್ಥಾಪನೆಗೆ ರು. 13 ಲಕ್ಷ ಮಂಜೂರಾಗಿದೆ. ಇನ್ನೂ 15 ದಿನಗಳಲ್ಲಿ ಟವರ್ ನಿರ್ಮಾಣದ ಕಾರ್ಯವೂ ಪೂರ್ಣಗೊಳ್ಳುವುದಾಗಿ ವ್ಯಾಪಾರಸ್ಥರಿಗೆ ತಿಳಿಸಿದರು.
ಅಕ್ಕಿಹೊಂಡದಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಸೆ. 5ರಿಂದ ವ್ಯಾಪಾರ ಸ್ಥಗಿತಗೊಳಿಸಿತ್ತಾದರೂ ಬೆರಳೆಣಿಕೆಯ ವ್ಯಾಪಾರಸ್ಥರು ಅಂಗಡಿ ತೆರೆದು ನಿತ್ಯದಂತೆ ವ್ಯಾಪಾರ ನಡೆಸಿದ್ದರು. ಇನ್ನುಳಿದಂತೆ ಹೆಚ್ಚಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ವ್ಯಾಪಾರ ಸ್ಥಗಿತಗೊಳಿಸಿರುವುದು ಕಂಡುಬಂದಿತು.
ವ್ಯಾಪಾರಸ್ಥರು ಹೈಕೋರ್ಟ್‌ಗೆ ಲಿಖಿತ ರೂಪದಲ್ಲಿ ತಿಳಿಸಿದಂತೆ ಸೆ. 4ಕ್ಕೆ ಅಕ್ಕಿಹೊಂಡದಲ್ಲಿ ವಹಿವಾಟು ಸ್ಥಗಿತಗೊಳಿಸಬೇಕಿತ್ತು. ಆದರೆ, ಎಪಿಎಂಸಿಯಲ್ಲಿ ಮೂಲ ಸೌಕರ್ಯ ಇಲ್ಲ ಎಂದು ದೂರಿದ ವ್ಯಾಪಾರಸ್ಥರು ಮಾರುಕಟ್ಟೆ ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದರು. ಈ ವಾದ ಅಲ್ಲಗಳೆದ ಎಪಿಎಂಸಿ ಹಾಗೂ ಜಿಲ್ಲಾಡಳಿತ ಹೈಕೋರ್ಟ್ ನಿರ್ದೇಶನದಂತೆ ಸ್ಥಳಾಂತರ ಕಡ್ಡಾಯಗೊಳಿಸಿದೆ. ಸೆ. 4ರ ರಾತ್ರಿವರೆಗೂ ನೀಡಿದ ಗಡುವಿಗೆ ವ್ಯಾಪಾರಸ್ಥರು ಸೊಪ್ಪು ಹಾಕ್ಕದಿದ್ದರಿಂದ ಮಾರುಕಟ್ಟೆಗೆ ಸರಕು ಸರಬರಾಜು ಮಾಡುವುದಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ಅಕ್ಕಿಹೊಂಡ ಮಾರುಕಟ್ಟೆಗೆ ಸರಕು ವಾಹನಗಳು ಪ್ರವೇಶಿಸದಂತೆ ಮೂರು ತಂಡದಲ್ಲಿದ್ದ ಅಮರಗೋಳ ಎಪಿಎಂಸಿ ಅಧಿಕಾರಿಗಳ ಕಠಿಣ ಕ್ರಮ ತೆಗೆದುಕೊಂಡಿದೆ. ಇದರಿಂದ ಅನಿವಾರ್ಯವಾಗಿ ಬೆಳಗ್ಗೆ 6 ಗಂಟೆಯಿಂದ ಅಕ್ಕಿಹೊಂಡ ಪ್ರದೇಶದಲ್ಲಿನ ಎಲ್ಲ ಅಂಗಡಿಗಳು ಬೀಗ ಹಾಕಿದ್ದು, ವ್ಯಾಪಾರ ಸ್ಥಗಿತಗೊಂಡಿತ್ತು.
ಅಕ್ಕಿಹೊಂಡ ಮಾರುಕಟ್ಟೆಗೆ ಬರುವ ಸರಕು ವಾಹನಗಳನ್ನು ಬಂಕಾಪುರ ಚೌಕ್ ಬಳಿ ತಡೆಯಲಾಗುತ್ತಿದ್ದು, ಸರಕನ್ನು ಎಪಿಎಂಸಿ ಯಾರ್ಡ್‌ನಲ್ಲಿ ಇಳಿಸುವಂತೆ ಸೂಚಿಸಲಾಗುತ್ತಿದೆ.
