ಜಿಲ್ಲಾಧಿಕಾರಿ ಪ್ರಸ್ತಾಪಕ್ಕೆ ಲಾಡ್ ಅಸಮ್ಮತಿ
ಹುಬ್ಬಳ್ಳಿ: ವಾಜಪೇಯಿ ನಗರ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಡಿ 996 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿ ದರ್ಪಣ್ ಜೈನ್ ಸಲ್ಲಿಸಿರುವ ಪ್ರಸ್ತಾವನೆ ಕೈಬಿಡಬೇಕು ಎಂದು ವಸತಿ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪತ್ರ ಬರೆದಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಯಲ್ಲಾಪುರದಲ್ಲಿನ 35 ಎಕರೆ ಜಮೀನಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ಜಿ2 ಮಾದರಿ 996 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಎದುರು ಇರುವ ಪ್ರಸ್ತಾಪ ರದ್ದುಗೊಳಿಸಬೇಕು ಎಂದು ವಸತಿ ಸಚಿವರಿಗೆ ಸಚಿವ ಸಂತೋಷ ಲಾಡ್ ಪತ್ರ ಬರೆದಿದ್ದಾರೆ.
ವಾಜಪೇಯಿ ನಗರ ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆ ಬಡವರ ವಿರೋಧಿಯಾಗಿದ್ದು ಆದ್ದರಿಂದ ಸರ್ಕಾರ ಪ್ರಸ್ತಾಪ ತಿರಸ್ಕರಿಸಬೇಕು ಎಂದು ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದರು.
ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ತನ್ನ ಮನವಿಯಲ್ಲಿ 2011ರ ಆಶ್ರಯ ಯೋಜನೆಯಡಿ ಅಂದಿನ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರು ಆಶ್ರಯ ಯೋಜನೆ ನಿಯಮಗಳನ್ನು ಗಾಳಿಗೆ ತೂರಿ ಹರಾಜು ಪ್ರಕ್ರಿಯೆ ಮುಖಾಂತರ ನಿವೇಶನ ಮಾರಾಟ ಮಾಡುವುದಕ್ಕೆ ಸರ್ಕಾರದ ಎದುರು ಇಟ್ಟಿದ್ದರು. ಅಂದಿನ ಜಿಲ್ಲಾಧಿಕಾರಿ ಪ್ರಸ್ತಾಪಿಸಿದ ಯೋಜನೆಯಿಂದ ಶ್ರೀಮಂತರಿಗೆ ಅನುಕೂಲವಾಗುತ್ತದೆ ವಿನಃ ಬಡವರಿಗೆ ಸೂರು ಸಿಗುವುದಿಲ್ಲ ಎಂದು ತಿಳಿಸಿದ್ದರು.
ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವಸತಿ ಸಚಿವ ಅಂಬರೀಷ್ ಅವರಿಗೆ ಬರೆದಿರುವ ಪತ್ರದಲ್ಲಿ 35 ಎಕರೆ ಜಮೀನಿನಲ್ಲಿ ಜಿ2 ಮಾದರಿ 996 ಮನೆಗಳನ್ನು ನಿರ್ಮಿಸುವ ಬದಲು 3500 ಮನೆಗಳನ್ನು ಕೂಡ ನಿರ್ಮಿಸಬಹುದಾಗಿದ್ದು, ಆದ್ದರಿಂದ ವಸತಿ ಇಲಾಖೆ ಪ್ರಸ್ತಾಪಿತ ಯೋಜನೆಗೆ ಅನುಮೋದನೆ ನೀಡಬಾರದು ಎಂದು ತಿಳಿಸಿದ್ದಾರೆ.