ಉದ್ಯೋಗ ಮೇಳ: ಅವಧಿ 15ರ ವರೆಗೆ ವಿಸ್ತರಣೆ
ಧಾರವಾಡ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೆ. 15ರಂದು ಜೆಎಸ್ಸೆಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳವನ್ನು ಮುಂದೂಡಲಾಗಿದೆ. ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೊ. ಸಂಗೀತಾ ಕಟ್ಟಿಮನಿ ಮೊ. 97409 62537 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಇಂದು ಶ್ರದ್ಧಾಂಜಲಿ ಸಭೆ
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕನ್ನಡದ ಪ್ರೌಢ ವಿಮರ್ಶಕ, ಕವಿ-ಕತೆಗಾರರಾದ ಡಾ. ಕೆ. ರಾಮಚಂದ್ರದೇವ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬೇಂದ್ರೆ ಭವನದಲ್ಲಿ ಸೆ. 13ರಂದು ಸಂಜೆ 6ಕ್ಕೆ ಹಮ್ಮಿಕೊಂಡಿದೆ. ಸಾಹಿತ್ಯಾಸಕ್ತರು ಪಾಲ್ಗೊಳ್ಳಲು ಡಾ.ಶ್ಯಾಮಸುಂದರ ಬಿದರಕುಂದಿ ತಿಳಿಸಿದ್ದಾರೆ.
ನಾಳೆ ಪದವಿಪೂರ್ವಕಾಲೇಜುಗಳ ಕ್ರೀಡಾಕೂಟ
ಧಾರವಾಡ: ಪದವಿಪೂರ್ವ ಶಿಕ್ಷಣ ಇಲಾಖೆಯು ನಿಗದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಧಾರವಾಡ ಗ್ರಾಮೀಣ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಏರ್ಪಡಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಎರಡು ದಿನ ನಡೆಯುವ ಈ ಕ್ರೀಡಾಕೂಟವನ್ನು ಸೆ. 14ರ ಬೆಳಗ್ಗೆ 9.30ಕ್ಕೆ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು.
ಅ.15: ಯಶಸ್ವಿನಿ ಸದಸ್ಯತ್ವ ನೋಂದಣಿಗೆ ಕೊನೆ ದಿನ
ಧಾರವಾಡ: ಸಹಕಾರ ಸಂಘಗಳ ಸದಸ್ಯರಿಗಾಗಿ ಜಾರಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಪ್ರತಿ ಸದಸ್ಯತ್ವಕ್ಕೆ ರು. 210, ಪರಿಶಿಷ್ಟರಾಗಿದ್ದರೆ ರು. 10 ಶುಲ್ಕ ನೀಡಿ ನೋಂದಾಯಿಸಲು ಅಕ್ಟೋಬರ್ 15 ಕೊನೆ ದಿನ ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ತಿಳಿಸಿದೆ.
ಲೋಕಾಯುಕ್ತರ ಕಾರ್ಯಕ್ರಮ
ಧಾರವಾಡ: ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್ ಅವರು ಸೆ. 17 ಹಾಗೂ 18ರಂದು ಮುಂಜಾನೆ 10ರಿಂದ ಆಲೂರು ವೆಂಕಟರಾವ್ ಭವನದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸುವರು.
ವಿವಿಧ ಕಾರ್ಯಕ್ರಮ
ಧಾರವಾಡ: ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರವು ವಿಶ್ವ ಓಝೋನ್ ದಿನದ ಅಂಗವಾಗಿ ಸೆ. 16ರಂದು ಜಿಲ್ಲೆಯ ನವಲಗುಂದ ತಾಲೂಕಿನ ವಿದ್ಯಾರ್ಥಿಗಳಿಗೆ ನವಲಗುಂದ ಶಂಕರ ಪಿಯು ಕಾಲೇಜಿನಲ್ಲಿ ಉಪನ್ಯಾಸ ಮಾಲೆ, ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಹಮ್ಮಿಕೊಂಡಿದೆ. ಬಿಇಒ ಬಸವರಾಜ ಮಾಯಾಚಾರಿ ಅಂದು ಬೆಳಗ್ಗೆ 11ಕ್ಕೆ ಸಮಾರಂಭ ಉದ್ಘಾಟಿಸುತ್ತಾರೆ. ಕಾಲೇಜು ಪ್ರಾಚಾರ್ಯ ಎಸ್.ಬಿ. ಕುಂದಗೋಳ ಅಧ್ಯಕ್ಷತೆ ವಹಿಸುತ್ತಾರೆ. ಡಾ. ಯು.ಎಸ್. ರಾಯಕರ ಓಝೋನ್ಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಬಗ್ಗೆ ವಿವರಣೆ ನೀಡುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕವಿವಿ ರಸಾಯನಶಾಸ್ತ್ರ ವಿಭಾಗದ ಡಾ. ಎಸ್.ಟಿ. ನಂದಿಬೇವೂರ ಮತ್ತು ಡಾ. ಐ.ಐ. ಪಟ್ಟಣಶೆಟ್ಟಿ ಭಾಗವಹಿಸುತ್ತಾರೆ.