ದರೋಡೆಗೆ ಸಂಚು ಹಾಕಿದ್ದ ಐವರ ಬಂಧನ
ಹುಬ್ಬಳ್ಳಿ: ವಾಹನಗಳನ್ನು ತಡೆದು ದರೋಡೆಗಾಗಿ ಹೊಂಚು ಹಾಕಿದ್ದ ಐವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಾರವಾರ ರಸ್ತೆಯ ಕೆಂಪಗೇರಿ ಬಳಿ ವಾಹನಗಳನ್ನು ತಡೆದು ದರೋಡೆ ಮಾಡುವುದಕ್ಕಾಗಿ ಬೈಕ್‌ನಲ್ಲಿ ಕಾಯುತ್ತಿದ್ದ ಸುನೀಲ ಬಂಡಿವಡ್ಡರ ಹಾಗೂ ಇನ್ನಿತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೈಯ್ಯಲ್ಲಿ ಕಬ್ಬಿಣದ ರಾಡು, ಬಡಿಗೆ, ಚಾಕೂ ಹಿಡಿದುಕೊಂಡು ಕೀಸೆಯಲ್ಲಿ ಕಾರದಪುಡ್ನಿ ಇಟ್ಟುಕೊಂಡು ಆರೋಪಿಗಳು ವಾಹನಗಳಿಗಾಗಿ ಕಾಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಮೊಬೈಲ್ ಕಳ್ಳತನ
ಹುಬ್ಬಳ್ಳಿ: ಹಣ್ಣು ಖರೀದಿಸುತ್ತಿದ್ದ ವ್ಯಕ್ತಿಯೊಬ್ಬನ ಜೇಬಿನಿಂದ ಮೊಬೈಲ್ ಕಳ್ಳತನ ಮಾಡಿದ ಘಟನೆ ಬಾರದಾನಸಾಲಿನಲ್ಲಿ ನಡೆದಿದೆ. ಗೋಕುಲರಸ್ತೆ ನಿವಾಸಿ ಗಜಾನನ ಕಾಶೀನಾಥಸಾ ಬಾಕಳೆ ಎಂಬುವವರು ಹಣ್ಣು ಖರೀದಿಸುತ್ತಿದ್ದಾಗ ಇವರ ಜೇಬಿನಲ್ಲಿದ್ದ ಸುಮಾರು ರು. 20 ಸಾವಿರ ಮೌಲ್ಯದ ಮೊಬೈಲ್‌ನ್ನು ಕಳ್ಳತನ ಮಾಡಲಾಗಿದೆ. ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲ್ಗೆಟ್ ಪೇಸ್ಟ್ ಕಳ್ಳತನ
ಹುಬ್ಬಳ್ಳಿ: ಲಾರಿಯಲ್ಲಿದ್ದ ಸುಮಾರು ರು. 1.61 ಲಕ್ಷ ಮೌಲ್ಯದ ಕೋಲ್ಗೆಟ್ ಪೇಸ್ಟ್‌ನ ಡಬ್ಬಿಗಳನ್ನು ಕಳ್ಳತನ ಮಾಡಿದ ಘಟನೆ ನಗರದ ಹೊಸ ಗಬ್ಬೂರ ಬಳಿ ನಡೆದಿದೆ. ಹರ್ಯಾಣಾದಿಂದ ಲಾರಿಯಲ್ಲಿ ಸಾಗಿಸುತ್ತಿದ್ದ ಕೋಲ್ಗೆಟ್ ಪೇಸ್ಟ್‌ನ ಸುಮಾರು 30 ಡಬ್ಬಿಗಳನ್ನು ಕಳ್ಳರು ದೋಚಿದ್ದಾರೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರು. 95 ಸಾವಿರ ದಂಡ ವಸೂಲಿ
ಹುಬ್ಬಳ್ಳಿ: ಅವಳಿ ನಗರದಲ್ಲಿ ಸೆ. 8ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 829 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ರು. 95,700 ದಂಡ ವಸೂಲಿ ಮಾಡಲಾಗಿದೆ.
ಕೋಟ್ಪಾ ಕಾಯ್ದೆ ನಿಯಮ ಉಲ್ಲಂಘನೆ: ದೂರು
ಹುಬ್ಬಳ್ಳಿ: ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ 5 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ರು. 900 ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ವಾದಿರಾಜಾಚಾರ್ಯ
ಧಾರವಾಡ: ಶ್ರೀನಗರದ ನಿವಾಸಿಯಾಗಿದ್ದ ವಾದಿರಾಜಾಚಾರ್ಯ ನರಸಿಂಹಾಚಾರ್ಯ ಹರಿಭಟ್(85) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ, ಅಪಾರ ಬಂಧು-ಬಳಗ ಇದ್ದಾರೆ.