ಕಿಮ್ಸ್‌ನಲ್ಲಿ 861 ಹುದ್ದೆ ಖಾಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 5
ಕಿಮ್ಸ್ ಆಡಳಿತ ವ್ಯವಸ್ಥೆ ಹದಗೆಡುವಲ್ಲಿ ಸಿಬ್ಬಂದಿ ಕೊರತೆ ಪ್ರಮುಖ ಕಾರಣವಾಗಿದೆ. ವರ್ಷದಿಂದ ವರ್ಷಕ್ಕೆ ಸಿಬ್ಬಂದಿ ಕೊರತೆ ಹೆಚ್ಚುತ್ತಾ ಸಾಗಿದೆ. ಇದೀಗ ಸಿಬ್ಬಂದಿ ಕೊರತೆಯ ಸಂಖ್ಯೆ 861ರ ಗಡಿ ತಲುಪಿದೆ.
ನಿಜ, ಕಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗುವಲ್ಲಿ ಕೊಂಚ ವಿಳಂಬವಾದರೂ ಸಹಿಸಿಕೊಳ್ಳಲಾಗದ ಜನರು ಕಿಮ್ಸ್‌ನಲ್ಲಿರುವ ಸಿಬ್ಬಂದಿ ಕೊರತೆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾವುದೇ ಒಂದು ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯಬೇಕಾದರೆ ಸಿಬ್ಬಂದಿ ಬಲ ಬೇಕೇ ಬೇಕು. ಆದರೆ, ಕಿಮ್ಸ್ ಹತ್ತು ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆಯ ಸಮಸ್ಯೆಯಿಂದ ಬಳಲುತ್ತಿದೆ. ಹೀಗಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಆಡಳಿತಾತ್ಮಕ ವ್ಯವಸ್ಥೆ ನಡೆಸಿಕೊಂಡು ಹೋಗುವಲ್ಲಿ ಕಿಮ್ಸ್ ಎಡುವುತ್ತಿದೆ.
ಖಾಲಿ ಖಾಲಿ: ಕಿಮ್ಸ್‌ನ ಪ್ರಸಕ್ತ ವರ್ಷದ ಸಿಬ್ಬಂದಿ ಸಂಖ್ಯಾ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಬರೋಬ್ಬರಿ 861 ಹುದ್ದೆಗಳು ಖಾಲಿ ಇರುವುದು ಗಮನ ಸೆಳೆಯುತ್ತದೆ. ಕಿಮ್ಸ್‌ನ ಒಟ್ಟು ಮಂಜೂರಾತಿ ಪಡೆದ ಹುದ್ದೆಯ ಸಂಖ್ಯೆ 1552. ಆದರೆ ಈ ಪೈಕಿ 691 ಹುದ್ದೆ ಮಾತ್ರ ಭರ್ತಿಯಾಗಿದ್ದು ಇನ್ನುಳಿದ 861 ಹುದ್ದೆಗಳು ಖಾಲಿ ಇವೆ. ಎ ದರ್ಜೆಯಲ್ಲಿ 172 ಹುದ್ದೆ, ಬಿ ದರ್ಜೆಯಲ್ಲಿ 12, ಸಿ ದರ್ಜೆಯಲ್ಲಿ 360 ಹಾಗೂ ಡಿ ದರ್ಜೆಯಲ್ಲಿ 317 ಹುದ್ದೆಗಳು ಖಾಲಿ ಇವೆ.
ಇದು ಕೇವಲ ಪ್ರಸಕ್ತ ವರ್ಷದ ಸಮಸ್ಯೆಯಲ್ಲ, 2008ರಲ್ಲಿ ಒಟ್ಟು 424 ಹುದ್ದೆಗಳು ಖಾಲಿಯಿದ್ದರೆ, 2009ರಲ್ಲಿ 426, 2010ರಲ್ಲಿ 424, 2011ರಲ್ಲಿ 838 ಹುದ್ದೆ, 2012ರಲ್ಲಿ 885 ಹುದ್ದೆಗಳು ಖಾಲಿ ಇದ್ದವು. ಸರಿ ಸುಮಾರು ಅರ್ಧಕ್ಕರ್ಧ ಹುದ್ದೆಗಳು ಖಾಲಿ ಇರುವ ಸಂದರ್ಭದಲ್ಲಿ ಬೃಹತ್ ಕಿಮ್ಸ್ ನಡೆಸಿಕೊಂಡು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಮಧ್ಯೆಯೂ ಇರುವ ಸಿಬ್ಬಂದಿ ಬಳಸಿಕೊಂಡೇ ಒಬ್ಬರ ಕೆಲಸ ಇಬ್ಬರೋ ಅಥವಾ ಮೂವರೋ ನಿರ್ವಹಿಸುತ್ತಿದ್ದಾರೆ. ತನ್ಮೂಲಕ ಕಿಮ್ಸ್ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ.
ಸ್ಟಾಫ್ ನರ್ಸ್ ಬೇಕಾಗಿದ್ದಾರೆ: ಕಿಮ್ಸ್‌ನಲ್ಲಿ ಬಹುವಾಗಿ ಕಾಡುತ್ತಿರುವುದು ಸ್ಟಾಫ್ ನರ್ಸ್ ಸಮಸ್ಯೆ. ಆಡಾಕ್(ಹೊರ ಗುತ್ತಿಗೆ) ಮೂಲಕ ಕಿಮ್ಸ್‌ನಲ್ಲಿ 10 ವರ್ಷಗಳಿಂದ 83 ನರ್ಸ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಈ ನರ್ಸ್‌ಗಳ ಸಂಖ್ಯೆಯಿಂದ ರೋಗಿಗಳ ಕಾಳಜಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಿಮ್ಸ್ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಕನಿಷ್ಠ ಪಕ್ಷ 150 ಸ್ಟಾಫ್ ನರ್ಸ್‌ಗಳನ್ನು ನೇಮಿಸಿಕೊಳ್ಳಬೇಕೆಂದು ಕೋರಿದೆ. ಈ ಪೈಕಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 83 ನರ್ಸ್‌ಗಳಿಗೆ ಮೊದಲು ಆದ್ಯತೆ ನೀಡಬೇಕೆಂದು ಕೋರಲಾಗಿದೆ. ಆದರೆ, ಇದು ನಿಯಮ ಬಾಹಿರವೆಂದು ಸರ್ಕಾರ ಹೇಳುತ್ತಿದ್ದರೆ, ಸೇವೆ ಪರಿಗಣಿಸದೇ ಹೋದಲ್ಲಿ ಅನ್ಯಾಯಕ್ಕೊಳಗಾಗಿರುವ 83 ನರ್ಸ್‌ಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಬಿಕ್ಕಟ್ಟನ್ನು ಸರ್ಕಾರ ಕೂಡಲೇ ಪರಿಹರಿಸಬೇಕಿದೆ.
ಮುತುವರ್ಜಿ ಅವಶ್ಯ: ಈ ರೀತಿಯಾಗಿ ಸಿಬ್ಬಂದಿ ಸಮಸ್ಯೆಯಿಂದ ಬಳಲಿರುವ ಕಿಮ್ಸ್‌ಗೆ ಸರ್ಕಾರ ಕೂಡಲೇ ಸಿಬ್ಬಂದಿ ಬಲ ನೀಡಬೇಕಿದೆ. ಇಲ್ಲದಿದ್ದಲ್ಲಿ ಕಿಮ್ಸ್ ವ್ಯವಸ್ಥೆ ಮತ್ತಷ್ಟು ಹದಗೆಡಲಿದೆ. ಕಿಮ್ಸ್ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಸಾಧ್ಯವಾಗಲಿದೆ. ಎಲ್ಲ ರೋಗಿಗಳ ಕಾಳಜಿ ತೆಗೆದುಕೊಳ್ಳುವುದು, ವಿದ್ಯಾರ್ಥಿಗಳಿ ಉತ್ತಮ ಶಿಕ್ಷಣ ನೀಡುವುದು ಕಷ್ಟಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕಿದೆ.
ಬಡವರ ಪಾಲಿನ ಸಂಜೀವಿನಿ ಎನಿಸಿಕೊಂಡಿರುವ ಕಿಮ್ಸ್‌ಗೆ ಜೀವ ತುಂಬಬೇಕಿದೆ.
ತಾಳ್ಮೆ ಕಳೆದುಕೊಳ್ಳುವುದೇಕೆ?
