15 ದಿನಗಳಲ್ಲಿ ಪರಿಹಾರ
ಹುಬ್ಬಳ್ಳಿ: ಜಿಮಖಾನಾ ಮೈದಾನಕ್ಕೆ ಸಂಬಂಧಿಸಿದಂತೆ ಸರ್ಕಾರ 2 ಪಕ್ಷಗಳಿಂದ ದಾಖಲೆಕೇಳಿದ್ದು, 15 ದಿನಗಳಲ್ಲಿ ವಿವಾದ ಪರಿಹರಿಸುವುದಾಗಿ ಸಚಿವ ಲಾಡ್ ಹೇಳಿದರು.
ಶನಿವಾರ, ಜಿಮಖಾನಾ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ನಾಡೋಜ ಡಾ. ಪಾಟೀಲ ಪುಟ್ಟಪ್ಪರನ್ನು ಭೇಟಿಯಾದ ಅವರು, ಸರ್ಕಾರ ಜನರ ಪರ ತೀರ್ಮಾನ ತೆಗೆದುಕೊಳ್ಳಲಿದೆ. ವೈಯಕ್ತಿಕವಾಗಿ ಅಲ್ಲಿನ ಜನರಿಗೆ ಈ ಕ್ಲಬ್ ಬೇಡ ಎನ್ನುವುದು ಇದ್ದರೆ, ಜನರ ಪರ ತೀರ್ಮಾನ ತೆಗೆದುಕೊಳ್ಳಲಾಗುವುದು. ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡದಿದ್ದಲ್ಲಿ ಸರ್ಕಾರ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ರಿಕ್ರಿಯೆಷನ್ ಕ್ಲಬ್‌ನಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯಾಗಿದ್ದಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಕೆಲವು ದಿನಗಳ ಹಿಂದೆ ಸೂಚಿಸಿದ್ದೆ, ಮತ್ತೆ ಕಾಮಗಾರಿ ಆರಂಭವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ರಾಜಕೀಯ ಹುನ್ನಾರವಿಲ್ಲ: ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಜಿಮಖಾನಾ ಮೈದಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜಕೀಯ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿಲ್ಲ. ಡಾ. ಪಾಟೀಲ ಪುಟ್ಟಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ಈ ಕಾರಣದಿಂದ ಎಲ್ಲ ರಾಜಕೀಯ ಪಕ್ಷಗಳು ರಿಕ್ರಿಯೆಷನ್ ಕ್ಲಬ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ಸಚಿವ ಲಾಡ್ ಹೇಳಿದರು.
ಜನರ ಪರ ನಿಲ್ಲಿ: ಪಾಪು
ಜಿಮಖಾನಾ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ನಿವಾಸಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೊಂದಿಗೆ ಮಾತನಾಡಿದ ನಾಡೋಜ ಪಾಟೀಲ ಪುಟ್ಟಪ್ಪ, ವಿವಾದಕ್ಕೆ ಸಂಬಂಧಿಸಿದಂತೆ ಜನರ ಪರ ಸಂತೋಷ ಲಾಡ್ ನಿಂತುಕೊಳ್ಳಬೇಕು. ಕೆಲವೇ ಜನರ ಹಿತಾಸಕ್ತಿ ಕಾಪಾಡುವ ಬದಲು ಆ ಪ್ರದೇಶದ ಜನರ ಇಚ್ಛೆಯಂತೆ ಸರ್ಕಾರ ತನ್ನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.