ಹಿಂದೂ-ಮುಸ್ಲಿಂ ಭಾವೈಕ್ಯದ 'ಹೆಬ್ಬಳ್ಳಿ ಕಾ ರಾಜಾ'
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 11
ದೇವರೊಬ್ಬ ನಾಮ ಹಲವು ಎಂಬ ವ್ಯಾಖ್ಯಾನದ ನಿಜ ಅರ್ಥವನ್ನು ತಾಲೂಕಿನ ಹೆಬ್ಬಳ್ಳಿ ಗ್ರಾಮದ 'ಈಶ್ವರ ಅಲ್ಲಾ ಗೆಳೆಯರ ಬಳಗ' ಸಾಬೀತು ಮಾಡಿದಂತಿದೆ.
ಹೌದು... ಹೆಬ್ಬಳ್ಳಿ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಗೆಳೆಯರ ಬಳಗವು 15 ವರ್ಷಗಳಿಂದ ಹಿಂದೂ-ಮುಸ್ಲಿಂ ಭಾವೈಕ್ಯದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಅಲ್ಲದೆ, ಈ ಗೆಳೆಯರ ಬಳಗ ಎಲ್ಲ ಧರ್ಮೀಯ ಹಬ್ಬಗಳನ್ನು ಸಡಗರದಿಂದ ಆಚರಿಸುವ ಮೂಲಕ ಭ್ರಾತೃತ್ವ ಭಾವನೆ ಜನರಲ್ಲಿ ಮೂಡಿಸುತ್ತಿದೆ. ಜಾತಿ-ಧರ್ಮದ ಹೆಸರಿನಲ್ಲಿ ಅನಾಚಾರ ಎಸಗುವ ಇಂದಿನ ದಿನಮಾನಗಳಲ್ಲಿಯೂ ಸಹ ಭಾವೈಕ್ಯತೆ ಪ್ರತಿಬಿಂಬವಾಗಿ ಈ ಗೆಳೆಯರ ಬಳಗ ಟೊಂಕ ಕಟ್ಟಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವೇ ಸರಿ.
ಈ ವರ್ಷ ಗ್ರಾಮದ ಹುಲಿಮಠದ ಓಣಿಯಲ್ಲಿ ಸುಮಾರು 10 ಅಡಿ ಎತ್ತರದ ಗಣೇಶ ಮೂರ್ತಿ 'ಹೆಬ್ಬಳ್ಳಿ ಕಾ ರಾಜಾ' ಎಂಬ ಬಿರುದಾಂಕಿತದಲ್ಲಿ ಸ್ಥಾಪಿಸಲಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ತದ್ರೂಪಿಯ ವಿಶೇಷ ಮಂಟಪ ನಿರ್ಮಿಸಲಾಗುತ್ತಿದೆ. ಅಲ್ಲದೆ, ಗ್ರಾಮದಲ್ಲಿಯೇ ಇದು ಅತಿ ಎತ್ತರದ ಗಣೇಶ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿತ್ಯ ಇಲ್ಲಿನ ಮುಸ್ಲಿಂ ಬಂಧುಗಳೇ ಹಿಂದೂ ಸಂಪ್ರದಾಯದಂತೆ ಗಣೇಶನಿಗೆ ಪೂಜೆ ಹಾಗೂ ನೈವೇದ್ಯ ಸಲ್ಲಿಸುತ್ತಿಸುತ್ತಿರುವುದು ವಿಶೇಷ.
ಹಿಂದೂ ಹಾಗೂ ಮುಸ್ಲಿಂರಲ್ಲಿ ಯಾವುದೇ ಭೇದ-ಭಾವ ಬರಬಾರದೆಂಬ ದೃಷ್ಟಿಯಿಂದ ನಾವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಆರಂಭಿಸಿದ್ದೇವೆ. ಈಗ ಎಲ್ಲರಿಂದ ಉತ್ತಮ ಸ್ಪಂದನೆ ಬರುತ್ತಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಗಣೇಶನನ್ನು ನೋಡಲು ಬರುತ್ತಾರೆ. 11 ದಿನಗಳ ವರೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸತ್ಯ ನಾರಾಯಣ ಪೂಜೆ ದಿನ ವಿಶಿಷ್ಟ ಪೂಜೆ ನಡೆಸಿ ಅನ್ನಸಂತರ್ಪಣೆ ಮಾಡಲಾಗುತ್ತದೆ ಎನ್ನುತ್ತಾರೆ ಗೆಳೆಯರ ಬಳಗದ ಸದಸ್ಯ ಹಾಸೀಮಸಾಬ ಗುಡಿಸಿಲಮನಿ.
ಸದ್ಯ ಈ ಗೆಳೆಯರ ಬಳಗದ ಕಾರ್ಯವೈಖರಿ ಕಂಡ ಗ್ರಾಮಸ್ಥರು ಇವರ ಹಬ್ಬದಾಚರಣೆಗೆ ಸಹಾಯ, ಸಹಕಾರ ನೀಡುತ್ತಿದ್ದಾರೆ. ಅಲ್ಲದೆ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ಅನೇಕರು ಗೆಳೆಯರ ಬಳಗಕ್ಕೆ ಸಲಹೆ ಸೂಚನೆ ನೀಡುತ್ತಾರೆ. ಅದರಂತೆ ಗ್ರಾಮದ ನಾಗರಾಜ ಸುಣಗಾರ, ಸಿದ್ದಪ್ಪ ಕುಂಬಾರ, ಮಡಿವಾಳಿ ಕಡೆಮನಿ, ಬಸವರಾಜ ಕಮ್ಮಾರ, ಬಾನಿ ಸೇರಿದಂತೆ ಅನೇಕ ಗ್ರಾಮಸ್ಥರು ಇವರೊಂದಿಗೆ ಕೈಜೋಡಿಸಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವಕ್ಕೆ ಹೆಚ್ಚು ಮೆರುಗು ಬರುವಂತೆ ಮಾಡುತ್ತಿರುವುದು ಇದೀಗ ಪ್ರಶಂಸೆಗೆ ಗುರಿಯಾಗಿದೆ.
ಇಂತಹ ಅಪರೂಪದ ಸೇವೆಯಲ್ಲಿ ತೊಡಗಿರುವ ಈ ಗೆಳೆಯರ ಬಳಗ ಕಳೆದ ಐದು ವರ್ಷಗಳ ಹಿಂದೆಯೇ ನೋಂದಣಿ ಸಹ ಮಾಡಿಕೊಂಡಿದೆ. ಬಳಗದ ಪದಾಧಿಕಾರಿಗಳು ಸೇರಿ ಗುಂಪು ಚರ್ಚೆ ಮಾಡಲು ಮತ್ತು ಜನರಿಗೆ ಬೇಕಾದ ಅಗತ್ಯ ವಸ್ತುಗಳ ಶೇಖರಣೆಗೆ ಸ್ಥಳಾವಕಾಶವಿಲ್ಲ. ಆದ್ದರಿಂದ ಸ್ಥಳೀಯ ಸರ್ಕಾರ ಇಂತಹ ಸಂಘಟನೆಗಳನ್ನು ಗುರುತಿಸಿ ಅವರಿಗೆ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬುದೇ ಗ್ರಾಮಸ್ಥರ ಒಕ್ಕೊರಲಿನ ಅಭಿಮತ.
-ಕಲ್ಮೇಶ ಪಟ್ಟಣದವರ