ಸಾರ್ಥಕ ಬದುಕಿನ ಸಾಧಕ ಶಿಂಗೆ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 12
ಜಾಗತಿಕ ಸವಾಲುಗಳಿಗೆ ಪೂರಕವಾಗಿ ಗುಣಾತ್ಮಕ ಶಿಕ್ಷಣ ಇರಬೇಕೆಂಬ ಡಾ. ಪ್ರಭಾಕರ ಕೋರೆ ಅವರ ಇಚ್ಛೆಯಂತೆ ಆಡಳಿತ ನಡೆಸುತ್ತಿರುವ ಪ್ರಾಚಾರ್ಯ ಅಶೋಕ ಶಿಂಗೆ ಸಾರ್ಥಕ ಬದುಕಿನ ಸಾಧಕ ಎಂದು ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ನುಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಫಲವಾಗಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಆರ್‌ಎಲ್‌ಎಸ್ ಕಾಲೇಜು ಪ್ರಾಚಾರ್ಯ ಅಶೋಕ ಶಿಂಗೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳು ವಿದ್ಯಾರ್ಥಿಗಳ ಮೂಲಕ ಇಂದು ಫಲ ಕೊಡುತ್ತಿವೆ. ಪ್ರಶಸ್ತಿ, ಪುರಸ್ಕಾರ ಹಾಗೂ ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳನ್ನು ನಿಭಾಯಿಸಿಕೊಂಡು ಹೋಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಶಿಂಗೆ, ಪ್ರಶಸ್ತಿ ಒಬ್ಬನಿಗೆ ಸಲ್ಲದು. ನಾನು ಕೇವಲ ನೆಪಕ್ಕೆ ಮಾತ್ರವಿದ್ದು, ವೃತ್ತಿ ಬಾಂಧವರಿಗೆ ಸಲ್ಲಬೇಕು. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಶೈಕ್ಷಣಿಕ ಚಿಂತನೆ ಹಾಗೂ ಮಾರ್ಗದರ್ಶನದ ಮೂಲಕ ಆಡಳಿತ ನಡೆಸುತ್ತಿದ್ದು, ಕಾಲೇಜನ್ನು ಮಾದರಿ ಕಾಲೇಜು ಆಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ ಎಂದರು.
ಆಡಳಿತ ಮಂಡಳಿ ಸದಸ್ಯ ಕರಣ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ವಿ.ವಿ. ಹೆಬ್ಬಳ್ಳಿ, ಎಸ್.ಸಿ. ಹೆಗಡೆ ಮಾತನಾಡಿದರು. ಉಪ ಪ್ರಾಚಾರ್ಯ ಬಿ.ಎಂ. ಸುರೇಬಾನ, ಶಿವಶಂಕರಪ್ಪ ಹಂಪಣ್ಣವರ, ರವೀಂದ್ರ ವಸ್ತ್ರದ, ಡಾ. ಜೆ.ಸಿ. ಕುಂಬಾರ, ದೀಪಾ ಬಿಲ್ಲೆ ಇದ್ದರು.
--