ಸಿಲಿಂಡರ್ ಬೇಕಾದರೆ ಆಧಾರ್ ಕೊಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 13
ಕೇಂದ್ರ ಸರ್ಕಾರ ರಾಜ್ಯದಲ್ಲಿ 3ನೇ ಹಂತದ ಆಧಾರ್ ಯೋಜನೆ ಜಾರಿಗೆ ಧಾರವಾಡ ಮತ್ತು ಉಡುಪಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಅಕ್ಟೋಬರ್ 1ರ ಹೊತ್ತಿಗೆ ಎಲ್ಲ ಸಿಲಿಂಡರ್ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಲೇಬೇಕು.
ಇಲ್ಲದಿದ್ದಲ್ಲಿ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕಾದ ಪರಿಸ್ಥಿತಿಗೆ ತಲೆಯೊಡ್ಡಬೇಕಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಎರಡು ಹಂತದಲ್ಲಿ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಆಧಾರ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. 3ನೇ ಹಂತದಲ್ಲಿ ಧಾರವಾಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಅಕ್ಟೋಬರ್‌ನೊಳಗೆ ಯೋಜನೆ ಅನುಷ್ಠಾನ ಪೂರ್ಣಗೊಳ್ಳಲಿದೆ.
ಬರೀ ಶೇ. 20ರಷ್ಟು ನೋಂದಣಿ: ಕೇಂದ್ರ ಸರ್ಕಾರದ ಆಧಾರ್ ನೋಂದಣಿ ಪ್ರಾಧಿಕಾರದ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಶೇ. 90ಕ್ಕಿಂತ ಹೆಚ್ಚು ನೋಂದಣಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಧಾರವಾಡ ಜಿಲ್ಲೆಯ ಎಲ್ಲ ವಿತರಕರಲ್ಲಿ ಶೇ. 20ಕ್ಕಿಂತ ಕಡಿಮೆ ಗ್ರಾಹಕರು ತಮ್ಮ ಆಧಾರ್ ಸಂಖ್ಯೆ ನೀಡಿದ್ದಾರೆ. ಗ್ರಾಹಕರಲ್ಲಿ ಅರಿವಿನ ಕೊರತೆ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಎಲ್ಲರೂ ಮುಗಿಬಿಳುವ ಸಾಧ್ಯತೆ ಇದ್ದು, ಆದಷ್ಟು ಬೇಗ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಸಿಲಿಂಡರ್ ವಿತರಕರ ಬಳಿ ಮತ್ತು ಬ್ಯಾಂಕಿಗೆ ಸಲ್ಲಿಸಬೇಕು. ಆದರೆ, ಈ ನಿಟ್ಟಿನಲ್ಲಿ ಇದುವರೆಗೂ ಗ್ರಾಹಕರು ಎಚ್ಚೆತ್ತುಕೊಳ್ಳದ ಕಾರಣ ಬಹುತೇಕ ಗ್ರಾಹಕರು ಸಿಲಿಂಡರ್‌ಗೆ ಸರ್ಕಾರ ನೀಡುವ ಸಬ್ಸಿಡಿಯಿಂದ ವಂಚಿತರಾಗಬಹುದು.
ಜಿಲ್ಲೆಯಲ್ಲಿ 3.50 ಲಕ್ಷ ಗ್ರಾಹಕರು: ಹುಬ್ಬಳ್ಳಿ, ಧಾರವಾಡ ಮತ್ತು ಅಣ್ಣಿಗೇರಿಗಳಲ್ಲಿ ಒಟ್ಟು 25ಕ್ಕಿಂತ ಹೆಚ್ಚು ವಿವಿಧ ತೈಲ ನಿಗಮಗಳ ಅಧಿಕೃತ ಸಿಲಿಂಡರ್ ವಿತರಕರಿದ್ದಾರೆ. ತಲಾ ಒಬ್ಬ ವಿತರಕರಲ್ಲಿ ಕನಿಷ್ಠ ಏನಿಲ್ಲವೆಂದರೂ ಸರಾಸರಿ 12 ಸಾವಿರ ಗ್ರಾಹಕರಿದ್ದು ಒಟ್ಟು 3.50 ಲಕ್ಷಕ್ಕೂ ಹೆಚ್ಚು ಗ್ರಾಹಕರ ಪೈಕಿ ಕೇವಲ ನಾಲ್ಕರಿಂದ-ಆರು ಸಾವಿರ ಗ್ರಾಹಕರು ಮಾತ್ರ ಆಧಾರ್ ಸಂಖ್ಯೆ ನೀಡಿದ್ದಾರೆ. ಆಧಾರ್ ಯೋಜನೆ ಜಾರಿಗೆ ಕೇವಲ ಇನ್ನೂ ಒಂದು ತಿಂಗಳು ಮಾತ್ರ ಉಳಿದಿದ್ದು, ಕೊನೆ ದಿನಗಳಲ್ಲಿ ಆಧಾರ್ ಸಂಖ್ಯೆ ನೀಡುವುದಕ್ಕೆ ವಿತರಕರ ಅಂಗಡಿಗಳ ಎದುರು ಜನರು ಸಾಲುಗಟ್ಟಿ ನಿಲ್ಲಬೇಕಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಏನೇನು ಸಲ್ಲಿಸಬೇಕು: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಆಧಾರ್ ಕಾರ್ಡ್ ಪಡೆಯುವುದಕ್ಕೆ ಒಂದು ವೇಳೆ ಜನರು ನೋಂದಾಯಿಸಿಕೊಂಡಿದ್ದು ಮತ್ತು ಅಂತಹವರಿಗೆ ಆಧಾರ್ ಕಾರ್ಡ್ ಇನ್ನೂ ಲಭಿಸದೇ ಇದ್ದಲ್ಲಿ, ಹು-ಧಾ ಒನ್ ಸೆಂಟರ್‌ನಲ್ಲಿ ಆಧಾರ್ ನೋಂದಣಿ ಸಂಖ್ಯೆ ನೀಡಿದರೆ ಅಲ್ಲಿನ ಸಿಬ್ಬಂದಿ ನೀಡುವ ಆಧಾರ್ ಕಾರ್ಡ್ ಮುದ್ರಿತ ಪ್ರತಿಯನ್ನು ಸಿಲಿಂಡರ್ ವಿತರಕರಿಗೆ ಮತ್ತು ಬ್ಯಾಂಕಿಗೆ ಸಲ್ಲಿಸಿದರೆ ಮುಗಿಯಿತು. ಆದರೆ, ನೋಂದಣಿ ಸಂದರ್ಭದಲ್ಲಿ ಆಧಾರ್ ಸಿಬ್ಬಂದಿ ನೀಡಿದ ಸ್ವೀಕೃತಿ ಪತ್ರ ಇದಕ್ಕೆ ಅನ್ವಯವಾಗುವುದಿಲ್ಲ. ಏನಿದ್ದರೂ ಪಕ್ಕಾ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿನೇ ಆಗಬೇಕು.
ಆಧಾರ್ ಯೋಜನೆ ಅತ್ತ್ಯುತ್ತಮ ಯೋಜನೆಯಾಗಿದ್ದು, ಈ ಯೋಜನೆಯ ಮುಖಾಂತರ ಬೋಗಸ್ ಸಿಲಿಂಡರ್ ಬುಕ್ಕಿಂಗ್, ಬೋಗಸ್ ಡಿಲೇವರಿ ಸೇರಿದಂತೆ ಇನ್ನಿತರ ಅಕ್ರಮಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದು.
ಒಬ್ಬರು ಅಥವಾ ಇಬ್ಬರು ಇರುವ ಕುಟಂಬವೊಂದಕ್ಕೆ ಪೂರೈಸುವ ಸಿಲಿಂಡರ್ ಕನಿಷ್ಠ ಎರಡು ತಿಂಗಳು ಬರುತ್ತದೆ. ಆದರೆ, ಎರಡು ಸಿಲಿಂಡರ್ ಸೌಲಭ್ಯ ಇರುವ ಕೆಲವು ಗ್ರಾಹಕರು ಸಬ್ಸಿಡಿಯಲ್ಲಿ ಸಿಲಿಂಡರ್ ಖರೀದಿಸಿ ಹೊಟೇಲ್, ಆಟೋರಿಕ್ಷಾಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಸಂಗತಿ ಎಲ್ಲ ತೈಲ ಕಂಪನಿಗಳು ನಡೆಸಿರುವ ಸಮೀಕ್ಷೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆಯನ್ನು ಸಿಲಿಂಡರ್ ವಿತರಣೆಗೆ ಬಳಸಿಕೊಳ್ಳಲಾಗುತ್ತಿದೆ.
ಗ್ರಾಹಕರಿಗೆ ಒಂದಿಷ್ಟು ಟಿಪ್ಸ್
ಟ ಆಧಾರ್ ಕಾರ್ಡ್ ನೀಡದೇ ಇದ್ದರೆ ಸಬ್ಸಿಡಿ ಬದಲಾಗಿ ಸುಮಾರು ರು. 900ರಷ್ಟು ಬೆಲೆ ತೆತ್ತು ಸಿಲಿಂಡರ್ ಪಡೆಯಬೇಕಾದೀತು.
ಟ ಸಿಲಿಂಡರ್ ವಿತರಕರಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಗಳನ್ನು ನೀಡಿ.
ಟ ಅಕ್ಟೋಬರ್ 1ರೊಳಗೆ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದ್ದರಿಂದ ಅವಧಿಗೆ ಮುಂಚೆಯೇ ಈ ಕಾರ್ಯ ಮಾಡಿ.
ಟ ಕೊನೆ ಕ್ಷಣದಲ್ಲಿ ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವುದು ತಪ್ಪಬೇಕೆಂದರೆ ತಕ್ಷಣ ಕಾರ್ಯಪ್ರವೃತ್ತರಾಗಿ
ಟ ಹೊಟೇಲ್, ಆಟೋರಿಕ್ಷಾಗಳಿಗೆ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸುವ ಜೊತೆಗೆ ಗ್ರಾಹಕರಿಗೆ ಸಕಾಲಕ್ಕೆ ಸಿಲಿಂಡರ್ ಲಭ್ಯವಾಗಲಿ ಎನ್ನುವುದು ಈ ಯೋಜನೆಯ ಉದ್ದೇಶ.
ಆಧಾರ್ ವ್ಯವಸ್ಥೆ ಕೆಲಸ ಹೀಗಿದೆ...
ಬಹುತೇಕ ಜನರಲ್ಲಿ ಇರುವ ನಂಬಿಕೆ ಎಂದರೆ, ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ನ್ನು ಗ್ರಾಹಕರು ಖರೀದಿಸಿದ ನಂತರ ಸರ್ಕಾರ ಸಬ್ಸಿಡಿ ಹಣವನ್ನು ನಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಇದು ಸರ್ಕಾರಿ ಕೆಲಸ ಸಬ್ಸಿಡಿ ಹಣ ಜಮಾ ಮಾಡಿದರೆ ಮಾಡಿದ್ರು ಬಿಟ್ಟರೆ ಬಿಟ್ಟರು ಹೇಳಲಿಕ್ಕಾಗುವುದಿಲ್ಲ ಎಂಬಂತಿದೆ. ಆದರೆ, ಜನರ ಈ ನಂಬಿಕೆ ತಪ್ಪು ಎನ್ನುತ್ತಾರೆ ಭಾರತ್ ಗ್ಯಾಸ್ ವಿತರಕ ಅನೂಪಚಂದ್ ಗರಗಟ್ಟೆ. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಗ್ರಾಹಕ ಸಿಲಿಂಡರ್ ಬುಕ್ ಮಾಡಿದ ಮರುದಿನವೇ ಒನ್ ಟೈಮ್ ಇನ್ವೆಸ್ಟ್‌ಮೆಂಟ್ ಮಾದರಿಯಲ್ಲಿ ರು. 435 ಗಳನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಒಂದು ಐದು ದಿನಗಳ ನಂತರ ಗ್ರಾಹಕನಿಗೆ ಸಿಲಿಂಡರ್ ಪೂರೈಸಲಾಗುತ್ತದೆ. ಆ ಸಂದರ್ಭ ಗ್ರಾಹಕನು ಮಾರುಕಟ್ಟೆ ದರ ನೀಡಿ ಸಿಲಿಂಡರ್ ಖರೀದಿಸುತ್ತಾನೆ. ಖರೀದಿ ನಂತರ ಮಾರನೇ ದಿನ ಸರ್ಕಾರ ವಾಸ್ತವಿಕ ಸಬ್ಸಿಡಿ ಮೊತ್ತವನ್ನು ಮುಂದಿನ ಬಾರಿಯ ಸಿಲಿಂಡರ್ ಖರೀದಿಗೆ ಗ್ರಾಹಕನ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ಮೊದಲನೇ ಬಾರಿ ಸಿಲಿಂಡರ್ ಬುಕ್ ಮಾಡಿದ ಮರುದಿನವೇ ಗ್ರಾಹಕನ ಖಾತೆಗೆ ಹಣ ಜಮಾ ಆಗುತ್ತದೆ. ಹೀಗಾಗಿ ಜನ ಮೋಸ ಹೋಗುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ ಅವರು.
ಗರಗಟ್ಟೆ ಏಜೆನ್ಸಿಯಲ್ಲಿ ನೋಂದಣಿ
ಗ್ರಾಹಕರಿಗೆ ಅನುಕೂಲವಾಗುವಂತೆ ಗರಗಟ್ಟೆ ಗ್ಯಾಸ್ ಏಜೆನ್ಸಿ ಮಾಲೀಕ ಅನೂಪಚಂದ್ ಗರಗಟ್ಟೆ ಅವರು, ತಮ್ಮ ಅಂಗಡಿಯಲ್ಲಿ ಆಧಾರ್ ನೋಂದಣಿ ಕೇಂದ್ರ ಆರಂಭಿಸಿದ್ದಾರೆ. ಆದರೆ, ನೋಂದಣಿ ಸಂಖ್ಯೆ ಅತ್ಯಂತ ಕಡಿಮೆ ಇದ್ದು, ಜನರಿಂದ ಪ್ರತಿಕ್ರಿಯೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆಧಾರ್ ನೋಂದಣಿಗೆ ವೇಗ ನೀಡುವ ನಿಟ್ಟಿನಲ್ಲಿ ಸಿಲಿಂಡರ್ ಬಿಲ್‌ಗಳ ಮೇಲೂ ನಿಮ್ಮ ಆಧಾರ್ ಕಾರ್ಡ್ ಎಂದು ಮುದ್ರೆ ಹಾಕಿ ಡೆಲಿವರಿ ಬಾಯ್ ಜೊತೆಗೆ ಕಳುಹಿಸಿಕೊಡುತ್ತಿದ್ದರೂ ಜನರು ಇನ್ನೂ ಆಧಾರ್ ಸಂಖ್ಯೆಯನ್ನು ವಿತರಕರ ಬಳಿ ನೋಂದಾಯಿಸಿಕೊಳ್ಳುತ್ತಿಲ್ಲ. ಆಧಾರ್ ನೋಂದಣಿಯಾಗದವರು ಉಳಿದಿದ್ದರೆ ತಕ್ಷಣ ದೇಶಪಾಂಡೆ ನಗರದಲ್ಲಿರುವ ಗರಗಟ್ಟೆ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಆಧಾರ್ ಯೋಜನೆಯ 3ನೇ ಹಂತದಲ್ಲಿ ರಾಜ್ಯದ ಧಾರವಾಡ, ಉಡುಪಿ ಜಿಲ್ಲೆಗಳನ್ನು ಆಧಾರ್ ವಿಶಿಷ್ಟ ಗುರುತು ಪ್ರಾಧಿಕಾರ ಆಯ್ಕೆ ಮಾಡಿಕೊಂಡಿದೆ. ಯೋಜನೆಯಡಿ ಸಬ್ಸಿಡಿ ಸಿಲಿಂಡರ್ ಪಡೆಯಬೇಕೆಂದರೆ ಗ್ರಾಹಕರು ಅಕ್ಟೋಬರ್ 1ರೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಸಿಲಿಂಡರ್ ವಿತರಕರಿಗೆ, ತಾವು ಖಾತೆ ಹೊಂದಿದ ಬ್ಯಾಂಕ್‌ಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಗ್ರಾಹಕರು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತದೆ.
-ಸತೀಶ ಪಾಗಾದ