ಧಾರಾಕಾರ ಮಳೆಗೆ ಕೆರೆಗಳು ಭರ್ತಿ
ಹುಬ್ಬಳ್ಳಿ: ನವಲಗುಂದ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಕೆರೆ-ಕುಂಟಿ ಹಳ್ಳ-ಕೊಳ್ಳಗಳು ಭರ್ತಿಯಾಗಿ, ನೀರು ಪ್ರವಾಹರೂಪದಲ್ಲಿ ಹರಿಯಿತು.
ಮೂರು ವರ್ಷಗಳಿಂದ ಮಳೆಗಾಗಿ ಕಂಗೆಟ್ಟ ಮಣ್ಣಿನ ಮಗನ ಬೆಳೆಗಳನ್ನು ಈ ಬಾರಿ ಹುಬ್ಬಿ ಮಳೆ ಬದುಕಿಸಿದೆ. ತಾಲೂಕಿನ ನಲವಡಿಯಲ್ಲಿ ಸಂಜೆ 4 ಗಂಟೆಗೆ ಸಣ್ಣಗೆ ಸುರಿಯಲು ಪ್ರಾರಂಭಿಸಿದ ಮಳೆ ಬರಬರುತ್ತ ಬಿರುಸಾಗಿ ಬೀಳಲಾರಂಭಿಸಿತು. ಎರಡು ಗಂಟೆಗೂ ಅಧಿಕ ಕಾಲ ಹಣಿದ ಮಳೆಗೆ ನಲವಡಿ, ಮಣಕವಾಡ, ಭದ್ರಾಪುರ, ಉಮಚಗಿ, ರೊಟ್ಟಿಗವಾಡ ಮುಂತಾದೆಡೆ ರೈತರ ಜಮೀನುಗಳಲ್ಲಿ ಒಡ್ಡು, ಹೊಳಗಟ್ಟಿಗಳು ಒಡೆದಿದ್ದು, ಮುಂಚಿತವಾಗಿ ಬಿತ್ತಿದ್ದ ಕೆಲವು ರೈತರ ಬೆಳೆಗಳು ಮಳೆ ನೀರಲ್ಲಿ ನಿಂತಿವೆ.
ಸುಮಾರು 8-9 ತಿಂಗಳಿಂದ ನೀರಿಗಾಗಿ ಪರದಾಡುತ್ತಿದ್ದ ನಲವಡಿ ಗ್ರಾಮಸ್ಥರಿಗೆ ಮಂಗಳವಾರ ಮಳೆರಾಯ ನೀರಿನ ಸಮಸ್ಯೆಗೆ ಮಂಗಳ ಹಾಡಿದ್ದಾನೆ. ಗ್ರಾಮದ ಎರಡೂ ಕೆರೆಗಳು ತುಂಬಿದ್ದರಿಂದ ಗ್ರಾಮಸ್ಥರ ಮುಖದಲ್ಲಿ ಆನಂದ ಲಾಸ್ಯವಾಡುತ್ತಿತ್ತು. ತುಂಬಿದ ಕೆರೆ ನೋಡಲು ಗ್ರಾಮಸ್ಥರು ಕೆರೆ ದಡದಲ್ಲಿ ಸೇರಿ, ಕೇಕೆ, ಸಿಳ್ಳೆ, ಭಗವಂತನಿಗೆ ನಮಿಸುತ್ತಿರುವುದು ಕಂಡುಬಂತು.
ಕೆಲವರು ಕೆರೆಯ ದಂಡೆ ಎಲ್ಲಿ ಒಡೆದು ಹೋಯಿತೋ ಎಂದು ಗಾಬರಿಯಿಂದ ಎರಡೂ ಕೆರೆಗಳ ಮಧ್ಯೆದಲ್ಲಿ ಇರುವ ಹೊಳಗಟ್ಟಿಯ ಅಕ್ಕ-ಪಕ್ಕದ ದಂಡೆಗಳ ಮೇಲೆ ಮಣ್ಣಿನ ಉಂಡೆಗಳನ್ನು ಮಾಡಿ ಹಾಕಿದರು.
ಕೆಲವು ಹಿರಿಯರು ಸೇರಿ ಗ್ರಾಮದ ಕೋಡಿ (ನೀರು ಹರಿದು ಬರುವ ಮಾರ್ಗ)ಗೆ ಹಾಕಿದ್ದ ತಗಡಿನ ಗೇಟುಗಳನ್ನು ತೆರೆದು ಬಿಡುವಂತೆ ಹೇಳಿದಾಗ ಯುವಜನತೆ ತಕ್ಷಣ ತೆಗೆದಾಗ ಹೊರಕ್ಕೆ ಬಂದ ನೀರಿನ ಭೋರ್ಗರೆತೆ ನೆರೆದವರ ಕಿವಿಗಡಚುಕ್ಕುವಂತೆ ಮಾಡಿತು.
ಗ್ರಾಮದ ಮುತ್ತೈದೆಯರು, ಯುವಜನತೆ ಕೆರೆಗೆ ಪೂಜೆ ಸಲ್ಲಿಸಿದರು.