ಬಳ್ಳಾರಿ ವಿವಿ ಕುಲಪತಿ ಮಂಜಪ್ಪ ಹೊಸಮನೆ ಅರ್ಜಿ ವಜಾ
ಧಾರವಾಡ: ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವರ ಹುದ್ದೆ ವಿವಾದಕ್ಕೆ ಸಂಬಂಧಿಸಿದಂತೆ ಕುಲಪತಿ ಮಂಜಪ್ಪ ಹೊಸಮನೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಗುರುವಾರ ಹೈಕೋರ್ಟ್ ಪೀಠ ವಜಾಗೊಳಿಸಿದೆ. ರಾಜ್ಯ ಸರ್ಕಾರ ವಿಜಯಕುಮಾರ ಅವರನ್ನು ಕುಲಸಚಿವ ಹುದ್ದೆಗೆ ನೇಮಕ ಮಾಡಿತ್ತು. ಆದರೆ, ಕುಲಪತಿ ಮತ್ತು ಕುಲಸಚಿವರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಕುಲಪತಿಗಳು ಕುಲಸಚಿವರನ್ನು ವಜಾಗೊಳಿಸಿದ್ದರು. ಅಲ್ಲದೇ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆ ಕುಲಸಚಿವರು ಕಾರ್ಯ ನಿರ್ವಹಿಸಲು ಅನವು ಮಾಡಿಕೊಡಲು ಸರ್ಕಾರ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಕುಲಪತಿ ಡಾ. ಮಂಜಪ್ಪ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ಕುಲಸಚಿವರನ್ನು ವಜಾಗೊಳಿಸಲು ಕುಲಪತಿಗಳಿಗೆ ಅಧಿಕಾರವಿಲ್ಲ. ಇದು ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಅರ್ಜಿ ವಜಾ ಮಾಡಿತು. ಕುಲಸಚಿವರ ಪರ ವಕೀಲರಾದ ಆರ್.ಎಂ. ಜಾವೇದ್, ಕಾಶಿನಾಥ ವಾದ ಮಂಡಿಸಿದರೆ, ಸರ್ಕಾರದ ಪರ ಕೆ.ಎಸ್. ಪಾಟೀಲ ವಾದ ಮಂಡಿಸಿದರು.