20 ತಿಂಗಳಲ್ಲಿ ರು. 2.33 ಕೋಟಿ ಠೇವಣಿ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 12
ಸಾರ್ವಜನಿಕರಿಗೆ ಸೂಕ್ತ ಸೇವೆ ಒದಗಿಸುವ ನಿಟ್ಟಿನಲ್ಲಿ ಧಾರವಾಡದ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್ 20 ತಿಂಗಳ ಯಶಸ್ವಿ ಸೇವೆ ಸಲ್ಲಿಸಿದೆ ಎಂದು ಶಾಖೆಯ ಅಧ್ಯಕ್ಷ ರಾಮಚಂದ್ರ ದಾಸಣ್ಣವರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗಾಗಿ ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗಿಸುವ ಉದ್ದೇಶ ಹಾಗೂ ಹಣಕಾಸು ವಿಷಯಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳು, ನಗರ ಪ್ರದೇಶದ ಬ್ಯಾಂಕುಗಳು ನೀಡುವ ಎಲ್ಲ ಸೇವೆಗಳನ್ನು ನೀಡುವ ಸಲುವಾಗಿ ರಾಜ್ಯದಲ್ಲಿ ಒಟ್ಟು 76 ಶಾಖೆಗಳನ್ನು ತೆರೆಯಲಾಗಿದೆ. ಜನರಿಗೆ ಅಗತ್ಯವಿರುವ ಗಣಕೀಕರಣ, ಟೆಲ್ ಬ್ಯಾಂಕಿಂಗ್, ಆರ್‌ಟಿಜಿಎಸ್, ಎನ್‌ಇಎಫ್‌ಟಿ, ವಿಮಾನ, ರೈಲು, ಬಸ್ ಟಿಕೆಟ್ ಬುಕ್ಕಿಂಗ್ ಸೇವೆ ಹೀಗೆ ಅನೇಕ ಸೇವೆಗಳನ್ನು ಬ್ಯಾಂಕ್ ನೀಡುತ್ತಿದೆ. ಅಲ್ಲದೇ, ಸಣ್ಣ ವ್ಯಾಪಾರಸ್ಥರಿಗೆ ಮೈಕ್ರೋ ಫೈನಾನ್ಸ್ ಅಡಿ ಶೇ.10ರ ಬಡ್ಡಿ ದರಲ್ಲಿ ಸಾಲ ನೀಡಲಾಗುತ್ತಿದೆ. 20 ತಿಂಗಳಲ್ಲಿ ಸಹಕಾರಿ ಬ್ಯಾಂಕ್‌ನಲ್ಲಿ 2.33 ಕೋಟಿ ಠೇವಣಿಯಾಗಿದ್ದು, ಆ ಪೈಕಿ ರು. 1.56 ಕೋಟಿ ಸಾಲ ನೀಡಿದೆ ಎಂದರು.
ಶಾಖೆಯ ನಿರ್ದೇಶಕ ಲೋಚನೇಶ ಹೂಗಾರ ಮಾತನಾಡಿ, ಸಂಸ್ಥೆ ವತಿಯಿಂದ 8ನೇ ತರಗತಿಯಿಂದ ಪಿಯುಸಿಯ 42 ವಿದ್ಯಾರ್ಥಿಗಳಿಗೆ ರು. 50 ಸಾವಿರ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನೀಡಲಾಗಿದೆ. ಸಂಸ್ಥೆಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವಾದರೆ, ಇನ್ನು ಹೆಚ್ಚು ಸಾಮಾಜಿಕ ಸೇವೆಯಲ್ಲಿ ಹಣ ತೊಡಗಿಸಲಾಗುವುದು. ಅಲ್ಲದೇ, ಈ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸೇವೆ ನೀಡಲಾಗುತ್ತಿದೆ. ಅದರಂತೆ ಭಾನುವಾರ ಡಿಡಿ ತೆಗೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ನಿರ್ದೇಶಕರಾದ ದೇವರಾಜ ಕಂಬಳಿ, ನೇಮಿನಾಥ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.