ಬಡವರ ಕಿಮ್ಸ್ನಲ್ಲಿದೆ ಹೈಟೆಕ್ ಸೌಲಭ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 6
ಕಾಲಕ್ಕೆ ತಕ್ಕಂತೆ ಕಿಮ್ಸ್ ಕೂಡ ಬದಲಾಗಿದೆ. ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತಹ ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆ ಕಿಮ್ಸ್ನಲ್ಲಿ ಕಾಣಬಹುದು.
ಹೌದು.., ಕಿಮ್ಸ್ ಎಂದರೆ ಮೂಗು ಮುರಿಯುವ ಕಾಲವೊಂದಿತ್ತು. ಈ ಹಿಂದೆ ಕಿಮ್ಸ್ಗೆ ಹೋದರೆ ಓಬಿರಾಯನ ಕಾಲದ ಚಿಕಿತ್ಸಾ ಸಲಕರಣೆಗಳು ಕಣ್ಣಿಗೆ ರಾಚುತ್ತಿದ್ದವು. ರೋಗಿಗಳು ಮಲಗಿಕೊಳ್ಳುವ ಮಂಚ ತುಕ್ಕು ಹಿಡಿದಿದ್ದರೆ, ಬೆಡ್ ಹರಿದು ಅಪ್ಪಚ್ಚಿಯಾಗಿರುತ್ತಿತ್ತು. ಆದರೆ, ಆ ದಿನಗಳು ಈಗ ಉಳಿದಿಲ್ಲ. ಕಿಮ್ಸ್ನೊಳಕ್ಕೆ ಕಾಲಿಟ್ಟರೆ ಸುಸಜ್ಜಿತ ಆಸ್ಪತ್ರೆಯಲ್ಲಿದ್ದೇವೆ ಎನ್ನುವ ಭಾವನೆ ಬಾರದೇ ಇರದು.
1600 ಹಾಸಿಗೆ ವ್ಯವಸ್ಥೆ: ಕಿಮ್ಸ್ನಲ್ಲಿ ಈ ಹಿಂದೆ ಕೇವಲ 700 ಹಾಸಿಗೆ ವ್ಯವಸ್ಥೆ ಇತ್ತು. ಇಡೀ ಉ-ಕದ ಜನತೆಯ ಪಾಲಿಗೆ ಸಂಜೀವಿನಿ ಎನಿಸಿಕೊಂಡಿರುವ ಕಿಮ್ಸ್ಗೆ ಬರುವ ರೋಗಿಗಳು ಸಂಖ್ಯೆಯೂ ಹೆಚ್ಚಿತ್ತು. ಹೀಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಹಾಸಿಗೆ ನೀಡುವುದೇ ದೊಡ್ಡ ತಲೆ ನೋವಾಗಿತ್ತು. ಆದರೀಗ ಕಿಮ್ಸ್ ಆಸ್ಪತ್ರೆಯಲ್ಲಿ 1200 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ತನ್ಮೂಲಕ ಇದೀಗ ಎಲ್ಲ ರೋಗಿಗಳಿಗೆ ಹಾಸಿಗೆ ಸಿಗುತ್ತಿದೆ. ಕೆಲ ದಿನಗಳಲ್ಲಿಯೇ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗಾಗಿಯೇ 400 ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ತನ್ಮೂಲಕ ಕಿಮ್ಸ್ 1600 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮಾರ್ಪಡಲಿದೆ.
ಸುಸಜ್ಜಿತ ಐಸಿಯು: ಕಿಮ್ಸ್ನಲ್ಲಿ ಬಹುವಾಗಿ ಕಾಡುವ ಸಮಸ್ಯೆ ಐಸಿಯು ಘಟಕದ್ದಾಗಿತ್ತು. ಇಲ್ಲಿ ಕೇವಲ 3 ಐಸಿಯು ಘಟಕವಿತ್ತು. ಆದರೀಗ ಅದರೆ ಸಂಖ್ಯೆ 20 ತಲುಪಿದೆ. 8 ಟ್ರೋಮಾ ಐಸಿಯು, 6 ಎಂಐಸಿಯು ಹಾಗೂ 6 ಪಿಐಸಿಯು ಘಟಕವನ್ನು ಕಿಮ್ಸ್ ಹೊಂದಿದೆ. ಹೀಗಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ರೋಗಿಗೆ ತುರ್ತು ನಿಗಾ ಘಟಕದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ.
ಅತ್ಯಾಧುನಿಕ ಯಂತ್ರ: ಕಿಮ್ಸ್ಗೆ ಬರುವ ಬಹುಪಾಲು ರೋಗಿಗಳು ಅಪಘಾತದಲ್ಲಿ ಗಾಯಗೊಂಡವರಾಗಿರುತ್ತಾರೆ. ಇಂಥವರಿಗೆ ತುರ್ತು ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ವ್ಯವಸ್ಥೆ ಇದೆ. ಇದು ಅತ್ಯಾಧುನಿಕ ಯಂತ್ರೋಪಕರಣಗಳಿಂದ ಕೂಡಿದ್ದಾಗಿದೆ. ಹೃದ್ರೋಹ ಸೇರಿದಂತೆ ಇನ್ನಿತರ ಕಾಯಿಲೆಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ವ್ಯವಸ್ಥೆಯ ಕ್ಯಾಥ್ಲ್ಯಾಬ್ ಕೂಡ ಕಿಮ್ಸ್ ಆಸ್ಪತ್ರೆಯಲ್ಲಿದೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಕೇವಲ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದ ಎಲ್ಪಿಎ ಆ್ಯಂಡ್ ಸಾಲಿಡ್ ಕಲ್ಚರ್ ಲ್ಯಾಬ್ ಕಿಮ್ಸ್ಗೆ ಲಭ್ಯವಾಗಿದೆ. ಕೇಂದ್ರ ಸರ್ಕಾರ ಈ ಲ್ಯಾಬ್ ವ್ಯವಸ್ಥೆ ಮಾಡಿಕೊಟ್ಟಿದೆ. ಉ-ಕದಲ್ಲಿರುವ ಏಕೈಕ ಲ್ಯಾಬ್ ಇದಾಗಿದೆ.
ವಿಶ್ರಾಂತಿ ಧಾಮ: ರೋಗಿಗಳಿಗೆ ಅಗತ್ಯ ಹೈಟೆಕ್ ಚಿಕಿತ್ಸೆ ಜತೆಗೆ ರೋಗಿಗಳ ಸಂಬಂಧಿಗಳ ಬಗ್ಗೆಯೂ ಕಿಮ್ಸ್ ಕಾಳಜಿ ವಹಿಸಿದೆ. ಇನ್ಫೋಸಿಸ್ ನೆರವಿನೊಂದಿಗೆ ಕಿಮ್ಸ್ ಆವರಣದಲ್ಲಿ ವಿಶ್ರಾಂತಿ ಧಾಮ ನಿರ್ಮಾಣಗೊಳ್ಳುತ್ತಿದೆ. ರೋಗಿಗಳ ಆರೈಕೆಗೆ ಬಂದಿರುವ ಸಂಬಂಧಿಕರು ಇಲ್ಲಿ ಪುಕ್ಕಟ್ಟೆಯಾಗಿ ವಿಶ್ರಾಂತಿ ಪಡೆಯಬಹುದು.
ಸದ್ಬಳಕೆ ಅಗತ್ಯ: ಇಂಥ ಹತ್ತು ಹಲವು ವ್ಯವಸ್ಥೆ ಕಿಮ್ಸ್ನಲ್ಲಿದೆ. ಕಿಮ್ಸ್ನಲ್ಲಿ ಇಂಥ ಸುಸಜ್ಜಿತ ಸೌಲಭ್ಯವಿರುವ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯಿಲ್ಲ. ಅತ್ಯಾಧುನಿಕ ಸೌಲಭ್ಯ, ಸಲಕರಣೆಗಳನ್ನು ವೈದ್ಯರು ಸದುಪಯೋಗ ಪಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅದೆಷ್ಟೋ ಜನರಿಗೆ ಕಿಮ್ಸ್ನಲ್ಲಿ ಇಂಥ ಸೌಲಭ್ಯವಿರುವುದು ತಿಳಿದೇ ಇಲ್ಲ. ಸುಖಾಸುಮ್ಮನೆ ಕಿಮ್ಸ್ ಹಾಳು ಕೊಂಪೆ ಎಂದು ಅಪಪ್ರಚಾರ ಮಾಡುವುದುಂಟು. ಇದನ್ನು ಬಿಟ್ಟು ಕಿಮ್ಸ್ ಬಗ್ಗೆ ಸರಿಯಾದ ಮಾಹಿತಿ ಪಡೆದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಪ್ರವೃತ್ತಿ ಜನರಲ್ಲಿ ಬೆಳೆದು ಬರಬೇಕಿದೆ.
ಕಿಮ್ಸ್ ವೈದ್ಯರೂ ಸಹ ರೋಗಿಗಳ ಚಿಕಿತ್ಸೆಗೆ ಚಾಚೂ ತಪ್ಪದೇ ಕಾಳಜಿ ತೋರಬೇಕಿದೆ. ರೋಗಿಗಳ ಸಂಬಂಧಿಗಳೊಂದಿಗೆ ಸಂಯಮದಿಂದ ವರ್ತಿಸಬೇಕಿದೆ. ಅಂದಾಗ ಕಿಮ್ಸ್ ಅಧಿಕಾರಿ ವರ್ಗ ಹಾಗೂ ರೋಗಿಗಳ ಸಂಬಂಧಿಕರ ನಡುವಿನ ಸಂಘರ್ಷ ಅಂತ್ಯಗೊಳ್ಳಲಿದೆ.
ಬಾಣಂತಿಯರಿಗೆ ಹಾಸಿಗೆ ಸಮಸ್ಯೆ
ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ 35ರಿಂದ 40 ಹೆರಿಗೆಯಾಗುತ್ತದೆ. ಬಾಣಂತಿಯರಿಗೆಗಾಗಿ ಇಲ್ಲಿ 5 ವಾರ್ಡ್ಗಳಿದ್ದು, ಪ್ರತಿ ವಾರ್ಡ್ನಲ್ಲಿ 30 ಹಾಸಿಗೆಯ ವ್ಯವಸ್ಥೆ ಇದೆ. 150 ಬಾಣಂತಿಯರು ಹಾಸಿಗೆ ವ್ಯವಸ್ಥೆ ಪಡೆದುಕೊಳ್ಳಬಹುದು. ಆದರೆ, ಹೆರಿಗೆಯ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರಿಂದ ಇನ್ನಿತರ ವಾರ್ಡ್ಗಳಿಗೆ ಬಾಣಂತಿಯರಿಗೆ ಹಾಸಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಇದೀಗ ಇನ್ನೂ ಹೆಚ್ಚುವರಿಯಾಗಿ 150 ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದರೂ ಅದು ಸಾಲದಾಗಿದೆ. ಸರ್ಕಾರ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕಿದೆ.
-ಪ್ರಕಾಶ ಎಸ್. ಶೇಟ್