ಅಕ್ಕಿ, ಗೋದಿ, ಟೆಂಗಿನಕಾಯಿ ಸೇರಿದಂತೆ ವಿವಿಧ ಸರಕು ಸಾಗಿಸುತ್ತಿದ್ದ ಒಟ್ಟು ಆರು ಲಾರಿಗಳಿಗೆ ಅಕ್ಕಿಹೊಂಡ ಮಾರುಕಟ್ಟೆ ಪ್ರವೇಶ ನಿಷೇಧಿಸಲಾಯಿತು. ಈ ಸಂದರ್ಭ ಅಕ್ಕಿಹೊಂಡ ಮಾರುಕಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಅಮರಗೋಳ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಏನಿದು ಅಕ್ಕಿಹೊಂಡ ಸಮಸ್ಯೆ?
ಹುಬ್ಬಳ್ಳಿಯ ಅಕ್ಕಿಹೊಂಡವನ್ನು ಎಪಿಎಂಸಿ ಉಪ ಮಾರುಕಟ್ಟೆಯನ್ನಾಗಿ ರಾಜ್ಯ ಸರ್ಕಾರ 3-1-1991ರಂದು ನೋಟಿಫೈ ಮಾಡಿತ್ತು. ನಂತರ 14-4-2007ರಂದು ಸರ್ಕಾರ ಅಕ್ಕಿಹೊಂಡ ಉಪ ಮಾರುಕಟ್ಟೆಯನ್ನು ಡಿನೋಟಿಫೈ ಮಾಡಿ, ಇಲ್ಲಿಯ ಮಾರುಕಟ್ಟೆಯನ್ನು ಅಮರಗೋಳ ಎಪಿಎಂಸಿಗೆ ಸ್ಥಳಾಂತರಿಸಲು ಆದೇಶಿಸಿತು.
ಅಮರಗೋಳ ಎಪಿಎಂಸಿ ಯಾರ್ಡ್‌ನಲ್ಲಿ ಮೂಲ ಸೌಕರ್ಯಗಳು ಇಲ್ಲವೆಂಬ ಕಾರಣದಿಂದ ಅಕ್ಕಿಹೊಂಡದ ವ್ಯಾಪಾರಸ್ಥರು ಸ್ಥಳಾಂತರಕ್ಕೆ ನಿರಾಕರಿಸಿದರು.
ಎಪಿಎಂಸಿ ಯಾರ್ಡ್‌ಗೆ ಈ ಮಾರುಕಟ್ಟೆ ಸ್ಥಳಾಂತರಿಸಲು ಮುಂದಾಗಿದ್ದ ಸರ್ಕಾರದ ವಿರುದ್ಧ ವ್ಯಾಪಾರಸ್ಥರು ಧಾರವಾಡದ ಅಂದಿನ ಹೈಕೋರ್ಟ್ ಸಂಚಾರಿ ಪೀಠದಲ್ಲಿ ದೂರು ದಾಖಲಿಸಿದ್ದರು. ಆದರೆ, ಮಾರುಕಟ್ಟೆ ಸ್ಥಳಾಂತರಿಸುವಂತೆ ಹೈಕೋರ್ಟ್ ತೀರ್ಪು ನೀಡಿತು. ಈ ತೀರ್ಪು ಪ್ರಶ್ನಿಸಿ ವ್ಯಾಪಾರಸ್ಥರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿರುವಾಗ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲವೆಂಬುದು ಇಲ್ಲಿನ ವ್ಯಾಪಾರಸ್ಥರ ವಾದ. ಆದರೆ, ವ್ಯಾಪಾರಸ್ಥರು ಹೈಕೋರ್ಟ್‌ನಲ್ಲಿ ಸೆ. 4ರ ವರೆಗೆ ಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ಕೋರಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕಾರ ವ್ಯಾಪಾರಸ್ಥರು ಅಮರಗೋಳ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಳ್ಳಬೇಕು.
