ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಡ ಮಕ್ಕಳಿಗೆ ಪಾಟೀಲ್ ಪ್ರತಿಷ್ಠಾನ ಶೈಕ್ಷಣಿಕ ನೆರವು

Vishwanath S
Updated On : 6 Sept 2013, 11:01 am

ಹುಬ್ಬಳ್ಳಿ: ನವಲಗುಂದ ತಾಲೂಕಿನ ಅಮರಗೋಳದ ಸಾಮಾನ್ಯ ರೈತ ಕುಟುಂಬದಲ್ಲಿ 1962ರಲ್ಲಿ ಜನಿಸಿದ ಬಸನಗೌಡ ಪಾಟೀಲ, ದೇಶ ಸೇವೆಗೆ ಸೈನ್ಯ ಸೇರಿ ಯುದ್ಧದಲ್ಲಿ ಗುಂಡು ತಾಗಿ ತವರೂರಿಗೆ ಮರಳಿ ಕೃಷಿ ಕಾಯಕದಲ್ಲಿ ತೊಡಗಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸೇವಾ ಕಾರ್ಯದಿಂದ ಅಮರಗೋಳದ ಗೌಡರೆಂದೇ ಕರೆಯಿಸಿಕೊಂಡಿದ್ದ ಪಾಟೀಲರು ಕಾಲವಾಗಿ ಈಗ 5ನೇ ವರ್ಷ. ಹುಬ್ಬಳ್ಳಿ ಮಹಾದೇವ ಜವಳಿ ಗಿರಣಿ ಭದ್ರತಾ ಅಧಿಕಾರಿಯಾಗಿ ಹಲವು ವರ್ಷ ಕಾಲ ಸೇವೆ ಸಲ್ಲಿಸಿದ್ದಲ್ಲದೆ ಆ ವೇಳೆ ತೋಟಗಾರಿಕೆ, ವ್ಯವಸಾಯ, ಹಾಲಿನ ಡೇರಿ ಮೂಲಕ ನೂರಾರು ಜನರಿಗೆ ಕೆಲಸ ಕೊಡಿಸುವುದರ ಜತೆಗೆ ಬಡಬಗ್ಗರಿಗೆ ಸಾಕಷ್ಟು ನೆರವಾಗಿದ್ದರು.
3 ಪುತ್ರರು: ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅತ್ಯಗತ್ಯ ಎನ್ನುತ್ತಿದ್ದ ಬಸನಗೌಡರು, ತಮ್ಮ ಮಕ್ಕಳನ್ನು ಅದೇ ಹಾದಿಯಲ್ಲಿ ನಡೆಸಿದರು. ಹಿರಿಯ ಮಗ ಮಲ್ಲನಗೌಡರ ವೈದ್ಯ ಪದವಿ ಮುಗಿಸಿ ಬಡವರ ಸೇವೆ ಮಾಡುತ್ತಿದ್ದರೆ, ಮೂರನೇ ಪುತ್ರ ಶಂಕರಪಾಟೀಲ ಮುನೇನಕೊಪ್ಪ ನವಲಗುಂದ ಕ್ಷೇತ್ರದ ಶಾಸಕರಾಗಿ (2008-13) ಕೋಟ್ಯಂತರ ರುಪಾಯಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎರಡನೇ ಪುತ್ರ ಹನುಮಂತಗೌಡ ಸಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಶಂಕರ ಪಾಟೀಲ ಮುನೇನಕೊಪ್ಪ ಅವರು ತಂದೆ ಬಸನಗೌಡ ಪಾಟೀಲ ಸ್ಮಾರಕ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ಗ್ರಾಮೀಣಾಭಿವೃದ್ಧಿ, ಕೃಷಿ, ಬಡ ಮಕ್ಕಳ ಓದಿಗೆ ಹಣಕಾಸಿನ ನೆರವು, ಮಠ-ಮಂದಿರಗಳಿಗೆ ಸಹಾಯದಂತಹ ಚಟುವಟಿಕೆ ನಡೆಸುತ್ತಿದ್ದಾರೆ. ಬಸನಗೌಡರು 2008ರಲ್ಲಿ ಕಾಲವಾದರು. ಇವರ ಮೊದಲ ಪುಣ್ಯಸ್ಮರಣೆಯಂದು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರಕ್ಕೆ ರು. 1 ಲಕ್ಷ, 2ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ರು. 1 ಲಕ್ಷ ದೇಣಿಗೆ, 3ನೇ ಪುಣ್ಯಸ್ಮರಣೆಯ ವೇಳೆಯಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ರು. 50 ಸಾವಿರ ಧನ ಸಹಾಯ, 4ನೇ ಪುಣ್ಯಸ್ಮರಣೆ ನಿಮಿತ್ತ  ಅಣ್ಣಿಗೇರಿ ಅಮೃತೇಶ್ವರ ಕಲಾ ಕುಂಜ ಶಿಕ್ಷಣ ಸಂಸ್ಥೆಗೆ ರು. 50 ಸಾವಿರ ದೇಣಿಗೆ ನೀಡಿದ್ದಾರೆ. ಸೆ. 6ರಂದು ಅಮರಗೋಳದಲ್ಲಿ 5ನೇ ಪುಣ್ಯಸ್ಮರಣೆ ಸಮಾರಂಭ ಹಮ್ಮಿಕೊಂಡಿದ್ದು, ನವಲಗುಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಉತ್ತಮ ಅಂಕ ಪಡೆದವರಿಗೆ ನಿರಂತರ ಪ್ರೋತ್ಸಾಹಕ್ಕೆ ರು. 50 ಸಾವಿರ ಶಾಶ್ವತ ಠೇವಣಿ ಇಡಲು ಶಂಕರ ಪಾಟೀಲ ನಿರ್ಧರಿಸಿದ್ದಾರೆ. ತನ್ಮೂಲಕ ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ.
ಕೀಲಿ ಮುರಿದು ಕಳ್ಳತನ
ಹುಬ್ಬಳ್ಳಿ: ಆಟೋಮೋಬೈಲ್ ಅಂಗಡಿಯೊಂದರ ಶಟರ್ಸ್ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ಸುಮಾರು ರು. 85 ಸಾವಿರ ನಗದು ದೋಚಿದ ಘಟನೆ ನಗರದ ಈಜುಗೊಳ ಸಂಕೀರ್ಣದಲ್ಲಿ ಗುರುವಾರ ನಡೆದಿದೆ. ಸತೀಶ ಗಾಮಿ ಎಂಬುವವರ ಸತ್ಯಂ ಆಟೋಮೋಬೈಲ್ ಅಂಗಡಿಯಲ್ಲಿಯೇ ಕಳ್ಳತನ ನಡೆದಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾನಕ್ಕೆ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದ ಹಾಗೂ ಅಂಗಡಿ ವಹಿವಾಟಿನ ಹಣ ಸೇರಿ ಡ್ರಾದಲ್ಲಿ ಇಟ್ಟಿದ್ದ ರು. 85 ಸಾವಿರ ದೋಚಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಸಂಚಿಕೆ ಬಿಡುಗಡೆ, ಸನ್ಮಾನ
ಧಾರವಾಡ: ಇಲ್ಲಿನ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್‌ನಿಂದ ಸ್ಪರ್ಧಾಸ್ಫೂರ್ತಿ 100ನೇ ಸಂಚಿಕೆ, ಉದ್ಯೋಗ ವಾರ್ತೆ 150ನೇ ಸಂಚಿಕೆ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಸೆ. 6ರ ಸಂಜೆ 4ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿಗಳು ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಸಚಿವ ಸಂತೋಷ ಲಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪ್ಸಿ, ಎಸಿಪಿ ಎಸ್.ಎನ್. ಹೊಳೆಹೊಸೂರ, ಸಾಹಿತಿ ಮೋಹನ ನಾಗಮ್ಮನವರ, ಶಂಕರ ಹಲಗತ್ತಿ ಹಾಗೂ ಕನ್ನಡಪ್ರಭ ಪತ್ರಿಕೆ ಸ್ಥಾನಿಕ ಸಂಪಾದಕ ಜಿ.ವಿ. ಯತಿರಾಜು ಭಾಗವಹಿಸುತ್ತಾರೆ. ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಅಧ್ಯಕ್ಷತೆ ವಹಿಸುತ್ತಾರೆ.
ನಾಳೆ ಸನ್ಮಾನ, ವಿಚಾರಗೋಷ್ಠಿ
ಧಾರವಾಡ: ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರ ದಿನಾಚರಣೆಯಂಗವಾಗಿ ವಿದ್ಯಾವರ್ಧಕ ಸಂಘದಲ್ಲಿ ಸೆ. 7ರ ಬೆಳಗ್ಗೆ 9ಕ್ಕೆ ನಿವೃತ್ತ ಶಿಕ್ಷಕರ ಸನ್ಮಾನ, ಶೈಕ್ಷಣಿಕ ವಿಚಾರಗೋಷ್ಠಿ ಹಮ್ಮಿಕೊಂಡಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಶಿಕ್ಷಣ ಇಲಾಖೆ ಅಪರ ಆಯುಕ್ತ ಎ.ಎನ್. ಪಾಟೀಲ, ಡಿಡಿಪಿಐ ಡಾ೤ ಬಿಕೆಎಸ್ ವರ್ಧನ್, ಬಿಇಒ ಗಿರೀಶ ಪದಕಿ ಅತಿಥಿಗಳಾಗಿದ್ದಾರೆ.
ಇಂದು ಸಂಗೀತ ಶ್ರಾವಣ ಸಂಜೆ
ಕುಂದಗೋಳ: ತಾಲೂಕಿನ ಹರ್ಲಾಪುರ ಗ್ರಾಮದ ಮಾರುತಿ, ಬಸವೇಶ್ವರ ದೇವಸ್ಥಾನ ಆಶ್ರಯದಲ್ಲಿ ಜಾನಪದ ಸಂಗೀತ ಶ್ರಾವಣ ಸಂಜೆ ಸೆ.6ರ ಸಂಜೆ 7.30ಕ್ಕೆ ನಡೆಯಲಿದೆ. ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶ್ರೀಗಳು ಸಾನ್ನಿಧ್ಯ, ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ಉದ್ಘಾಟಿಸುವರು. ಚಂದನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಉಪನ್ಯಾಸ ನೀಡುವರು. ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ನಿಂಗರಾಜ ಅಂಗಡಿ, ಜಿನದತ್ತ ಹಡಗಲಿ, ಶಿವಯೋಗಿ ಕುಳೆನೂರ ಆಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement