ವಿವಿಧೆಡೆ ಆಕರ್ಷಕ ಗಣಪತಿ...
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 10
ನಗರದ ವಿವಿಧೆಡೆ ಆಕರ್ಷಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಹುಬ್ಬಳ್ಳಿಯಲ್ಲಿ 11 ದಿನ ಹಾಗೂ ಹಳೇ ಹುಬ್ಬಳ್ಳಿಯಲ್ಲಿ 9 ದಿನಗಳವರೆಗೆ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಅತಿ ಎತ್ತರದ ಹಾಗೂ ವಿವಿಧ ರೂಪಗಳಲ್ಲಿ ನಿರ್ಮಾಣಗೊಂಡಿರುವ ಗಣೇಶ ಮೂರ್ತಿ ಸಾರ್ವಜನಿಕರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಅತ್ಯಾಕರ್ಷಕ ವಿದ್ಯುತ್ ದೀಪ ಹಾಗೂ ಪೌರಾಣಿಕ ನಾಟಕಗಳೂ ಜನಾಕರ್ಷಣೀಯವಾಗಿವೆ. ಅವಳಿ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿನ ಆಕರ್ಷಕ ಗಣಪತಿ ಮೂರ್ತಿಗಳಲ್ಲಿ ಕೆಲವನ್ನು ಪ್ರಕಟಿಸಲಾಗಿದೆ.
--
ಗಣೇಶ ವೀಕ್ಷಣೆಗೆ ತಣ್ಣೀರೆರಚಿದ ಮಳೆ
ಹುಬ್ಬಳ್ಳಿ: ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗೆ ಅನುಕೂಲತೆ ಒದಗಿಸಿದ್ದರೆ, ಗಣೇಶೋತ್ಸವಕ್ಕೆ ತಣ್ಣೀರೆರಚಿದೆ.
ಮಳೆಯಿಂದಾಗಿ ಸಾರ್ವಜನಿಕ ಸ್ಥಳದಲ್ಲಿರಿಸಿದ ಗಣೇಶ ಮೂರ್ತಿ ವೀಕ್ಷಣೆಗೆ ಜನಸಂದಣಿ ನಿರೀಕ್ಷೆಗಿಂತಲೂ ಕಡಿಮೆ ಇದೆ. ಪ್ರತಿ ವರ್ಷ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಹಿಂಡುಹಿಂಡಾಗಿ ತೆರಳುತ್ತಿದ್ದ ಕುಟುಂಬ ಸದಸ್ಯರು, ಈ ಬಾರಿ ಮಳೆಯಿಂದಾಗಿ ರಸ್ತೆಗಿಳಿಯಲು ಹಿಂದೇಟು ಹಾಕುವಂತಾಗಿದೆ.
ನಗರ ಪ್ರದೇಶವಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ಇಟ್ಟಿರುವ ಸಾರ್ವಜನಿಕ ಗಣಪತಿ ವೇದಿಕೆಯಲ್ಲಿ ಪೌರಾಣಿಕ ಸನ್ನಿವೇಶಗಳ ದೃಶ್ಯ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಈ ದೃಶ್ಯಗಳ ವೀಕ್ಷಣೆಗಾಗಿಯೇ ಪ್ರತಿ ವರ್ಷ ಸಾರ್ವಜನಿಕರು ಗುಂಪುಗುಂಪಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಸಾಮಾನ್ಯ ಸಂಗತಿ.
ಆದರೆ, ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಮಳೆ ಗಣೇಶ ಮೂರ್ತಿಗಳನ್ನು ವೀಕ್ಷಿಸುವ ಸಾರ್ವಜನಿಕರ ಸಂತಸಕ್ಕೆ ತಣ್ಣೀರೆರಚಿದೆ.
ಜಿಲ್ಲೆ ಹಾಗೂ ಸುತ್ತಲಿನ ಪ್ರದೇಶಗಳಿಂದ ಗಣೇಶ ಮೂರ್ತಿ ವೀಕ್ಷಣೆಗಾಗಿ ಛಬ್ಬಿಗೆ ತೆರಳುತ್ತಿದ್ದವರ ಸಂಖ್ಯೆಯೂ ಇಳಿಮುಖವಾಗಿದೆ. ಮೂರು ದಿನಗಳವರೆಗೆ ಛಬ್ಬಿಯಲ್ಲಿ ಪ್ರತಿಷ್ಠಾಪಿಸುವ ಕೆಂಪು ಗಣೇಶನ ದರ್ಶನಕ್ಕೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಆದರೆ ಸತತವಾಗಿ ಸುರಿಯುತ್ತಿರುವ ಮಳೆ ಛಬ್ಬಿ ಗಣೇಶನ ದರ್ಶನಕ್ಕೆ ಬರುವ ಭಕ್ತರಿಗೂ ಅಡಚಣೆಯನ್ನುಂಟು ಮಾಡಿದೆ. ಮಂಗಳವಾರವೂ ಮಧ್ಯಾಹ್ನ ಸುಮಾರು ಒಂದು ತಾಸಿನವರೆಗೆ ಸುರಿದ ಮಳೆ ಸಾಮಾನ್ಯ ಜನಜೀವನಕ್ಕೆ ಅಡಚಣೆಯನ್ನುಂಟು ಮಾಡಿತು.
14ರಂದು ಸನ್ಮಾನ
ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯ ವ್ಯಕ್ತಿಗಳನ್ನು ಶ್ರೀ ಗಣೇಶೋತ್ಸವದ ಅಂಗವಾಗಿ ಸೆ. 14ರಂದು ನಗರದ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಸನ್ಮಾನಿಸಲಾಗುತ್ತಿದೆ. ಗೋ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಎಚ್. ಮೇಘರಾಜ ಕವಾಡ, ಮಕ್ಕಳ ತಜ್ಞ ಹಾಗೂ ಹವ್ಯಾಸಿ ಹಿನ್ನಲೆ ಗಾಯಕ ಡಾ. ಬದರಿ ನಾರಾಯಣ ಶೆಟ್ಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕವಿಯತ್ರಿ ಡಾ. ಸರೋಜಿನಿ ಚೌಲಾರ ಅವರನ್ನು ಸನ್ಮಾನಿಸಲಾಗುವುದು. ಸೆ. 14ರಂದು ಮಧ್ಯಾಹ್ನ 12.30ಕ್ಕೆ ಜೆ.ಸಿ. ನಗರದ ಟೌನ್ ಹಾಲ್ನಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಮಹಾಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್ ತಿಳಿಸಿದ್ದಾರೆ.