ಅವ್ಯವಸ್ಥೆ ಆಗರ ಇನ್ಕಮೆಕ್ಸ್
ಹುಬ್ಬಳ್ಳಿ: 6 ವರ್ಷಗಳ ಹಿಂದೆ ನೆಹರು ಮೈದಾನದಲ್ಲಿ ನಡೆದ ಇನ್ಕಮೆಕ್ಸ್ಗೂ ಎಪಿಎಂಸಿ ಆವರಣದಲ್ಲಿನ ಶಾಶ್ವತ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಇನ್ಕಮೆಕ್ಸ್ಗೂ ಅಜಗಜಾಂತರ ವ್ಯತ್ಯಾಸ. ಒಟ್ಟಾರೆ ಇಡಿ ವ್ಯವಸ್ಥೆ ಗಬ್ಬೆದ್ದು ಹೋಗಿದೆ ಎಂಬ ಮಾತುಗಳು ಇನ್ಕಮೆಕ್ಸ್ನಲ್ಲಿ ಕೇಳಿ ಬರುತ್ತಿವೆ.
ಭಾನುವಾರ ಇನ್ಕಮೆಕ್ಸ್ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಎರಡನೇ ದಿನವಾಗಿದ್ದು, ಇನ್ನೂ ಅಲ್ಲಲ್ಲಿ ನಡೆಯುತ್ತಿರುವ ಕೆಲಸಗಳು ಈಗ ಬರುತ್ತಿರುವ ಕೆಲವು ಕೈಗಾರಿಕೋದ್ಯಮಿಗಳು ತಮ್ಮ ಮಳಿಗೆ ಹಾಕುತ್ತಿದ್ದಾರೆ. ಶನಿವಾರ ಬೆಳಗ್ಗೆ ಮಳಿಗೆ ಹಾಕುವುದಕ್ಕೆ ಬಂದಿದ್ದ ಕೆಲವು ಕೈಗಾರಿಕೋದ್ಯಮಿಗಳು ಉದ್ಘಾಟನಾ ಕಾರ್ಯಕ್ರಮ ವಿಳಂಬ ಮತ್ತು ಮಹನೀಯರ ಭಾಷಣಗಳಿಂದ ಬೇಸತ್ತು, ನಾಳೆ ಬಂದರಾಯಿತು ಎಂದು ಎದ್ದು ಹೋಗಿದ್ದರು.
7್ಗ6 ಅಡಿ ಮಳಿಗೆಗೆ ಇನ್ಕಮೆಕ್ಸ್ ಕಾರ್ಯಕಾರಿ ಸಮಿತಿ ರು. 8500 ಶುಲ್ಕ ನಿಗದಿಪಡಿಸಿದೆ. ಶನಿವಾರವೇ 300ಕ್ಕೂ ಹೆಚ್ಚು ಮಳಿಗೆಗಳು ನೋಂದಣಿಯಾಗಿದ್ದವು. ಆದಾಗ್ಯೂ ಪ್ರದರ್ಶನ ಮೊದಲನೇ ದಿನ ಉದ್ಘಾಟನೆ ಮತ್ತಿತರ ಕೆಲಸಗಳಲ್ಲಿ ಕಳೆದು ಹೋಗಿದ್ದರೆ ಸಂಜೆ ಸುರಿದ ಮಳೆ ಗ್ರಾಹಕರು ಪ್ರದರ್ಶನದತ್ತ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಏತನ್ಮಧ್ಯೆ ಎರಡನೇ ದಿನ ವಹಿವಾಟು ಕುದುರಬಹುದು ಎಂದು ಅನೇಕ ವ್ಯಾಪಾರಿಗಳು ನಿರೀಕ್ಷಿಸಿದ್ದಾರೆ.
ಕೈಗಾರಿಕಾ ಪ್ರದರ್ಶನದಲ್ಲಿ ಮಳಿಗೆ ಹಾಕಿರುವ ಹುಬ್ಬಳ್ಳಿಯ ಅನುಶ್ರಿ ಕಲಾತ್ಮಕ ಸೀರೆ ಕೇಂದ್ರದ ರಾಜೇಂದ್ರ ಎಸ್.ಎಚ್ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಐದು ದಿನದ ಕೈಗಾರಿಕಾ ಪ್ರದರ್ಶನದಲ್ಲಿ ಕನಿಷ್ಠ ಐದು ಲಕ್ಷ ರು. ವಹಿವಾಟು ಆಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಮೊದಲ ಎರಡು ದಿನಗಳಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ವ್ಯಾಪಾರ ಆಗಿಲ್ಲ. ಹುಬ್ಬಳ್ಳಿ ನಗರದ ನವನಗರದ ಜನರಿಗೂ ಕೂಡ ಇಂತಹದ್ದೊಂದು ಕೈಗಾರಿಕಾ ಪ್ರದರ್ಶನ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ ಪ್ರಚಾರ ಕೊರತೆ ಮತ್ತು ಸಾರಿಗೆ ಸಮಸ್ಯೆ ಈ ಬಾರಿ ವಹಿವಾಟು ನಡೆಯುವುದಕ್ಕೆ ಅವಕಾಶ ನೀಡಲಿಕ್ಕಿಲ್ಲ ಎನ್ನುತ್ತಾರೆ.
ದಾವಣಗೆರೆಯಿಂದ ಬಂದಿರುವ ಅರುಣೋದಯ ಗಾರ್ಮೆಂಟ್ಸ್ನ ರೇಖಾ ಅವರು, ಐದು ವರ್ಷಗಳ ಹಿಂದೆ ಮಹಿಳೆಯರ ಟಾಪ್ ಮತ್ತು ಚೂಡಿದಾರ ಸಿದ್ಧ ಉಡುಪು ಉದ್ಯಮ ಆರಂಭಿಸಿ ಪ್ರಥಮ ಬಾರಿಗೆ ಇನ್ಕಮೆಕ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ ನಗರ ಪ್ರದೇಶದಿಂದ ಸಾಕಷ್ಟು ದೂರ ಆಗಿರುವ ಕಾರಣ ಜನರು ಖರೀದಿಗೆ ಬರುತ್ತಿಲ್ಲ. ಆದರೂ ಇದು ಹುಬ್ಬಳ್ಳಿ. ಲಾಭ ಮಾಡಿಕೊಂಡೇ ಊರಿಗೆ ಹೋಗುತ್ತೇನೆ ಅನ್ನೋ ವಿಶ್ವಾಸ ಇದೆ ಎನ್ನುತ್ತಾರೆ ಅವರು.
ಥೇಟ್ ಉತ್ತರದ ವೈವಿಧ್ಯ: ಉ-ಕದ ವೈವಿಧ್ಯತೆಯನ್ನು ಪ್ರದರ್ಶಿಸುವುದಕ್ಕೆ ಪ್ರತ್ಯೇಕವಾಗಿ ನಿರ್ಮಿಸಿರುವ ಮಳಿಗೆ ನೋಡಲು ಹೋಗುವ ಗ್ರಾಹಕರಿಗೆ ಥೇಟ್ ಉ-ಕಕ್ಕೆ ಕಾಲಿಟ್ಟ ಅನುಭವ. ಏಕೆಂದರೆ ಮಳಿಗೆಗಳ ಪ್ರದೇಶಕ್ಕೆ ಹೋಗಬೇಕಾದರೆ ಕೆಸರಿನಲ್ಲಿ ಕಾಲಿರಿಸಿಕೊಂಡು ಹೋಗಬೇಕು. ಮಳೆಗಾಲದಲ್ಲಿ ಇಂತಹ ಕೆಸರು ರಸ್ತೆಗಳು ಉ-ಕದ ಪ್ರಮುಖ ನಗರ ಹುಬ್ಬಳ್ಳಿಯಲ್ಲಂತೂ ಸಾಮಾನ್ಯ.
ಇಂತಹ ಅವ್ಯವಸ್ಥೆಗಳಿಂದ ತುಂಬಿರುವ ಇನ್ಕಮೆಕ್ಸ್ ಕುರಿತು ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಉದ್ದೇಶ ಇಡೇರುವ ಯಾವ ಲಕ್ಷಣವೂ ಇಲ್ಲ.