ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ

Vishwanath S
Updated On : 8 Sept 2013, 11:32 am

ಧಾರವಾಡ: ವಿಘ್ನವಿನಾಶಕ, ಏಕದಂತ, ಲಂಬೋದರ..ಹೀಗೆ ತರಹೇವಾರಿ ಹೆಸರುಗಳಿಂದ ನಿತ್ಯ ಪೂಜಿಸುವ ಗಣಪತಿ ವಿಗ್ರಹಗಳು ಜನತೆಯ ಅಜ್ಞಾನದ ಪರಾಕಾಷ್ಠೆಯಿಂದ ಪರಿಸರಕ್ಕೆ ಹಾನಿ ತರುತ್ತಿವೆ.
ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರ್ಷದಿಂದ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲು ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ರಾಜ್ಯ ಸರ್ಕಾರದಿಂದ ಈ ಬಾರಿ ರಾಜ್ಯದೆಲ್ಲೆಡೆ ದೊಡ್ಡ ಅಳತೆ ಬ್ಯಾನರ್-ಪೋಸ್ಟರ್‌ಗಳನ್ನು ಹಚ್ಚುವ ಮೂಲಕ ಪರಿಸರಸ್ನೇಹಿ ಗಣಪತಿಗಳನ್ನು ಸ್ಥಾಪಿಸಿ ಎಂದು ಜಾಗೃತಿ ಮೂಡಿಸುತ್ತಿರುವುದು ಒಂದೆಡೆಯಾದರೆ, ಧಾರವಾಡ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ, ಇದರ ಜತೆಗೆ ಹತ್ತು ಹಲವು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಸೇರಿಸಿಕೊಂಡಿದೆ.
ಕಾರ್ಯಕ್ರಮಗಳೇನು?: ಗಣೇಶ ಹಬ್ಬದ ನಾಲ್ಕು ತಿಂಗಳ ಮುಂಚೆಯೇ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಗಣೇಶ ಮೂರ್ತಿ ತಯಾರಕರನ್ನು ಒಂದೆಡೆ ಸೇರಿಸಿ ಕಾರ್ಯಾಗಾರ ಮಾಡುವ ಮೂಲಕ ಪರಿಸರ ಸ್ನೇಹಿ (ಮಣ್ಣಿನ) ಗಣಪತಿಗಳನ್ನು ಸಿದ್ಧಪಡಿಸುವಂತೆ ಪ್ರಯತ್ನಿಸಲಾಯಿತು. ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರನ್ನು ಕರೆದುಕೊಂಡು ಜಾಥಾದ ಮೂಲಕ ಜನಜಾಗೃತಿ ಮೂಡಿಸಲಾಗಿದೆ. ಸ್ವ-ಸಹಾಯ ಸಂಘಗಳ ಸದಸ್ಯರನ್ನು ಒಗ್ಗೂಡಿಸಿ ಅವರಿಗೂ ತಿಳಿವಳಿಕೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸುವ ಗಣೇಶ ಮೂರ್ತಿಗಳು ಮಣ್ಣಿನ ಅಥವಾ ಪರಿಸರ ಸ್ನೇಹಿ ಮೂರ್ತಿಗಳಾಗಿರಬೇಕೆಂದು ಎಲ್ಲ ಶಾಲೆಗಳಿಗೂ ಕರಪತ್ರಗಳನ್ನು ಹಂಚಲಾಗಿದೆ. ಗಣೇಶ ವಿಸರ್ಜನೆಯ ದಿನಗಳಲ್ಲಿ ರಾತ್ರಿ ತಾತ್ಕಾಲಿಕ ಟ್ಯಾಂಕ್‌ಗಳನ್ನು ನಿರ್ಮಿಸಿ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಗಳ ಫಲವಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಪರಿಸರ ಸ್ನೇಹಿ ಗಣಪತಿಗಳಿಗೆ ಬೇಡಿಕೆ ಬರುತ್ತಿದ್ದು, ಬರುವ ವರ್ಷಗಳಲ್ಲಿ ರಾಸಾಯನಿಕ ಗಣೇಶ ಮೂರ್ತಿಗಳು ಇಲ್ಲವಾಗುತ್ತವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಕುಮಾರ ಕಡಕಬಾಯಿ ಭರವಸೆ ವ್ಯಕ್ತಪಡಿಸುತ್ತಾರೆ.
ಅಪಾಯ ಊಹಿಸಲು ಅಸಾಧ್ಯ: ವಿಗ್ರಹಗಳಿಗೆ ಬಳಿಯುವ ಬಣ್ಣ ಹಾಗೂ ಉಪಯೋಗಿಸುವ ಇತರೆ ವಸ್ತುಗಳನ್ನು ಹಾನಿಕಾರಕ ರಾಸಾಯನಿಕ ಬಳಸಿ ತಯಾರಿಸಲಾಗುತ್ತದೆ. ಪ್ರಮುಖವಾಗಿ ಸೀಸ ಹಾಗೂ ಆರ್ಸೆನಿಕ್ ಭಾರೀ ಲೋಹಗಳಾಗಿದ್ದು ವಿಗ್ರಹಗಳನ್ನು ವಿಸರ್ಜಿಸುವಾಗ ಇವುಗಳು ಕೂಡಾ ನೀರಿನೊಂದಿಗೆ ಸೇರಿ ಆ ನೀರನ್ನು ಸೇವಿಸಿದ್ದಲ್ಲಿ ಆಗುವ ಅಪಾಯ ಊಹಿಸಲು ಅಸಾಧ್ಯ. ಅಲ್ಲದೇ, ದನಕರುಗಳು ಈ ನೀರನ್ನು ಕುಡಿದಲ್ಲಿ ಅಥವಾ ಈ ನೀರಿನಿಂದ ಬೆಳೆದ ಮೇವು ತಿಂದಲ್ಲಿ ಅಪಾಯಕಾರಿ ರಾಸಾಯನಿಕ ವಸ್ತುಗಳು ದನಗಳ ಹಾಲಿನ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತವೆ. ನೀರಿನಲ್ಲಿರುವ ಜಲಚರಗಳಿಗೂ ಹಾನಿ ತಪ್ಪಿದ್ದಲ್ಲ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ಸ್ಥಾಪಿಸಿ ಎನ್ನುತ್ತಾರೆ ಪರಿಸರವಾದಿ ಡಾ. ಮುಕುಂದ ಮೈಗೂರ.
ನಮ್ಮ ಹಿರಿಯರು ಸಾಂಪ್ರದಾಯಿಕ ಪದ್ಧತಿ ಪ್ರಕಾರ ತಯಾರಿಸುತ್ತಿದ್ದ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕಾಗಿ ಹಲವಾರು ರೀತಿಯ ಗಿಡಮೂಲಿಕೆಗಳು, ನೈಸರ್ಗಿಕವಾಗಿ ದೊರೆಯುವ ವಸ್ತುಗಳು, ಗಿಡ, ತರಕಾರಿ, ಹೂವು ಮತ್ತಿತರೆ ವಸ್ತುಗಳನ್ನು ಬಳಸಿ ತಯಾರಿಸಲಾದ ಬಣ್ಣಗಳನ್ನೇ ಬಳಿಯುತ್ತಿದ್ದರು. ಆದರೆ, ಆಧುನಿಕತೆಯ ಮತ್ತು ಸೌಂದರ್ಯದ ಭರಾಟೆಯಲ್ಲಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸಿ ತಯಾರಿಸಿದ ಗಣೇಶ ವಿಗ್ರಹ ಮಾತ್ರ ಈಗ ಮಾರಕವಾಗಿ ಪರಿಣಮಿಸಿದ್ದು, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಜನತೆಯ ಮನ ಬದಲಿಸುವ ಕಾರ್ಯ ಇನ್ನೂ ನಡೆಯಬೇಕಿದೆ ಎನ್ನುವುದು ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಭಿಪ್ರಾಯ.
ಗಣೇಶ ಹಬ್ಬದಾಚರಣೆಗೆ ಇನ್ನು ಒಂದು ದಿನ ಬಾಕಿ ಇದೆ. ಕಾಲ ಮಿಂಚಿಲ್ಲ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪೂಜಿಸಲು ಅವಕಾಶವಿದ್ದು, ಈ ಮೂಲಕ ಪರಿಸರಕ್ಕೆ ಕಿಂಚಿತ್ ಕೊಡುಗೆ ನೀಡುವ ಕೈಂಕರ್ಯದಲ್ಲಿ ಸಾರ್ವಜನಿಕರು ತೊಡಗಬೇಕಿದೆ.

-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement