ವಿದ್ಯಾನಗರಿಯಲ್ಲಿ ಜಾಗೃತಿ ವಿಘ್ನೇಶ
ಧಾರವಾಡ: ಪ್ರತಿ ವರ್ಷ ಬರುವ ಗಣೇಶ ಚತುರ್ಥಿಗೆ ತರಹೇವಾರಿ ರೂಪದಲ್ಲಿ ಕಾಣಿಸಿಕೊಳ್ಳುವ ವಿಘ್ನ ವಿನಾಶಕ, ಪ್ರಸಕ್ತ ವರ್ಷ ವಿದ್ಯಾನಗರಿ ಧಾರವಾಡದಲ್ಲಿ ಇನ್ನಷ್ಟು ಭಿನ್ನವಾಗಿ ಜನರ ಮನಸೂರೆಗೊಂಡಿದ್ದಾನೆ.
ಧಾರವಾಡದ ಕೆಲ ಪ್ರದೇಶಗಳಲ್ಲಿ ಈ ಬಾರಿ ಪ್ರತಿಷ್ಠಾಪನೆಗೊಂಡ ಗಣಪತಿ ಬರೀ ಪೂಜೆಗಷ್ಟೆ ಸೀಮಿತವಾಗಿಲ್ಲ. ಪರಿಸರ ಕಾಳಜಿ ಅದರೊಂದಿಗೆ ಸಮಾಜಕ್ಕೆ ಅಂಟಿಕೊಂಡಿರುವ ಪೀಡುಗುಗಳ ಬಗ್ಗೆಯೂ ಜನಜಾಗೃತಿ ಮೂಡಿಸಲಾಂಭಿಸಿದ್ದಾನೆ. ನೋಡಿದಾಕ್ಷಣ ಸುಮ್ಮನೆ ಕಣ್ಮುಚ್ಚಿ ಕೈ ಮುಗಿದು ಬೇಡಿಕೊಳ್ಳುವುದು ಮಾತ್ರವಲ್ಲ, ಗಣೇಶನಿಂದ ತುಸು ಪಾಠ ಕಲಿಯಬೇಕು ಎನಿಸುತ್ತದೆ. ಇಲ್ಲಿ ಸ್ಥಾಪನೆಗೊಂಡ ಒಂದೊಂದು ಮೂರ್ತಿಗಳು ಒಂದು ಬಗೆಯ ಸಂದೇಶ ಸಾರುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿಯ ಮೊಳಕೆಯೊಡಿಯುತ್ತಿವೆ. ಈ ಮೊದಲು ಬರೀ ಅಲಂಕಾರಕ್ಕೆ ಹೆಚ್ಚಿನ ತಲೆ ಕೆಡಿಸಿಕೊಳ್ಳುತ್ತಿದ್ದ ಗಣೇಶೋತ್ಸವ ಮಂಡಳಿಗಳು ಪ್ರಸ್ತುತ ಅಂಧ-ಚಂದ ವೆಚ್ಚಕ್ಕಿಂತ ವಿಶೇಷ ರೀತಿ ಚಿಂತನೆ ನಡೆಸಿವೆ. ಅದರ ಫಲವಾಗಿ ಧಾರವಾಡದ ಕೆಲವೆಡೆ ಪ್ರತಿಷ್ಠಾಪಿಸಿದ ಗಣೇಶ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾನೆ.
ಬಾಲ್ಯ ವಿವಾಹ ವಿರೋಧಿ: 11 ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ಹಾವೇರಿಪೇಟ ಮೃತ್ಯುಂಜಯ ಯುವಕ ಮಂಡಳ ಈ ಬಾರಿ ಪ್ರತಿಷ್ಠಾಪಿಸಿರುವ ಗಣೇಶ ವಿಗ್ರಹ ಬಾಲ್ಯ ವಿವಾಹ ವಿರೋಧಿ. ಅಲ್ಲದೇ, ರುಪಾಯಿ ಮೌಲ್ಯ ಕುಸಿತದಿಂದ ದೇಶಕ್ಕಾಗುವ ನಷ್ಟ ಹಾಗೂ ದೇಸಿ ವಸ್ತುಗಳನ್ನು ಖರೀದಿಸಿ ನಮ್ಮಲ್ಲಿಯೇ ಅಡಗಿರುವ ಸುಪ್ತ ಪ್ರತಿಭೆಗೆ ಅವಕಾಶ ನೀಡಿ ಎಂಬ ಪ್ರತಿಪಾದನೆ ಮಾಡುತ್ತಿದೆ ಎನ್ನುವುದು ಮಂಡಳದ ಅಧ್ಯಕ್ಷ ಕುಮಾರ ಕಾಗಿನೆಲೆ ಅಭಿಪ್ರಾಯ.
