ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಉದ್ದಿಮೆ ಸಾಲದ ಬಡ್ಡಿದರ ಇಳಿಕೆ: ವಂದಿತಾ ಶರ್ಮಾ

Lingaraj Badiger
Updated On : 12 Sept 2013, 10:55 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 11
ಉದ್ದಿಮೆದಾರರನ್ನು ಉತ್ತೇಜಿಸುವ ಉದ್ದೇಶದಿಂದ ಸಾಲದ ಮೇಲಿನ ಬಡ್ಡಿದರ ಇಳಿಸುವ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕರಾದ ವಂದಿತಾ ಶರ್ಮಾ ಭರವಸೆ ನೀಡಿದರು.
ಸಮೀಪದ ಮಯೂರ ಆದಿತ್ಯಾ ರೆಸಾರ್ಟ್‌ನಲ್ಲಿ ಬುಧವಾರ ನಡೆದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಲದ ಮೇಲಿರುವ ಶೇ. 13.5ರಿಂದ 14ರಷ್ಟಿರುವ ಬಡ್ಡಿದರ ಇನ್ನಷ್ಟು ಕಡಿಮೆಗೊಳಿಸಿ, ಈ ಮೂಲಕ ಉದ್ದಿಮೆದಾರರು ಮತ್ತಷ್ಟು ಸದೃಢವಾಗಿ ಬೆಳೆಯಲು ಸಂಸ್ಥೆ ತೀರ್ಮಾನಿಸಿದ್ದು, ಈ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಖಾಸಗಿ ಆಡಳಿತದ ಬ್ಯಾಂಕುಗಳಂತೆ ರಾಜ್ಯ ಹಣಕಾಸು ಸಂಸ್ಥೆ ಲಾಭಕ್ಕಾಗಿ ಸಾಲ ನೀಡುವುದಿಲ್ಲ. ಹೆಚ್ಚಿನ ಪ್ರಮಾಣದ ದಂಡ ವಿಧಿಸುವುದಿಲ್ಲ. ಸಣ್ಣ ಉದ್ದಿಮೆಗಳ ಬೆಳವಣಿಗೆಗಳೇ ಸಂಸ್ಥೆಯ ಪ್ರಮುಖ ಉದ್ದೇಶ ಎಂದರು.
ಕೆಎಸ್‌ಎಫ್‌ಸಿ ಸರ್ಕಾರದ ಸಂಸ್ಥೆಯಾಗಿದ್ದರೂ ಸ್ವಂತ ಬಲದ ಮೇಲೆ ಕೆಲಸ ನಿರ್ವಹಿಸುತ್ತಿದೆ. ಸಂಸ್ಥೆಯ ಆಡಳಿತ ನಿರ್ವಹಣೆ ಖರ್ಚು ಜಾಸ್ತಿಯಾಗಿದ್ದು, ಇತ್ತೀಚಿಗಷ್ಟೇ ಸುಧಾರಣೆಯಾಗುತ್ತಿದೆ. ನೀಡಿದ ಸಾಲ ಹಾಗೂ ಬಡ್ಡಿಯನ್ನು ಉದ್ದಿಮೆದಾರರು ಸರಿಯಾಗಿ ಮರುಪಾವತಿಸಿದರೆ ಮಾತ್ರ ಇನ್ನಷ್ಟು ಹೆಚ್ಚಿನ ಸಾಲವನ್ನು ಉದ್ದಿಮೆದಾರರಿಗೆ ವಿತರಿಸಲು ಅನುಕೂಲವಾಗುತ್ತದೆ ಎಂದರು.
ಅಲ್ಲದೆ, ಕೃಷಿ ಸಂಬಂಧಿ ಉದ್ದಿಮೆಗಳಿಗೂ ಸಾಲ ಸೌಲಭ್ಯ ಒದಗಿಸುವುದು ಹಾಗೂ ಹೊಸ ಉದ್ದಿಮೆದಾರರಿಗೆ ಉದ್ದಿಮೆ ಕುರಿತಂತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಸ್ಸಿ-ಎಸ್ಟಿ ವರ್ಗದ ಉದ್ದಿಮೆದಾರರಿಗೆ ಈಗ ಶೇ. 4ರ ಬಡ್ಡಿದರದಲ್ಲಿ ನೀಡುತ್ತಿರುವ ರು. 2 ಕೋಟಿ ಗರಿಷ್ಠ ಮಟ್ಟದ ಹಣವನ್ನು ಹೆಚ್ಚಿಸುವ ಕುರಿತಂತೆಯೂ ತೀರ್ಮಾನ ಕೈಗೊಳ್ಳಲಾಗುವುದು. ಉದ್ದಿಮೆದಾರರಿಗೆ ಸಾಲ ವಿತರಣೆಯಲ್ಲಿ ಗರಿಷ್ಠ ಮಟ್ಟದ ರಿಯಾಯ್ತಿ ಕೊಡುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಂದಿತಾ ಶರ್ಮಾ ಭರವಸೆ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ, ನಮ್ಮಲ್ಲಿ ಇಷ್ಟೊಂದು ಆರ್ಥಿಕ ತಜ್ಞರು ಇದ್ದರೂ ರುಪಾಯಿ ಅಪಮೌಲ್ಯ ಹಾಗೂ ಹಣದುಬ್ಬರದಿಂದ ಇಡೀ ದೇಶ ತತ್ತರಿಸಿದೆ. ಈ ಸ್ಥಿತಿಯಲ್ಲಿ ಉದ್ದಿಮೆ ಬೆಳೆಸಿ-ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದ್ದು, ಕೆಎಸ್‌ಎಫ್‌ಸಿ ಉದ್ದಿಮೆದಾರರಿಗೆ ಸಹಕಾರ ನೀಡುವ ಮೂಲಕ ಅವರನ್ನು ಗಟ್ಟಿಗೊಳಿಸಬೇಕೆಂದರು. ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಕೊಪ್ಪಳ, ಕಾರವಾರ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳ ಉದ್ದಿಮೆದಾರರಾದ ನಾರಾಯಣ ಕೋಪರ್ಡೆ, ಕಾಡಪ್ಪಾ ಮೈಸೂರ, ಶಿವಣ್ಣ ಮುಳಗುಂದ, ಬಾಬುರೆಡ್ಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ದಕ್ಷಿಣ ಕರ್ನಾಟಕದ ಉದ್ದಿಮೆದಾರರು ತಮಗೆ ಬೇಕಾದ ಸೌಲಭ್ಯಗಳನ್ನು ಸರಳವಾಗಿ ಪಡೆದು ಲಾಭದಲ್ಲಿದ್ದಾರೆ. ಆದರೆ, ಉ-ಕದ ಉದ್ದಿಮೆದಾರರು ಬಡತನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್‌ಎಫ್‌ಸಿ ಈ ಭಾಗದ ಉದ್ದಿಮೆದಾರರಿಗೆ ವಿಶೇಷ ರಿಯಾಯ್ತಿ ಒದಗಿಸಬೇಕು. ಸಾಲ ನೀಡುವಾಗ ಹತ್ತಾರು ಕಾಗದ ಪತ್ರಗಳ ಬದಲಾಗಿ ಅಗತ್ಯವಾದವುಗಳನ್ನು ಮಾತ್ರ ಪಡೆದುಕೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.
ಸಂಸ್ಥೆಯ ಅಧಿಕಾರಿ ಎನ್. ಅಶ್ವಥರಾಮ್, ಮಹಾಂತೇಶ ಹಮ್ಮಿಗಿ ಸಂಸ್ಥೆ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಉಪ ವ್ಯವಸ್ಥಾಪಕ ಸುನೀಲ ಕುಲಕರ್ಣಿ ನಿರೂಪಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಪಿ.ಆರ್. ಜಾಧವ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement