ಕೆಪಿಸಿಸಿ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹಣೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 10
ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಟಿಕೆಟ್ ಬಯಸಿ 15ಕ್ಕೂ ಹೆಚ್ಚು ಆಕಾಂಕ್ಷಿಗಳು ನಗರಕ್ಕೆ ಮಂಗಳವಾರ ಬಂದಿದ್ದ ಪ್ರದೇಶ ಕಾಂಗ್ರೆಸ್ ಸಮಿತಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದರು.
ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ನಗರಕ್ಕೆ ಬಂದಿದ್ದ ಕೆಪಿಸಿಸಿ ವೀಕ್ಷಕರಾದ ಶಾಸಕ ನರೇಂದ್ರ ಬಾಬು, ಓಬೆದುಲ್ಲಾ ಶರೀಫ, ನಾರಾಯಣಸ್ವಾಮಿ, ಆರ್.ಬಿ. ತಿಮ್ಮಾಪೂರ, ಮೋಹನ ಕೊಂಡಜ್ಜಿ, ಹಾಗೂ ಹಿರಣಯ್ಯ ಸ್ವಾಮಿ ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಕಾಟನ್ ಕೌಂಟಿ ಕ್ಲಬ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆದುಕೊಂಡರು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಚಿವ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಕೀರ ಸನದಿ, ವಿಜಯ ಕುಲಕರ್ಣಿ, ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಡಾ. ಮಹೇಶ ನಾಲವಾಡ, ಸದಾನಂದ ಡಂಗನವರ, ಶರಣಪ್ಪ ಕೊಟಗಿ, ಲೋಹಿತ ನಾಯ್ಕರ, ಅಜ್ಜಂಪೀರ ಖಾದ್ರಿ, ಶಿವಾ ನಾಯ್ಕ ಹಾಗೂ ಮತ್ತಿತರರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಕಾಟನ್‌ಕೌಂಟಿ ಕ್ಲಬ್‌ಗೆ ತೆರಳಿದ ಟಿಕೆಟ್ ಆಕಾಂಕ್ಷಿಗಳು, ತಾವು ಪಕ್ಷದಲ್ಲಿ ನಿರ್ವಹಿಸಿದ ಜವಾಬ್ದಾರಿಗಳು ಹಾಗೂ ತಮ್ಮ ಸಾಧನೆಯ ಬಗ್ಗೆ ವಿವರಗಳನ್ನು ವೀಕ್ಷಕರಿಗೆ ವಿವರಿಸಿದರು. ತಮಗೆ ದೊರೆತ ಪ್ರಮಾಣ ಪತ್ರ ಹಾಗೂ ಇದುವರೆಗೆ ಮಾಡಿರುವ ಕಾರ್ಯಗಳನ್ನು ಭಾವಚಿತ್ರ ಸಮೇತ ಅರ್ಜಿಯೊಂದಿಗೆ ಸಲ್ಲಿಸಿದರು. ಧಾರವಾಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಯಾವೊಬ್ಬ ಮಹಿಳೆಯರೂ ಅರ್ಜಿ ಸಲ್ಲಿಸದೇ ಇರುವುದು ಗಮನ ಸೆಳೆಯಿತು. ಟಿಕೆಟ್ ಆಕಾಂಕ್ಷಿಗಳೊಂದಿಗೆ ಬಂದಿದ್ದ ಬೆಂಬಲಿಗರು, ತಮ್ಮ ಮುಖಂಡನಿಗೇ ಟಿಕೆಟ್ ನೀಡಬೇಕೆಂಬ ಮನವಿ ಸಲ್ಲಿಸಿದರು. ತಮ್ಮ ಮುಖಂಡರ ಪರವಾಗಿ ಜಯಘೋಷಣೆಗಳನ್ನೂ ಕೂಗಿದರು. ತಮ್ಮ ಮುಖಂಡರಿಗೆ ಟಿಕೇಟ್ ನೀಡಿದಲ್ಲಿ ಗೆಲುವು ಖಚಿತವೆಂಬ ಭರವಸೆಯನ್ನೂ ಬೆಂಬಲಿಗರು ನೀಡುತ್ತಿದ್ದರು. ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಸಾವಿರಾರು ಬೆಂಬಲಿಗರಿಂದಾಗಿ ಕಾಟನ್‌ಕೌಂಟಿ ಕ್ಲಬ್ ಸುತ್ತಲೂ ವಾಹನಗಳು ಸಾಲುಸಾಲಾಗಿ ನಿಂತಿದ್ದವು. ಬೆಳಗ್ಗೆ ಕಾಟನ್ ಕೌಂಟಿ ಕ್ಲಬ್‌ಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವೀಕ್ಷಕರನ್ನು ಭೇಟಿಯಾಗಿ ಕುಶಲೋಪಹರಿ ಚರ್ಚಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ನಾಗರಾಜ ಛಬ್ಬಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗರಿಗೆದರಿದ ಚಟುವಟಿಕೆ: ಮುಂಬರುವ ವರ್ಷದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ಕೆ ಕೆಪಿಸಿಸಿ ಚಾಲನೆ ನೀಡಿದೆ. ಇದರಿಂದಾಗಿ ಚುನಾವಣೆಗೆ ಈಗಿನಿಂದಲೇ ಚಟುವಟಿಕೆಗಳು ಪ್ರಾರಂಭಗೊಂಡಂತಾಗಿವೆ.
ನಗರದಲ್ಲಿ ಮಂಗಳವಾರ ಚುನಾವಣೆ ಟಿಕೆಟ್ ಬಯಸಿ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವೀಕ್ಷಕರು ರಾಜ್ಯ ಮುಖಂಡರೆದುರು ಸಲ್ಲಿಸಲಿದ್ದಾರೆ. ನಂತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಮತ್ತಿತರ ಮುಖಂಡರು ಅಭ್ಯರ್ಥಿ ಹೆಸರು ಅಂತಿಮಗೊಳಿಸಲಿದ್ದಾರೆ. ಅಂತಿಮಗೊಂಡ ಅಭ್ಯರ್ಥಿ ಹೆಸರನ್ನು ದೆಹಲಿಗೆ ಕಳುಹಿಸಿ, ಹೈಕಮಾಂಡ್‌ನಿಂದ ಹಸಿರು ನಿಶಾನೆ ದೊರೆತ ಬಳಿಕ ಅಭ್ಯರ್ಥಿ ಹೆಸರು ಬಹಿರಂಗಗೊಳಿಸಲಿದ್ದಾರೆ.
ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳು ಟಿಕೆಟ್ ಪಡೆದುಕೊಳ್ಳುವುದಕ್ಕಾಗಿ ರಾಜ್ಯ ಮುಖಂಡರ ಮೇಲೆ ಒತ್ತಡ ಹೇರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅರ್ಹತೆ ಇರುವ ಆಕಾಂಕ್ಷಿಯನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದಾಗಿ ಕೆಪಿಸಿಸಿ ವೀಕ್ಷಕರು ಹೇಳುತ್ತಿದ್ದರೂ, ಹೆಚ್ಚು ಪ್ರಭಾವ ಬೀರುವ ಆಕಾಂಕ್ಷಿಗೆ ಟಿಕೆಟ್ ಲಭಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.