ಸೂಪರ್ ಮಾರ್ಕೆಟ್: ವಿವೇಕಾನಂದರ 150ನೇ ಜನ್ಮ ಶತಮಾನೋತ್ಸವ ನಿಮಿತ್ತ ಸೂಪರ್ ಮಾರುಕಟ್ಟೆ ವ್ಯಾಪಾರಸ್ಥರು ವಿವೇಕಾನಂದ ಸ್ವರೂಪಿ ಗಣಪತಿ ಪ್ರತಿಷ್ಠಾಪಿಸಿದ್ದಾರೆ. 25 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸುತ್ತಿರುವ ವ್ಯಾಪಾರಸ್ಥರು ಈ ಬಾರಿ ವಿವೇಕಾನಂದರು ಅಮೆರಿಕದ ಚಿಕ್ಯಾಗೋನಲ್ಲಿ ಮಾಡಿದ ಭಾಷಣ ಸೇರಿದಂತೆ ಅವರ ಅನೇಕ ಭಾಷಣಗಳನ್ನು ಜನರಿಗೆ ಕೇಳಿಸಲಾಗುತ್ತದೆ. ಅಲಂಕಾರಕ್ಕಾಗಿ ಅಮರನಾಥ ಗುಹೆ ತದ್ರೂಪಿ ನಿರ್ಮಿಸಲಾಗಿದೆ. ಪ್ರತಿವರ್ಷವೂ ವಿವಿಧ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎನ್ನುತ್ತಾರೆ ಅರ್ಚಕ ವಸಂತ ಭಟ್.
ಗಾಂಧಿ ಚೌಕ್: ಗಾಂಧಿಚೌಕ್‌ನ ಗಜಾನನ ಉತ್ಸವ ಸಮಿತಿ ಗಾಂಧಿಚೌಕನಲ್ಲಿರುವ ಗಣಪ ಬಲು ಸಿಟ್ಟಿನಲ್ಲಿದ್ದಾನೆ. ಸಮಾಜದಲ್ಲಿ ನಡೆಯುತ್ತಿರುವ ಅಹಿಂಸಾ ಚಟುವಟಿಕೆ ಖಂಡಿಸುತ್ತಿದ್ದಾನೆ. ಸುತ್ತಲು ಪರಿಸರ ಕಾಳಜಿ ಮೆರೆಯುವ ಹಚ್ಚ ಹಸಿರಿನ ಅಲಂಕಾರ. ಅದಕ್ಕೆ ಪೂರಕವಾದ ವಿದ್ಯುತ್ ಅಲಂಕಾರ. 40ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೊದಲು ಕ್ರಾಂತಿಕಾರಿ ಯುವಕ ಮಂಡಳದವರು ಇಲ್ಲಿ ಗಣೇಶ ಇಡುತ್ತಿದ್ದರು. 1971ರ ನಂತರ ಗಜಾನನ ಉತ್ಸವ ಸಮಿತಿ ಆಚರಣೆ ಮುಂದುವರೆಸುತ್ತಿದೆ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಗೋಪಾಲ ಜೋಶಿ.
ಉತ್ತರಾಖಂಡ: ಧಾರವಾಡ ಕರ್ನಾಟಕ ಕಾಲೇಜಿನ ಮುಖ್ಯ ಪ್ರವೇಶ ದ್ವಾರ ಬಳಿ ಶ್ರೀ ವಿದ್ಯಾಗಣೇಶ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ ಮೂರ್ತಿ ಪರಿಸರ ಸ್ನೇಹಿ. ಇಲ್ಲಿ ಅಲಂಕಾರಕ್ಕೆ ಉತ್ತಾರಖಂಡ ಜಲಪ್ರಳಯ ತೋರಿಸುತ್ತಿದ್ದು, ಇದಕ್ಕೆ ಮಾನವರೇ ಕಾರಣ ಎಂಬುದನ್ನು ತಿಳಿಸುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಅವೈಜ್ಞಾನಿಕ ಪ್ರಕೃತಿ ಬಳಕೆಯಿಂ ದ ವಿಕೋಪ ಉಂಟಾಗುತ್ತವೆ ಎಂಬುದನ್ನು ಬಿಂಬಿಸಿ 'ಅರಣ್ಯ ಬೆಳೆಸಿ ನಾಡು ಉಳಿಸಿ' ಸಂದೇಶ ಸಾರುವ ಅಲಂಕಾರ ಮಾಡಿದ್ದಾರೆ.