ಕಿಮ್ಸ್‌ಗೆ ಬರುವ ರೋಗಿಗಳ ಸಂಬಂಧಿಕರು ತಕ್ಷಣ ಚಿಕಿತ್ಸೆ ಸಿಗಬೇಕು, ರೋಗಿ ಕೂಡಲೇ ಗುಣಮುಖನಾಗಬೇಕು, ದಿನಪೂರ್ತಿ ವೈದ್ಯರು ರೋಗಿಯ ಪಕ್ಕದಲ್ಲಿಯೇ ಇರಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ. ವೈದ್ಯರು ರೋಗಿಯನ್ನು ಗುಣಪಡಿಸಬೇಕೆಂಬ ಸದುದ್ದೇಶವನ್ನೇ ಹೊಂದಿರುತ್ತಾರೆ. ಸಂಬಂಧಿಕರು ವೈದ್ಯರೊಂದಿಗೆ ಸಂಯಮದಿಂದ ವರ್ತಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಇದನ್ನು ಬಿಟ್ಟು ಚಿಕಿತ್ಸೆಗಾಗಿ ಒತ್ತಡ ಹೇರುವುದು, ಅನವಶ್ಯಕ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇನ್ನು, ಖಾಸಗಿ ಆಸ್ಪತ್ರೆಗೆ ಹೋಗುವವರು ಸಂಯಮದಿಂದ ವರ್ತಿಸುತ್ತಾರೆ. ಅಲ್ಲಿ ವೈದ್ಯರು ನೀಡುವ ಸೂಚನೆಯನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಯಾವುದೇ ಕಾರಣಕ್ಕೆ ಗೌಜು, ಗದ್ದಲ ಮಾಡುವುದಿಲ್ಲ. ಸಾಲದ್ದಕ್ಕೆ ಸಾವಿರಾರು ರುಪಾಯಿ ಬಿಲ್ ಕಟ್ಟಿ ಸುಮ್ಮನೇ ಬರುತ್ತಾರೆ. ಇದೇ ವೇಳೆ ಕಿಮ್ಸ್‌ನಲ್ಲಿ ಉಚಿತವಾಗಿ ಔಷಧೋಪಚಾರ ಸಿಗುತ್ತಿದ್ದರೂ ತಾಳ್ಮೆ ಕಳೆದುಕೊಳ್ಳುವುದು ಏತಕ್ಕೆ?
ಸಂಘಟನೆಗಳಿಂದ ಸೇಡು
ಚಿಕಿತ್ಸೆ ಫಲಿಸದೇ ಕಿಮ್ಸ್‌ನಲ್ಲಿ ರೋಗಿ ಪ್ರಾಣ ಬಿಟ್ಟ ಅನೇಕ ಘಟನೆಗಳು ಕಿಮ್ಸ್‌ನಲ್ಲಿ ನಡೆದಿವೆ. ಇದಕ್ಕೆ ವೈದ್ಯರ ಅಚಾತುರ್ಯವೂ ಕಾರಣವಾಗಿರಬಹುದು. ಆದರೆ, ಎಲ್ಲ ಸಾವಿಗೂ ವೈದ್ಯರನ್ನು ಹೊಣೆಯಾಗಿಸುವುದು ಸರಿಯಲ್ಲ. ರೋಗಿ ಗುಣಮುಖನಾಗದೇ ಪ್ರಾಣ ಕಳೆದುಕೊಂಡರೆ ಆತನ ಸಂಬಂಧಿಕರು ಸಿಟ್ಟಿಗೇಳುವುದು, ರೋದಿಸುವುದು ಸಹಜ. ಆದರೆ, ಇದನ್ನೇ ಬಂಡವಾಳವಾಗಿಸಿಕೊಂಡು ಸೇಡು ತೀರಿಸಿಕೊಳ್ಳುವ ಸಂಘಟನೆಗಳೂ ಹುಬ್ಬಳ್ಳಿಯಲ್ಲಿವೆ. ಯಾವುದೇ ರೋಗಿ ಮೃತಪಟ್ಟರೆ ಸಾಕು ಸಂಘಟನೆಗಳ ಪ್ರಮುಖರು ಕಿಮ್ಸ್‌ಗೆ ಧಾವಿಸುತ್ತಾರೆ. ಅಲ್ಲಿ ರೋಗಿಯ ಸಂಬಂಧಿಕರಿಗೆ ದಾಂದಲೆ ಮಾಡಲು ಸಾಥ್ ಕೊಟ್ಟು ತಾವೂ ದಾಂದಲೆ ಮಾಡುತ್ತಾರೆ. ಇದರ ಹಿಂದೆ ಸಂಘಟನೆಯ ಸ್ವಾರ್ಥವೂ ಅಡಗಿರುತ್ತದೆ. ನಿರ್ದಿಷ್ಟ ವೈದ್ಯರೋ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆಂಬ ಆರೋಪವೂ ಇದೆ.
-ಪ್ರಕಾಶ ಎಸ್. ಶೇಟ್