ಮೊದಲ ಹಂತವಾಗಿ 70 ಅಕ್ಕಿ ವ್ಯಾಪಾರಸ್ಥರು ಸ್ಥಳಾಂತರಗೊಳ್ಳಬೇಕು. ನಂತರ ಹಂತಹಂತವಾಗಿ ಅಕ್ಟೋಬರ್‌ನೊಳಗೆ ಇನ್ನುಳಿದ ವ್ಯಾಪಾರಸ್ಥರೂ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದರೆ ವ್ಯಾಪಾರಸ್ಥರ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆಯನ್ನು ಎಪಿಎಂಸಿ ಅಧಿಕಾರಿಗಳು ನೀಡಿದ್ದಾರೆ.
ಸಾರ್ವಜನಿಕರಿಗಾಗುತ್ತಿರುವ ತೊಂದರೆ..
ಅಕ್ಕಿಹೊಂಡದಲ್ಲಿ ನಡೆಯುತ್ತಿರುವ ಹೆಚ್ಚಿನ ವ್ಯಾಪಾರ ಹೋಲ್‌ಸೆಲ್‌ನದ್ದು. ಇಲ್ಲಿ ನಿತ್ಯ ಹತ್ತಿಪ್ಪತ್ತು ಲಾರಿಗಳು ಸರಕು ಸಾಗಣೆಗೆ ಬಂದು ಹೋಗುತ್ತವೆ. ಅಕ್ಕಿಹೊಂಡದಲ್ಲಿರುವ ಕಿರಿದಾದ ರಸ್ತೆಗಳು ಹಾಗೂ ಇತರ ರಿಟೇಲ್ ವ್ಯಾಪಾರಸ್ಥರಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಪಾದಚಾರಿಗಳು, ಬೈಕ್ ಸವಾರರು ಸೇರಿದಂತೆ ಇತರ ವಾಹನ ಸವಾರರು ಇಲ್ಲಿ ಸುಗಮವಾಗಿ ಸಂಚರಿಸುವುದು ಕಷ್ಟಸಾಧ್ಯ. ತೀವ್ರ ಜನಸಂದಣಿ ಇರುವ ಈ ಪ್ರದೇಶದಲ್ಲಿ ಲಾರಿಗಳು ಸರಕು ಇಳಿಸುವುದು ಹಾಗೂ ಸರಕು ತುಂಬಲು ತಾಸುಗಟ್ಟಲೇ ನಿಲ್ಲುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದು ನಿತ್ಯ ಕಾಣಿಸುವ ಸಾಮಾನ್ಯದ ದೃಶ್ಯ. ಅಕ್ಕಿಹೊಂಡದಲ್ಲಿ ಹೆಚ್ಚು ಹೋಲ್‌ಸೆಲ್ ವ್ಯಾಪಾರವೇ ನಡೆಯುವುದರಿಂದ ಈ ವ್ಯಾಪಾರಸ್ಥರು ಅಮರಗೋಳ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಂಡರೆ ಯಾವುದೇ ತೊಂದರೆಯಾಗುವುದಿಲ್ಲವೆಂಬ ವಾದ ಸಾರ್ವಜನಿಕರದ್ದು. ಇಲ್ಲಿನ ಹೋಲ್‌ಸೆಲ್ ವ್ಯಾಪಾರಸ್ಥರು ಅಮರಗೋಳ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಂಡಲ್ಲಿ ಲಾರಿಗಳು ಅಕ್ಕಿಹೊಂಡಕ್ಕೆ ನುಗ್ಗುವುದು ನಿಲ್ಲುತ್ತದೆ. ಇದರಿಂದ ಈ ಪ್ರದೇಶದಲ್ಲಿ ಸುಗಮ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಸಹಕಾರಿಯಾಗುತ್ತದೆ. ಎಪಿಎಂಸಿ ಯಾರ್ಡ್‌ಗೆ ವ್ಯಾಪಾರಸ್ಥರು ಸ್ಥಳಾಂತರಗೊಂಡಲ್ಲಿ ವ್ಯಾಪಾರಸ್ಥರಿಗೂ ಅನುಕೂಲವಾಗುತ್ತದೆ. ಲಾರಿಗಳು ಬಂದು, ಹೋಗಲು ಹೆಚ್ಚಿನ ಸ್ಥಳಾವಕಾಶ ಎಪಿಎಂಸಿಯಲ್ಲಿದೆ. ಅಕ್ಕಿಹೊಂಡದಲ್ಲಿರುವ ಹೆಚ್ಚಿನ ವ್ಯಾಪಾರಸ್ಥರು ಈಗಾಗಲೇ ಎಪಿಎಂಸಿ ಯಾರ್ಡ್‌ನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಆದರೂ ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement