ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೇಗಿಲು ಸುಖವಾಗಿ ಉಳಲಿ ಕೃತಿ ಬಿಡುಗಡೆ ನಾಳೆ

Vishwanath S
Updated On : 14 Sept 2013, 11:53 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 13
ಸಮಗ್ರ ಕೃಷಿಗೆ ಹೊರಳಲು ಬೇಕಾದ ತಾತ್ವಿಕ ಹಿನ್ನೆಲೆ, ಸಮಗ್ರ ಕೃಷಿಯ ವಿಶ್ಲೇಷಣಾತ್ಮಕ ಒಳನೋಟಗಳನ್ನು ಹೊಂದಿ ತಮ್ಮ ಕಳೆದ 15 ವರ್ಷಗಳ ಅನುಭವ, ನಿರೀಕ್ಷಣೆ ಆಧರಿಸಿ ಡಾ. ಪ್ರಕಾಶ ಭಟ್ ಅವರು ನೇಗಿಲು ಸುಖವಾಗಿ ಉಳಲಿ ಎಂಬ ವಿಶಿಷ್ಟ ಕೃತಿ ರಚಿಸಿದ್ದು, ಸೆ. 15ರಂದು ಬಿಡುಗಡೆ ಸಮಾರಂಭ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಸಂಚಾಲಕ ಡಾ. ಸಂಜೀವ ಕುಲಕರ್ಣಿ, ಅರಣ್ಯ ಇಲಾಖೆ ಸಹಕಾರದಿಂದ ಪುಸ್ತಕ ಪ್ರಕಟವಾಗಿದ್ದು 15ರ ಸಂಜೆ 6ಕ್ಕೆ ದೀನಬಂಧು ಸಂಸ್ಥೆಯ ಜಿ.ಎಸ್. ಜಯದೇವ ಅವರಿಂದ ಬಿಡುಗಡೆಗೊಳ್ಳಲಿದೆ. ಹಿರಿಯ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರು ಅತಿಥಿಯಾಗಿ ಭಾಗವಹಿಸಲಿದ್ದು, ಅರಣ್ಯ ಇಲಾಖೆ ಸಂಶೋಧನಾ ವಿಭಾಗದ ಅಧಿಕಾರಿ ಮನೋಜಕುಮಾರ ಅಧ್ಯಕ್ಷತೆ ವಹಿಸುತ್ತಾರೆ. ಈ ಸಮಾರಂಭಕ್ಕೂ ಮುಂಚೆ ಹಳ್ಳಿ, ಕೃಷಿ ಮತ್ತು ಶಿಕ್ಷಣ ಇಂದಿನ ಸವಾಲುಗಳ ಬಗ್ಗೆ ಮಧ್ಯಾಹ್ನ 2 ರಿಂದ 6ರ ವರೆಗೆ ವಿಶೇಷ ಚಿಂತನಗೋಷ್ಠಿ ಸಹ ಹಮ್ಮಿಕೊಳ್ಳಲಾಗಿದೆ ಎಂದು ಸಂಜೀವ ಕುಲಕರ್ಣಿ ಹೇಳಿದರು.
ಪುಸ್ತಕದ ಕುರಿತು ಮಾತನಾಡಿದ ಲೇಖಕ ಡಾ. ಪ್ರಕಾಶ ಭಟ್, ಒಕ್ಕಲುತನದ ಇಂದಿನ ಸ್ಥಿತಿ ನೆಮ್ಮದಿಯದಂತೂ ಅಲ್ಲ. ನೇಗಿಲು ಸುಖವಾಗಿ ಉಳಲಿ ಎಂಬುದು ಇಡೀ ಸಮಾಜದ ನೆಮ್ಮದಿಯನ್ನೇ ಲಕ್ಷ್ಯವಾಗಿಟ್ಟು ಹುಟ್ಟಿದ ಪುರಾತನ ಆಶಯ. ನೇಗಿಲಿನ ಸುಖ ಮರೆಯಾಗುತ್ತಿರುವುದು ಇಂದಿನ ವಿದ್ಯಮಾನ. ಹಳ್ಳಿಯ ಜೀವನ ಎಲ್ಲವೂ ಕೊರಳಿಗೆ ಕಟ್ಟಿದ ಭಾರದಂತೆ ಭಾಸವಾಗುತ್ತಿದೆ. ಬಯಸಿ ಹಳ್ಳಿಗಳಲ್ಲಿರುವುದಕ್ಕಿಂತ ಹೆಚ್ಚು ಮಂದಿ ಅನಿವಾರ್ಯವಾಗಿರುವಂತೆ ಕಾಣುತ್ತಿದೆ. ಎಲ್ಲರೂ ಬದುಕಲು ಬೇಕಾದ ಕೃಷಿ ಯಾರಿಗೂ ಬೇಡವಾದ ಉದ್ಯೋಗವಾಗಿ ಕಾಣಿಸುತ್ತಿದೆ. ಆದ್ದರಿಂದ ನನ್ನದೇಯಾದ ಅನುಭವಗಳ ಅನುಸಂಧಾನದ ಮೇಲೆ ಈ ಕೃತಿ ರಚಿಸಿದ್ದೇನೆ ಎಂದರು.
ಜನತಂತ್ರವಾಗಿರಲಿ: ಸಮಗ್ರ ಕೃಷಿ ವಿವಿಧ ಅಂಗಗಳು, ಅವುಗಳ ನಡುವಿನ ಸಂಬಂಧ, ಅವು ಹೇಗಿದ್ದರೆ ಕೃಷಿ ಸುಸ್ಥಿರ, ಲಾಭದಾಯಕ ಹಾಗೂ ಪರಿಸರ ಸ್ನೇಹಿಯೂ ಒಟ್ಟಿಗೆ ಆಗಲು ಸಾಧ್ಯ ಎನ್ನುವ ಹೊಳಹುಗಳು ಪುಸ್ತಕದಲ್ಲಿದೆ. ಸರ್ಕಾರ ಕೋಟಿಗಟ್ಟಲೇ ಖರ್ಚು ಮಾಡಿ ಸಂಶೋಧನೆಗಳನ್ನು ನಡೆಸುತ್ತಿದೆ. ಕೃಷಿ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಬರೀ ತಂತ್ರಜ್ಞಾನ ಕೇಂದ್ರವಾಗಿದ್ದರಿಂದ ರೈತರಿಗೆ ಮುಟ್ಟದೇ ರೈತನಿಗೆ ನೇಗಿಲು ಭಾರವಾಗಿದೆ. ಈ ಹಿನ್ನೆಲೆಯಲ್ಲಿ ಸಂಶೋಧನೆಗಳು ಜನತಂತ್ರವಾಗಿದ್ದು, ಕೃಷಿಯಲ್ಲಿ ರೈತ ಮತ್ತಷ್ಟು ಆಸಕ್ತನಾಗಬೇಕಾದ ಅಗತ್ಯವಿದೆ ಎಂದರು.
ಅರಣ್ಯ ಇಲಾಖೆ ಸಂಶೋಧನಾ ವಿಭಾಗದ ಅಧಿಕಾರಿ ಮನೋಜಕುಮಾರ, ಸಂಶೋಧನೆಗಳು ರೈತರಿಗೆ ಮುಟ್ಟಿದರೆ ಮಾತ್ರ ಅವು ಸಾರ್ಥಕತೆ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಪುಸ್ತಕ ರೂಪದಲ್ಲಿರುವ ಪ್ರಕಾಶ ಭಟ್ ಅವರು ಕೃಷಿ ಅನುಭವಕ್ಕೆ ಇಲಾಖೆ ಸಹಕಾರ ನೀಡಿದೆ. ಇದೇ ರೀತಿಯ ಇನ್ನೂ ಸಂಶೋಧನೆಯ ಮೂರು ಕೃತಿಗಳಿಗೆ ಇಲಾಖೆಯು ಆರ್ಥಿಕ ಸಹಕಾರ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.
ಒಕ್ಕಲುತನದ ಇಂದಿನ ಸ್ಥಿತಿ ನೆಮ್ಮದಿಯದಂತೂ ಅಲ್ಲ. ನೇಗಿಲು ಸುಖವಾಗಿ ಉಳಲಿ ಎಂಬುದು ಇಡೀ ಸಮಾಜದ ನೆಮ್ಮದಿಯನ್ನೇ ಲಕ್ಷ್ಯವಾಗಿಟ್ಟು ಹುಟ್ಟಿದ ಪುರಾತನ ಆಶಯ. ನೇಗಿಲಿನ ಸುಖ ಮರೆಯಾಗುತ್ತಿರುವುದು ಇಂದಿನ ವಿದ್ಯಮಾನ. ಹಳ್ಳಿಯ ಜೀವನ ಎಲ್ಲವೂ ಕೊರಳಿಗೆ ಕಟ್ಟಿದ ಭಾರದಂತೆ ಭಾಸವಾಗುತ್ತಿದೆ. ಬಯಸಿ ಹಳ್ಳಿಗಳಲ್ಲಿರುವುದಕ್ಕಿಂತ ಹೆಚ್ಚು ಮಂದಿ ಅನಿವಾರ್ಯವಾಗಿರುವಂತೆ ಕಾಣುತ್ತಿದೆ.
- ಡಾ. ಪ್ರಕಾಶ ಭಟ್, ಲೇಖಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement