9ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ
ಹುಬ್ಬಳ್ಳಿ: ಆವೆಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ನಗರದ ಹೊಸೂರಿನಲ್ಲಿರುವ ಉತ್ತರ ಕನ್ನಡ ವೈಶ್ಯ ಸಮಾಜ ಕಲ್ಯಾಣ ಮಂಟಪದಲ್ಲಿ ಸೆ. 9ರಂದು ಪ್ರತಿಷ್ಠಾಪಿಸಲಾಗುತ್ತಿದೆ. ನಗರದಲ್ಲಿ ಶುಕ್ರವಾರ ಈ ವಿಷಯ ತಿಳಿಸಿದ ಸಾರ್ವಜನಿಕ ಆದರ್ಶ ಗಣೇಶೋತ್ಸವ ಸಮಿತಿಯ ಶೇಷಾಚಲ ಭಟ್, ಈ ಮೂರ್ತಿ ಮೂರು ದಿನಗಳವರೆಗೆ ಮಾತ್ರ ಪೂಜಿಸಲ್ಪಡುತ್ತಿದ್ದು, ಸೆ. 11ರಂದು ವಿಸರ್ಜನೆ ಮಾಡಲಾಗುವುದು ಎಂದರು. ಸಾರ್ವಜನಿಕರಿಂದ ಹಣ ಸಂಗ್ರಹಿಸದೇ, ಅಶ್ಲೀಲ-ಅಸಭ್ಯ ಹಾಡು ಹಾಗೂ ನರ್ತನ ಮಾಡದೇ ಕೇವಲ ದೇವರ ನಾಮಸ್ಮರಣದ ಮೂಲಕ ಗಣೇಶ ಮೂರ್ತಿ ಪೂಜಿಸಲಾಗುವುದು. ಕೊನೆಯ ದಿನವಾದ ಸೆ. 11ರ ಸಂಜೆ 6ಕ್ಕೆ ಗಣೇಶ ಮೂರ್ತಿಗೆ ಮಹಾಮಂಗಳಾರತಿ ನಂತರ ಮೂರ್ತಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಗೋಕರ್ಣಕ್ಕೆ ತೆರಳಿ, ಅಲ್ಲಿಯ ಕಡಲಲ್ಲಿ ಮೂರ್ತಿ ವಿಸರ್ಜಿಸಲಾಗುವುದು ಎಂದರು. ದಯಾನಂದ ರಾವ್ ಹಾಗೂ ಅರವಿಂದ ಕಾಮತ ಇದ್ದರು.