ಕೆಂಪು ಗಣಪನ ದರ್ಶನಕ್ಕೆ 70 ಸಾವಿರ ಭಕ್ತರು!
ಹುಬ್ಬಳ್ಳಿ: ಸೆ. 9, 10 ಮತ್ತು 11ರಂದು ಛಬ್ಬಿ ಕುಲಕರ್ಣಿ ಅವರ ಮನೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಕೆಂಪು ಗಣಪನ ದರ್ಶನಕ್ಕೆ ಈ ಬಾರಿ ಕನಿಷ್ಠ 50ರಿಂದ 70 ಸಾವಿರ ಜನರು ಬರುವ ನಿರೀಕ್ಷೆ ಇದೆ.
20-25 ವರ್ಷಗಳಿಂದ ಈ ಕೆಂಪು ಗಣೇಶನ ದರ್ಶನ ಪಡೆಯಲು, ತಮ್ಮ ಇಷ್ಟಾರ್ಥಗಳನ್ನ್ನು ಈಡೇರಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದಲ್ಲದೆ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಜನರು ಮೂರು ದಿನ ಬಂದು ಹೋಗುತ್ತಿದ್ದಾರೆ.
ಹಿನ್ನೆಲೆ: ಕೃಷ್ಣೇಂದ್ರ ಸ್ವಾಮಿಗಳು ಹಳೇ ಹುಬ್ಬಳ್ಳಿ ದತ್ತಾತ್ರೇಯ ದೇವಸ್ಥಾನಕ್ಕೆ 1821ರಲ್ಲಿ ಬಂದು ನೆಲೆಸಿದ್ದರು. ಅವರು 1827ರಲ್ಲಿ ಕಲಘಟಗಿ ತಾಲೂಕಿನ ನಾಗನೂರು ಗ್ರಾಮದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಸಂದರ್ಭ ಮಾರ್ಗ ಮಧ್ಯ ಛಬ್ಬಿ ಗ್ರಾಮದ ಶಾನುಭೋಗರೂ ಆದ ತಮ್ಮಪ್ಪನವರ ಮನೆಯಲ್ಲಿ ಪಾದಪೂಜೆ, ಭಿಕ್ಷೆ ಸ್ವೀಕರಿಸಿ ವಿಘ್ನ್ನ ನಿವಾರಕನಾದ ಕೆಂಪು ಗಣಪತಿಯನ್ನು ಪ್ರತಿವರ್ಷ ಭಾದ್ರಪದ ಶುದ್ಧ ಚತುರ್ಥಿಯಂದು ಶ್ರದ್ಧಾಭಕ್ತಿಯಿಂದ ಪೂಜಿಸಿ ಎಂದು ಹೇಳಿದರಂತೆ. ಅಂದಿನಿಂದ ತಮ್ಮಪ್ಪನವರ ಕುಟುಂಬ ಪ್ರತಿವರ್ಷ ತಪ್ಪದೇ ಕೆಂಪು ಗಣಪತಿಯನ್ನ್ನು ಮೂರು ದಿನ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸುತ್ತ ಬಂದಿದೆ.
ಸಂತಾನ ಭಾಗ್ಯವೇ ಇಲ್ಲದ ತಮ್ಮಪ್ಪ ಅವರಿಗೆ ಮುಂದೆ ಗಂಡು ಸಂತಾನ ಪ್ರಾಪ್ತವಾಯಿತು. ಅಂದಿನಿಂದ ಆರಂಭವಾದ ಕೆಂಪು ಗಣಪತಿ ಪ್ರತಿಷ್ಠಾಪನೆ ಇಂದು 5ನೇ ತಲೆಮಾರಿನವರೆಗೆ ಮುಂದುವರಿದಿದೆ.
ಸದ್ಯ ತಮ್ಮಪ್ಪನವರ ವಂಶಸ್ಥರಾದ ಅನಂತರಾವ್ ರಾಮಚಂದ್ರರಾವ್ ಕುಲಕರ್ಣಿ, ಶಂಕರರಾವ್ ಗುರುನಾಥರಾವ್ ಕುಲಕರ್ಣಿ, ದಿ. ವಾಸುದೇದ ಸೋಮರಾವ್ ಕುಲಕರ್ಣಿ, ದಿ. ಶ್ರೀಪಾದರಾವ್ ಸೋಮರಾವ್ ಕುಲಕರ್ಣಿ, ದಿ. ಕಾಶೀನಾಥ ಮಲಾರರಾವ್ ಕುಲಕರ್ಣಿ, ದಿ. ಹನುಮಂತರಾವ್ ಮಾರುತಿರಾವ್ ಕುಲಕರ್ಣಿ ಅವರ ಮನೆಗಳಲ್ಲಿ ಕೆಂಪು ಗಣಪನನ್ನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.
--