ಹಾಸ್ಟೆಲ್ ದುರವಸ್ಥೆ: ಅಧಿಕಾರಿ, ವಾರ್ಡನ್ ಅಮಾನತು
ಧಾರವಾಡ: ಸರ್, ತುಸು ತಡವಾಗಿ ಬಂದರೆ ಬಾಯ್ ಫ್ರೆಂಡ್ ಜೊತೆ ಹೋಗಿದ್ಯಾ ಎಂದು ಕೇಳುತ್ತಾರೆ. ಸುಖಾಸುಮ್ಮನೆ ಹೆದರಿಕೆ ಹಾಕುವುದರ ಜತೆಗೆ ಇಲ್ಲಸಲ್ಲದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ಇಲ್ಲ. ಕೇಳಿದರೆ ಬಯ್ಯುತ್ತಾರೆ...
ಇಲ್ಲಿನ ಕರ್ನಾಟಕ ಕಾಲೇಜಿನ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೊಂದಿಗೆ ಹೇಳಿಕೊಂಡ ಪರಿ ಇದು.
ಮೂರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಅವರ ಆಡಳಿತ ಕುರಿತು ಹೇಳಿಕೊಳ್ಳಲು ಹೆದರಿಕೆಯಾಗುತ್ತಿತ್ತು. ಆದರೆ, ಇಂದು ಅವರ ಕಾಟ ತಡೆಯಲಾಗದೇ ಅನುಭವಿಸುತ್ತಿದ್ದ ಪ್ರತಿಯೊಂದು ಸಮಸ್ಯೆಗಳನ್ನು ವಿದ್ಯಾರ್ಥಿನಿಯರು ಸಚಿವರು ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸರ್ಕಾರದಿಂದ ಅಡುಗೆ ಮಾಡಲು ಒಬ್ಬರು ನೇಮಕವಾಗಿದ್ದರೂ ಇಲ್ಲಿಯವರೆಗೆ ಅವರು ಅಡುಗೆ ಮಾಡಲು ಬಂದಿಲ್ಲ. ಅವರ ಬದಲು ಬೇರೆಯವರನ್ನು ನೇಮಕ ಮಾಡಿಕೊಂಡಿದ್ದಾರೆ. ಸಂಪೂರ್ಣ ಕಳಪೆ ಮಟ್ಟದ ಅಡುಗೆ ನೀಡುತ್ತಾರೆ. ಆದರೆ, ಅದನ್ನೂ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಈ ಕುರಿತು ಯಾವ ವಿದ್ಯಾರ್ಥಿನಿಯರೂ ಪ್ರಶ್ನಿಸುವಂತಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಅಂದು ಅವರಿಗೆ ಊಟ ಸಿಗುವುದಿಲ್ಲ ಎಂದು ವಿದ್ಯಾರ್ಥಿಗಳು ಗೋಳಿಟ್ಟರು. ವಿದ್ಯಾರ್ಥಿಗಳ ಸಂಕಟ ಕೇಳಿ ಜಿಪಂ ಸಿಇಒ ಅವರೊಂದಿಗೆ ಅಲ್ಲಿನ ಊಟ ಸೇವಿಸಿದ ನಂತರ ಕಳಪೆ ಊಟದಿಂದ ಆಕ್ರೋಶಗೊಂಡ ಸಚಿವರು ವಾರ್ಡ್ನ್ ನಾಗರತ್ನಾ ಸಾಸಾನೂರ ಹಾಗೂ ತಾಲೂಕು ಅಧಿಕಾರಿ ಎಂ.ಎಂ. ಶೇಖ್ ಅವರನ್ನು ಅಮಾನತು ಮಾಡಬೇಕೆಂದು ಸ್ಥಳದಲ್ಲಿಯೇ ಆದೇಶಿಸಿದರು. ಜತೆಗೆ ಜಿಲ್ಲೆಯಲ್ಲಿಯ ಪ್ರತಿ ಹಾಸ್ಟೆಲ್ಗೆ ಭೇಟಿ ನೀಡಿ ಅಲ್ಲಿನ ತೊಂದರೆಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.