ಮುಂಗಾರು ಬೆಳೆಗೆ ಕುತ್ತಾದ ಮಳೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 13
ವಿಪರೀತ ಕೃಷಿ ಕಾರ್ಮಿಕರ ಕೊರತೆ ಮಧ್ಯೆಯೂ ರೈತರು ಹೊಲಗಳನ್ನು ಸ್ವಚ್ಛಗೊಳಿಸಿ, ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಬೀಜ-ಗೊಬ್ಬರ ಖರೀದಿಸಿ, ನಿರೀಕ್ಷೆ ಹೊತ್ತು ಬಿತ್ತಿದ ಭೂಮಿಯು ಫಲ ಕೊಡದಿದ್ದರೆ ಆತನಿಗಾಗುವ ಸಂಕಟ ಮತ್ಯಾರಿಗಿಲ್ಲ.
ಕಳೆದ ನಾಲ್ಕೈದು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆರಾಯ, ಕೈ ಬಂದ ತುತ್ತು ಬಾಯಿಗೆ ಸಿಗದಂತೆ ಮಾಡಿಯಾನು ಎಂಬ ಆತಂಕದಲ್ಲಿ ಧಾರವಾಡ ಜಿಲ್ಲೆಯ ರೈತರಿದ್ದಾರೆ. ಹೈದರಾಬಾದ್ ಕರ್ನಾಟಕದ ತುಂಬೆಲ್ಲಾ ವಿಪರೀತ ಮಳೆಯಾಗುತ್ತಿದ್ದು, ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಇಡೀ ಉತ್ತರ ಕರ್ನಾಟಕದ ಭಾಗದಲ್ಲೂ ಮಳೆಯ ಅರ್ಭಟ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದೆರಡು ವರ್ಷಗಳಿಂದ ಬರಗಾಲದಿಂದ ಮೆತ್ತಗಾಗಿದ್ದ ಜಿಲ್ಲೆಯ ರೈತರಿಗೆ ಈ ವರ್ಷದ ಮುಂಗಾರು ತುಸು ನಿರೀಕ್ಷೆ ಹುಟ್ಟಿಸಿದ್ದು, ಬಿತ್ತನೆ ಹಾಗೂ ನಂತರದ ಸಮಯದಲ್ಲೂ ಸರಿಯಾದ ಸಮಯಕ್ಕೆ ಮಳೆಯಾಗಿತ್ತು. ಅಲ್ಲದೇ, ಈಗ ಬೆಳೆಗಳೂ ಕಟಾವಿಗೆ ಬಂದಿವೆ. ಇನ್ನೇನು ಕಟಾವು ಮಾಡಲು ಸಿದ್ಧತೆಯಲ್ಲಿದ್ದ ರೈತನಿಗೆ ನಾಲ್ಕೈದು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆ ಅವಕಾಶ ಕೊಡದೆ ಬೆಳೆಗಳು ಹಾನಿಗೊಳಗಾಗುತ್ತವೆಯೇ ಎಂಬ ಭಯ ರೈತನಿಗೆ ಶುರುವಾಗಿದೆ.
ಯಾವ ಬೆಳೆಗಳಿಗೆ ಹಾನಿ: ಈ ಮಳೆಯಿಂದ ಈಗಾಗಲೇ ಬಿತ್ತನೆಯಾಗಿರುವ ಬತ್ತ, ಕಬ್ಬು, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳಿಗೆ ಅನುಕೂಲವಾಗಲಿದ್ದು, ಸದ್ಯ ಕಟಾವಿನಲ್ಲಿರುವ ಶೇಂಗಾ, ಆಲೂಗಡ್ಡೆ, ಸೋಯಾಅವರೆ, ಗೋವಿನ ಜೋಳ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಅಲ್ಪ ಪ್ರಮಾಣದ ಹೆಸರಿನ ಬೆಳೆಗೆ ತೊಂದರೆ ಆಗಲಿದೆ. ಕಟಾವಿನ ವೇಳೆ ಮಳೆಯಾದರೆ ಆಲೂಗಡ್ಡೆ ಕೊಳೆಯುತ್ತದೆ. ಶೇಂಗಾ ಹಾಗೂ ಸೋಯಾಅವರೆ ಮೊಳಕೆಯೊಡೆಯುತ್ತವೆ ಹಾಗೂ ಗೋವಿನ ಜೋಳದ ಬಣ್ಣವೇ ಬದಲಾಗುತ್ತದೆ. ಹೀಗಾದರೆ ಈ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇರೋದಿಲ್ಲ. ಆದ್ದರಿಂದ ಒಂದು ವಾರ ರೈತರಿಗೆ ಮಳೆರಾಯ ಸಮಯ ಕೊಟ್ಟರೆ ಸಾಕು ಕಟಾವು ಕೆಲಸ ಮುಗಿಸಿ ಬಿಡುತ್ತೇವೆ. ಇಲ್ಲದಿದ್ದರೆ ತುಂಬ ನಷ್ಟವಾಗುತ್ತದೆ. ನಂತರದಲ್ಲಿ ಮಳೆಯಾದರೆ ಪರವಾಗಿಲ್ಲ. ಹಿಂಗಾರಿಗೂ ಅನುಕೂಲ ಎನ್ನುತ್ತಾರೆ ಜಿಲ್ಲೆಯ ರೈತರು.
ನಾಲ್ಕೆ ದಿನಗಳಲ್ಲಿ 56.51 ಮಿ.ಮೀ. ಮಳೆ:ಜಿಲ್ಲೆಯ ಕಲಘಟಗಿ, ನವಲಗುಂದ ಹಾಗೂ ಧಾರವಾಡ ತಾಲೂಕಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿರುವ ಅಂದರೆ ಒಟ್ಟು 39,838 ಹೆಕ್ಟೇರ್ ಪ್ರದೇಶದಲ್ಲಿನ ಗೋವಿನ ಜೋಳ ಬೆಳೆ ಕಟಾವಿಗೆ ಬಂದಿದೆ. ಧಾರವಾಡ ಹಾಗೂ ಕಲಘಟಗಿ ತಾಲೂಕಿನಲ್ಲಿಯೇ ಹೆಚ್ಚಿರುವ ಸೋಯಾಅವರೆ ಒಟ್ಟು 34,262 ಹೆಕ್ಟೇರ್ ಪ್ರದೇಶದಲ್ಲಿದೆ. ಹಾಗೆಯೇ, ಸುಮಾರು 15 ಸಾವಿರ ಹೆಕ್ಟೇರ್ನಲ್ಲಿ ಆಲೂಗಡ್ಡೆ ಬೆಳೆದು ನಿಂತಿದೆ. ಇನ್ನುಳಿದಂತೆ ಸ್ವಲ್ಪ ಪ್ರಮಾಣದಲ್ಲಿ ಉದ್ದು, ಅಲಸಂದಿ ಅಂತಹ ಬೆಳೆಗಳು ಕಟಾವಿಗೆ ಬಂದಿವೆ. ಈ ಸಂದರ್ಭದಲ್ಲಿ ನಿತ್ಯ ಮಳೆರಾಯ ಬಂದು ಹೋಗುತ್ತಿದ್ದಾನೆ. ಕಳೆದ ನಾಲ್ಕೆ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರಾಸರಿ 56.51 ಮಿ.ಮೀ. ರಷ್ಟು ಮಳೆಯಾಗಿರುವುದು ಕೃಷಿ ಇಲಾಖೆಯಿಂದ ತಿಳಿದು ಬಂದಿದೆ. ಕಟಾವಿಗೆ ಬಂದ ಬೆಳೆ ತೆಗೆಯದಿದ್ದರೆ ಅಪಾರ ಪ್ರಮಾಣದ ಹಾನಿ ನಿಶ್ಚಿತ. ಅಲ್ಲದೇ, ಹಿಂಗಾರಿ ಬಿತ್ತನೆ ಸಿದ್ಧತೆಯೂ ತಡವಾಗುತ್ತದೆ. ಒಟ್ಟಿನಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿಯ ಪರಿಣಾಮದಿಂದ ರೈತ ಮಾತ್ರ ಪ್ರತಿ ವರ್ಷ ಗೋಳು ಅನುಭವಿಸುವುದು ಇದ್ದೇ ಇದೆ. ಇಷ್ಟು ಮಾತ್ರಕ್ಕೆ ಮಳೆರಾಯ ಸುಮ್ಮನಾದರೆ ಉತ್ತಮ. ಇಲ್ಲದಿದ್ದರೆ ಈ ವರ್ಷವೂ ಜಿಲ್ಲೆಯ ರೈತರ ಸ್ಥಿತಿ ಕಷ್ಟದಾಯಕ.
ನಿರಂತರವಾದರೆ ಕಷ್ಟ
ಸೆಪ್ಟೆಂಬರ್ ವರೆಗೆ ವಾಡಿಕೆಯ ಶೇ. 100ರಷ್ಟು (539.3) ಮಳೆಯಾಗಿದ್ದು, ಹೊಲಗಳಲ್ಲಿ ನೀರು ನಿಲ್ಲುವಂತೆ ಇನ್ನೂ ನಾಲ್ಕೈದು ದಿನ ನಿರಂತರವಾಗಿ ಮಳೆಯಾದರೆ ಜಿಲ್ಲೆಯ ಆಲೂಗಡ್ಡೆ, ಶೇಂಗಾ, ಸೋಯಾ ಹಾಗೂ ಗೋವಿನ ಜೋಳ ಬೆಳೆಗಳಿಗೆ ಹಾನಿ ನಿಶ್ಚಿತ. ಆದರೆ, ನಾಲ್ಕು ದಿನಗಳಿಂದ ಸುರಿದ ಮಳೆಗೆ ತುಸು ಪ್ರಮಾಣದ ಹಾನಿಯಾಗುತ್ತದೆ. ಒಂದು ವೇಳೆ ಈ ಮಳೆ ಮುಂದುವರಿದರೆ ಕಷ್ಟ.
-ಎಸ್.ಎಂ. ಗಡಾದ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