ಹೆಬ್ಬಳ್ಳಿ ಅಗಸಿ: ಇಲ್ಲಿನ ಶ್ರೀ ಸಿದ್ದಿ ವಿನಾಯಕ ಗಜಾನನ ಸಮಿತಿ ಅಯ್ಯಪ್ಪ, ಷಣ್ಮುಕ ಹಾಗೂ ಗಣಪತಿ ಮೂರ್ತಿಗಳುಳ್ಳ ವಿನಾಯಕನ್ನು ಪ್ರತಿಷ್ಠಾಪಿಸಿದೆ. ಅಲ್ಲದೇ, ಅಲಂಕಾರಕ್ಕಾಗಿ ಸುಮಾರು 20 ಅಡಿಗೂ ಹೆಚ್ಚು ಎತ್ತರವಿರುವ ಮೂರು ಮಂಗಗಳನ್ನು ನಿರ್ಮಿಸಲಾಗಿದೆ. ಕೆಟ್ಟದನ್ನು ನೋಡಬಾರದು, ಕೆಟ್ಟದನ್ನು ಕೇಳಬಾರದು, ಕೆಟ್ಟದನ್ನು ಮಾತನಾಡಬಾದೆಂಬ ಸಂದೇಶ ಸಾರುವ ಮೂರು ಮಂಗಗಳು ಇಲ್ಲಿವೆ. 48 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಸಮಿತಿಯ ಶಂಕರ ಜಮದಾಡೆ ಹೇಳುತ್ತಾರೆ.
ಗೌಳಿಗಲ್ಲಿ: ಇಲ್ಲಿನ ಮಾರುತಿ ಯುವಕ ಮಂಡಳ 1985ರಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ. ಅಲ್ಲದೇ, ಈ ಮೂರ್ತಿ ಪರಿಸರ ಸ್ನೇಹಿ ಗಣಪತಿ. ಮರವೊಂದರಲ್ಲಿ ಗಣಪತಿ ರೂಪ ಮೂಡಿಸಲಾಗಿದ್ದು, ಮರದಂತಿರವ ಮೂರ್ತಿಯಲ್ಲಿಯೇ, ಹಾವು, ಇಲಿ, ಗುಬ್ಬಿಯ ಗೂಡುಗಳನ್ನು ಮೂಡಿಸಲಾಗಿದೆ. ಹೆಸರಿನಲ್ಲಿ ಅಲಂಕಾರ ಮಾಡಿದ್ದು, ವಿಶೇಷವಾಗಿ ವಿದ್ಯುತ್ ದೀಪಾಲಂಕಾರದ ಬದಲು ಚಿಮಣಿ ಬೆಳಕು ನೀಡಿ ನೈಸರ್ಗಿಕ ಅಲಂಕಾರ ಮಾಡಲಾಗಿದೆ ಎಂದು ದಿಲೀಪ್ ಕವಡೆ ಕನ್ನಡಪ್ರಭಕ್ಕೆ ತಿಳಿಸಿದರು.
ಹೀಗೆ ಅಕ್ಕಿಪೇಟೆ, ಸಂಗಮ ವೃತ್ತ, ಕಮಲಾಪುರ, ಶ್ರೀನಗರ, ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವ ಪರಿಸರ ಸ್ನೇಹಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಸಂಕೇತ.
-ಕಲ್ಮೇಶ ಪಟ್ಟಣದವರ
ಜಲಮೂಲಗಳಲ್ಲಿ ಗಣೇಶನ ವಿಗ್ರಹಗಳ ವಿಸರ್ಜನೆ ಬೇಡ
ಧಾರವಾಡ: ವಿವಿಧ ಬಣ್ಣಗಳಿಂದ ಸಿದ್ಧಪಡಿಸುವ ಗಣೇಶ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಮೂಲಗಳು ಕಲುಷಿತಗೊಳ್ಳಲಿದ್ದು, ಮಂಡಳಿ ವತಿಯಿಂದ ವ್ಯವಸ್ಥೆ ಮಾಡಿದ ಸಂಚಾರಿ ವಾಹನಗಳಲ್ಲಿಯೇ ವಿಸರ್ಜಿಸಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯಕುಮಾರ ಕಡಕಭಾವಿ ಮನವಿ ಮಾಡಿದ್ದಾರೆ.
ವಾಹನಗಳ ಸಂಚಾರ ಮಾರ್ಗ: ಧಾರವಾಡದ ಮಾಳಮಡ್ಡಿ, ಹೊಸಯಲ್ಲಾಪುರ, ಸಪ್ತಾಪುರ, ಜಯನಗರ ಹಾಗೂ ಶ್ರೀನಗರದಲ್ಲಿ ಸೆ. 13ರ ಶುಕ್ರವಾರ ಸಂಜೆ 7ರಿಂದ ರಾತ್ರಿ 10ರ ವರೆಗೆ. ಹುಬ್ಬಳ್ಳಿಯ ನವನಗರ, ವಿದ್ಯಾನಗರ ಪಾರ್ಕ್ ಪ್ರದೇಶಗಳಲ್ಲಿ ಸೆ. 13ರ ಸಂಜೆ 7 ರಿಂದ ರಾತ್ರಿ 10ರ ವರೆಗೆ ಸಂಚಾರಿ ವಾಹನ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.